ಬಂಗಾರಪೇಟೆ: ಬಂಗಾರಪೇಟೆ ಮಾಲೂರು ಹಾಗೂ ಕೋಲಾರ ನಗರಗಳಿಗೆ ಕುಡಿಯುವ ನೀರು ಪೂರೈಸುವ ಯರಗೋಳ್ ಜಲಾಶಯದಲ್ಲಿ ಮಳೆ ಕೊರತೆಯಿಂದ ನೀರಿನ ಪ್ರಮಾಣ ದಿನೇ ದಿನೆ ಕಡಿಮೆಯಾಗುತ್ತಿದ್ದು, ಜಲಾಶಯದ ಬಹುತೇಕ ಭಾಗ ಒಣಗಿದೆ. ಅಲ್ಲಲ್ಲಿ ಗಿಡಗಂಟೆಗಳು ಬೆಳೆದಿರುವುದು ಕಂಡುಬಂದಿದ್ದು ಜನರಲ್ಲಿ ಆತಂಕ ಶುರುವಾಗಿದೆ.
ಜಲಾಶಯ ನಿರ್ಮಾಣ ಅಂತಿಮ ಹಂತದ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲೇ ಉತ್ತಮ ಮಳೆಯಾದ ಕಾರಣ ಜಲಾಶಯವನ್ನು ಮೂರು ವರ್ಷಗಳ ಹಿಂದೆ ಲೋಕಾರ್ಪಣೆ ಮಾಡಲಾಗಿತ್ತು. ಜಲಾಶಯದಿಂದ ಮೂರು ನಗರಗಳಿಗೆ ನಿರಂತರವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿತ್ತು. ಆದರೆ ಈ ಬಾರಿ ಮಳೆ ಕೈಕೊಟ್ಟಿರುವುದರಿಂದ ಜಲಾಶಯದ ನೀರಿನ ಮಟ್ಟ ಗಣನೀಯವಾಗಿ ಕುಸಿದಿದೆ.ಈ ಹಿನ್ನೆಲೆಯಲ್ಲಿ ಜಲಾಶಯದ ಒಳಭಾಗದಲ್ಲಿ ಬೆಳೆದಿರುವ ಗಿಡಗಂಟೆಗಳನ್ನು ಕೂಡಲೇ ತೆರವುಗೊಳಿಸುವಂತೆ ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಈಗಲೇ ಗಿಡಗಂಟೆಗಳನ್ನು ತೆರವುಗೊಳಿಸಿದರೆ ಮುಂದಿನ ಮಳೆಗಾಲದಲ್ಲಿ ಜಲಾಶಯಕ್ಕೆ ಹರಿದುಬರುವ ನೀರನ್ನು ಸಮರ್ಪಕವಾಗಿ ಸಂಗ್ರಹಿಸಲು ಅನುಕೂಲವಾಗುತ್ತದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.ಮುಂಗಾರು ಮಳೆ ಕೈ ಕೊಟ್ಟಿರುವುದರಿಂದ ಹಿಂಗಾರು ಮಳೆಗಾಲ ಆರಂಭವಾಗುವ ಮುನ್ನವೇ ಈ ಕಾಮಗಾರಿಯನ್ನು ಕೈಗೊಂಡರೆ ಭವಿಷ್ಯದಲ್ಲಿ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚುವುದರ ಜೊತೆಗೆ ನಿರ್ವಹಣೆಯೂ ಸುಲಭವಾಗಲಿದೆ ಎಂಬುದು ಹಿರಿಯರ ವಾದವಾಗಿದೆ.ಮೂರು ತಾಲೂಕಿನ ಜನರ ಕುಡಿಯುವ ನೀರಿನ ಯೋಜನೆಯಾಗಿರುವ ಯರಗೋಳ್ ಜಲಾಶಯದ ನಿರ್ವಹಣೆಗೆ ಅಧಿಕಾರಿಗಳು ಹೆಚ್ಚಿನ ಆದ್ಯತೆ ನೀಡಬೇಕು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಜಲಾಶಯದಲ್ಲಿ ಬೆಳೆದಿರುವ ಗಿಡಗಂಟೆ ತೆರವು ಕಾರ್ಯ ಕೈಗೊಂಡು ಈ ಜಲಾಶಯವನ್ನು ಪ್ರವಾಸಿ ತಾಣವಾಗಿ ರೂಪಿಸಲು ಸರ್ಕಾರ ಆದ್ಯತೆ ನೀಡಬೇಕು ಎಂದು ದಲಿತ ಸಮಾಜ ಸೇನೆ ರಾಜ್ಯಾಧ್ಯಕ್ಷ ಸೂಲಿಕುಂಟೆ ಆನಂದ್ ತಿಳಿಸಿದ್ದಾರೆ.