ಕನ್ನಡಪ್ರಭ ವಾರ್ತೆ ಕೆಂಭಾವಿ
ಅರ್ಧ ಕೋಟಿ ಹಣ ಖರ್ಚಾದರೂ ಗ್ರಾಮಕ್ಕೆ ಇನ್ನೂ ಕುಡಿಯುವ ನೀರು ಸಿಗದೆ ಗ್ರಾಮಸ್ಥರು ಪರದಾಡುವ ಪರಿಸ್ಥಿತಿ ಎದುರಾಗಿದೆ. ಹೌದು, ಯಕ್ತಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅನೇಕ ವರ್ಷಗಳಿಂದ ಇಂತಹ ನೀರಿನ ಸಮಸ್ಯೆ ಎದುರಾಗಿದ್ದು, ಇದನ್ನು ನೀಗಿಸಲು ಸರ್ಕಾರ ಹಲವು ಯೋಜನೆಗಳ ಅಡಿ ಅರ್ಧ ಕೋಟಿಗೂ ಹೆಚ್ಚು ಹಣ ವ್ಯಯ ಮಾಡಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯ ಗುತ್ತಿ ಬಸವೇಶ್ವರ ಆಶ್ರಯ ಕಾಲೋನಿ, ಆಲ್ಹಾಳ ಗ್ರಾಮ ಸೇರಿದಂತೆ ಹಲವು ಗ್ರಾಮ ಗಳಿಗೆ ಈಗಾಗಲೇ ನೀರಿನ ಬವಣೆ ನೀಗಿಸಲಾಗಿದೆ.ಆದರೆ, 13 ಗ್ರಾಮಗಳನ್ನು ಒಳಗೊಂಡ ಗ್ರಾಮ ಪಂಚಾಯ್ತಿ ಕೇಂದ್ರ ಸ್ಥಾನವಾಗಿರುವ ಯಕ್ತಾಪೂರ ಗ್ರಾಮಕ್ಕೆ ಈ ನೀರಿನ ಸಮಸ್ಯೆ ಕಾಡುತ್ತಿದ್ದು, ಲಕ್ಷ ಲಕ್ಷ ಹಣ ಖರ್ಚು ಮಾಡಿ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಂಡಿದ್ದರೂ ಒಂದು ಹನಿ ನೀರು ಮಾತ್ರ ಬಾರದೆ ಇರುವುದು ಗ್ರಾಮಸ್ಥರಿಗೆ ಬೇಸರ ಮೂಡಿಸಿದೆ. ಜನತೆಗೆ ಕಳೆದ ಹತ್ತು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯದೆ ನಿತ್ಯವೂ ಪರದಾಡುವ ಪರಿಸ್ಥಿ ತಿ ಮುಂದುವರೆದಿದೆ. ಗ್ರಾಮಕ್ಕೆ ಸರಬರಾಜು ಆಗುವ ಬಾವಿಯ ನೀರು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ಜನತೆ ನೀರಿಗಾಗಿ ಪರಿತಪಿಸುವಂತಾಗಿದೆ.
ಕಳೆದ ದಶಕಗಳಿಂದ ಗ್ರಾಮಕ್ಕೆ ಕುಡಿಯುವ ನೀರೇ ಶಾಪವಾಗಿದೆ ಎನ್ನುತ್ತಾರೆ ಗ್ರಾಮಸ್ಥರು. ಇದ್ದ ಒಂದು ಬಾವಿಯೂ ಬತ್ತಿಹೋಗುವ ಸ್ಥಿತಿ ತಲುಪಿದ್ದು, ಶಾಶ್ವತ ಪರಿಹಾರವಿಲ್ಲದೆ ಜನ ಪರದಾಡುವಂತಾಗಿದೆ. ಗ್ರಾಮ ಪಂಚಾಯಿತಿ ಹೊಂದಿರುವ ಈ ಗ್ರಾಮದಲ್ಲಿ ಮೂರು ಜನ ಸದಸ್ಯರನ್ನು ಹೊಂದಿದೆ. ಒಂದು ಸಾವೀರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಗ್ರಾಮದಲ್ಲಿ ಒಂದು ಸೇದು ಬಾವಿಯಿದ್ದು ಅದು ದಿನಬಳಕೆಗೆ ಮಾತ್ರ ಉಪಯೋಗಕ್ಕಿದ್ದು ಕುಡಿಯಲು ಯೋಗ್ಯವಾಗಿಲ್ಲ ಎನ್ನುತ್ತಾರೆ ಶಿವಶಂಕರ ಹೊಸಮನಿ.ಕಳೆದ ಕೆಲ ತಿಂಗಳ ಹಿಂದಷ್ಟೆ ಕ್ಷೇತ್ರದ ಶಾಸಕರ ಅನುದಾನದಲ್ಲಿ ಗ್ರಾಮಕ್ಕೆ ಕುಡಿಯುವ ನೀರಿನ ಯೋಜನೆಯಡಿ ಚಿಂಚೋಳಿ ಗ್ರಾಮದಿಂದ ಪೈಪ್ ಲೈನ್ ಮಾಡಲಾಗಿತ್ತು. ಬಹುತೇಕ ಕಾಮಗಾರಿ ಮುಗಿದೆ ಎಂದು ಹೇಳಲಾಗುತ್ತಿದ್ದು ಕುಡಿಯುವ ನೀರಿನ ಸಮಸ್ಯೆ ಮಾತ್ರ ಬಗೆಹರಿದಿಲ್ಲ ಎಂಬುದು ಗ್ರಾಮಸ್ಥರು ಆರೋಪವಾಗಿದೆ. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಮರಿಚೆಕೆಯಾಗಿದ್ದು ಸೇದು ಬಾವಿಯ ನೀರೆ ಕುಡಿಯುವಂತಾಗಿದೆ.
ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕುಡಿಯುವ ನೀರು, ರಸ್ತೆ, ಚಂರಡಿ, ಶೌಚಾಲಯ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಗ್ರಾಮ ಪಂಚಾಯಿತಿ ಮುಖಾಂತರ ಕೋಟಿ ಕೋಟಿ ಹಣ ಬಿಡುಗಡೆ ಮಾಡುತ್ತಿದ್ದು ಹಣ ಸರಿಯಾಗಿ ಬಳಕೆಯಾಗದಿರುವುದೇ ಇಂದು ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಈ ಮಟ್ಟಕ್ಕೆ ತಲುಪಿದೆ. ಅಧಿಕಾರಿಗಳು ಇತ್ತ ಗಮನ ಹರಿಸಿ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.
ಜಿಪಂ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಎಇಇ ಎಚ್. ಡಿ.ಪಾಟೀಲ ಮಾತನಾಡಿ, ಮಳೆ ಬಾರದ ಕಾರಣ ಮುಖ್ಯವಾಗಿ ಅಂತರ್ಜಲ ಮಟ್ಟ ತೀವ್ರ ಕುಸಿದಿದೆ. ಚಿಂಚೋಳಿ ಗ್ರಾಮದ ಬಳಿ ಎರಡು ಕೊಳವೆ ಬಾವಿ ಕೊರೆಸಿದ್ದು, ಯಕ್ತಾಪೂರ ಗ್ರಾಮಕ್ಕೆ ಈಗಾಗಲೇ ಪೈಪ್‌ಲೈನ್ ಕಾಮಗಾರಿಯೂ ಪೂರ್ಣಗೊಂಡಿದೆ. ಕೆಲವು ಸಣ್ಣಪುಟ್ಟ ಕೆಲಸಗಳು ಬಾಕಿ ಇದ್ದು ಶೀಘ್ರದಲ್ಲೆ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದರು.
ಗ್ರಾಮಸ್ಥ ಸಂತೋಷ ಮಾತನಾಡಿ, ಗ್ರಾಮದಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದೆ. ಹಣ ಖರ್ಚಾದರೂ ನೀರು ಸಿಗದೆ ಗ್ರಾಮಸ್ಥರು ಪರದಾಡುತ್ತಿದ್ದು, ಇರುವ ಒಂದೇ ಬಾವಿಯಿಂದ ನಿತ್ಯ ನೀರು ತರುವ ಅನಿವಾರ್ಯತೆ ಎದುರಾಗಿದೆ ಎಂದರು.