ಸಾರಾಂಶ
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಹಾನಗಲ್ಲಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪಟ್ಟಣದ ತಹಸೀಲ್ದಾರ ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಆರ್.ವಿ. ಕೆಂಚಳ್ಳೇರ ಮಾತನಾಡಿ, ರೈತರ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸದ ಸರ್ಕಾರಗಳ ಅಗತ್ಯ ನಮಗಿಲ್ಲ. ಸರ್ಕಾರಗಳು ರೈತರ ಪರ ಕಣ್ಣೀರು ಸುರಿಸುವುದರಿಂದ ಏನೂ ಪ್ರಯೋಜನವಿಲ್ಲ. ರೈತರ ಸಂಕಷ್ಟಗಳಿಗೆ ಸ್ಪಂದಿಸದ ಜನಪ್ರತಿನಿಧಿಗಳು ನಮಗೆ ಬೇಕಾಗಿಲ್ಲ. ದೆಹಲಿಯಲ್ಲಿ ನಡೆದಿರುವ ಹೋರಾಟವನ್ನು ಇಡೀ ರೈತ ಸಮುದಾಯ ಬೆಂಬಲಿಸುತ್ತದೆ ಎಂದು ತಿಳಿಸಿದರು.ರೈತ ಸಂಘಟನೆಗಳು ನಿರಂತರ ರೈತರ ಸಮಸ್ಯೆಗಾಗಿ ಹೋರಾಟ ಮಾಡುತ್ತಲೇ ಇದ್ದರೂ ಅಧಿಕಾರಿಗಳು ಕಣ್ತೆರೆಯುತ್ತಿಲ್ಲ. ತಾಲೂಕಿನ ಸರ್ಕಾರಿ ಕಚೇರಿಗಳಲ್ಲಿ ರೈತರ ಪ್ರಕರಣಗಳು ಧೂಳು ತಿನ್ನುತ್ತಿವೆ. ಹೇಳುವವರು ಕೇಳುವವರು ಇಲ್ಲದ ಈ ಆಡಳಿತದಿಂದಾಗಿ ಜನತೆ ಬೇಸತ್ತಿದ್ದಾರೆ. ರೈತರನ್ನು ಕಂಗೆಡಿಸಿದ ಬರಕ್ಕೆ ರಾಜ್ಯ ಸರ್ಕಾರ ₹೨ ಸಾವಿರ ಪರಿಹಾರ ನೀಡಿರುವುದು ಹಾಸ್ಯಾಸ್ಪದ. ಅದನ್ನು ರೈತ ಮುಖಂಡರು ಸರ್ಕಾರಕ್ಕೆ ಮರಳಿ ನೀಡಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ರೈತರ ನೋವು ಅರ್ಥವಾಗುತ್ತಿಲ್ಲ. ಈ ಸರ್ಕಾರ ಯಾರಿಗಾಗಿ ಇದೆ ಎಂಬುದೇ ಅರ್ಥವಾಗುತ್ತಿಲ್ಲ. ರೈತರು ಬಂಡೆದ್ದರೆ ಕ್ರಾಂತಿಯೇ ಆದೀತು ಎಂದು ಎಚ್ಚರಿಸಿದ ಅವರು, ದೆಹಲಿಯಲ್ಲಿ ನಡೆದಿರುವ ರೈತರ ಹೋರಾಟವನ್ನು ಬೆಂಬಲಿಸಿ ಮಾ. ೫ರಂದು ಹಾವೇರಿಯಲ್ಲಿ ಜಿಲ್ಲಾ ಮಟ್ಟದ ಪ್ರತಿಭಟನೆ ನಡೆಸಲಾಗುವುದು ಎಂದರು.
ರೈತರ ಪಂಪ್‌ಸೆಟ್‌ಗಳ ಅಕ್ರಮ ಸಕ್ರಮಕ್ಕೆ ಹಳೆಯ ನಿಯಮವನ್ನೆ ಮುಂದುವರೆಸಬೇಕು. ವಂತಿಗೆ ಕಟ್ಟಿದ ೨೩೦೦ ಪಂಪ್‌ಸೆಟ್‌ಗಳಿಗೆ ಕೂಡಲೇ ಕಾಮಗಾರಿ ಕೈಗೊಂಡು ವಿದ್ಯುತ್ ಒದಗಿಸಬೇಕು. ಹೊಸ ಕೊಳವೆಬಾವಿಗಳಿಗೂ ಕೂಡಲೇ ಹಳೆ ನಿಯಮದಂತೆ ವಿದ್ಯುತ್ ಒದಗಿಸಬೇಕು. ಸ್ವಾಮಿನಾಥನ್ ವರದಿಯ ಎಲ್ಲ ಅಂಶಗಳನ್ನು ರೈತರ ಹಿತಕ್ಕಾಗಿ ಜಾರಿಗೊಳಿಸಬೇಕು. ಎಲ್ಲ ಬೆಳೆಗಳಿಗೆ ಎಂಎಸ್‌ಪಿ ಸಲುವಾಗಿ ಪ್ರತ್ಯೇಕ ಕಾನೂನು ರೂಪಿಸಬೇಕು. ಬರಪೀಡಿತ ಎಂದು ಘೋಷಿಸಿದ ಹಾನಗಲ್ಲ ತಾಲೂಕಿನ ರೈತರಿಗೆ ಕೂಡಲೇ ಸೂಕ್ತ ಪರಿಹಾರ ನೀಡಿಬೇಕು. ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ರೈತ ಸಂಘದ ಮುಖಂಡರಾದ ಅಡಿವೆಪ್ಪ ಆಲದಕಟ್ಟಿ, ಮಹೇಶ ವಿರುಪಣ್ಣನವರ, ಮರಿಗೌಡ ಪಾಟೀಲ, ಮಲ್ಲೇಶಪ್ಪ ಪರಪ್ಪನವರ, ಸೋಮಣ್ಣ ಜಡೆಗೊಂಡರ, ಶ್ರೀಕಾಂತ ದುಂಡಣ್ಣನವರ, ರುದ್ರಪ್ಪ ಹಣ್ಣಿ, ವಾಸುದೇವ ಕಮಾಟಿ, ರಾಜೀವ ದಾನಪ್ಪನವರ, ಮಹಲಿಂಗಪ್ಪ ಅಕ್ಕಿವಳ್ಳಿ, ಶ್ರೀಧರ ಮಲಗುಂದ ಸೇರಿದಂತೆ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಎರಡು ಗಂಟೆಗಳಿಗೂ ಹೆಚ್ಚು ಕಾಲ ರೈತ ಮುಖಂಡರು ತಹಸೀಲ್ದಾರ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ರೈತರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ಕ್ರಮ ಖಂಡಿಸಿದರು. ಹಲವು ರೈತರು ವಿವಿಧ ಇಲಾಖೆಗಳಲ್ಲಿ ಎರಡೆರಡು ವರ್ಷಗಳಾದರೂ ತಮ್ಮ ಕೆಲಸಗಳು ಆಗದೇ ಇರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.