ಸಾರಾಂಶ
ಕನ್ನಡಪ್ರಭವಾರ್ತೆ ಚಳ್ಳಕೆರೆ
ಸಮಾಜದಲ್ಲಿ ಬದುಕಿನ ನೈಜ್ಯತೆ ಕಾಣುವ ಪ್ರಾಮಾಣಿಕ ಪ್ರಯತ್ನ ನಡೆಸಬೇಕಿದೆ. ಪತ್ರಿಕೆಗಳು ಜನತೆಗೆ ಸುದ್ದಿ ನೀಡುವ ಜತೆಗೆ ಸಾಮಾಜಿಕ ಕಳಕಳಿ ಸಹ ಹೊಂದಿವೆ. ಪತ್ರಕರ್ತ ಕರ‍್ಲಕುಂಟೆ ತಿಪ್ಪೇಸ್ವಾಮಿಯ ಬರಹದ ಒಳನೋಟ ಸಂಕಲನ ಇದಕ್ಕೆ ಪೂರಕವಾಗಿದೆ ಎಂದು ಶಾಸಕ, ಸಣ್ಣಕೈಗಾರಿಕೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಟಿ. ರಘುಮೂರ್ತಿ ತಿಳಿಸಿದರು. ಅವರು, ಸರ್ಕಾರಿ ನೌಕರರ ಭವನದಲ್ಲಿ ತಿಪ್ಪೇಸ್ವಾಮಿಯವರ ಬರಹದ ಒಳನೋಟ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡಿದರು.ಕನ್ನಡ ರಕ್ಷಣಾ ಮತ್ತು ಸಾಂಸ್ಕೃತಿಕ ವೇದಿಕೆ, ಚಿನ್ಮೂಲಾದ್ರಿ ವೇದಿಕೆ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ದಿನನಿತ್ಯ ಬದುಕಿನಲ್ಲಿ ವಿಭಿನ್ನ ರೀತಿಯ ಸಮಸ್ಯೆಗಳಿಗೆ ಸಿಲುಕಿಕೊಳ್ಳುತ್ತೇವೆ. ಕೆಲವೊಂದು ಸಂದರ್ಭದಲ್ಲಿ ಏನನ್ನು ಸಾಧನೆ ಮಾಡದಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಸರ್ಕಾರವೂ ಸೇರಿದಂತೆ ಸಮಾಜದ ಹಲವಾರು ಘಟನೆಗಳು ಇದಕ್ಕೆ ಪೂರಕವಾಗುತ್ತವೆ. ಇಂತಹ ಸಮಸ್ಯೆಗಳ ಬಗ್ಗೆ ಲೇಖಕ ಕರ‍್ಲಕುಂಟೆ ತಿಪ್ಪೇಸ್ವಾಮಿ ತನ್ನ ಸಂಕಲನದಲ್ಲಿ ಜನರಿಗೆ ತಲುಪಿಸುವ ಕಾರ್ಯವನ್ನು ಜಾಣ್ಮೆಯಿಂದ ಮಾಡಿದ್ದಾರೆಂದರು.
ತಿಪ್ಪೇಸ್ವಾಮಿಯವರ ಸಂಕಲನದ ಬಗ್ಗೆ ಆಶಯ ನುಡಿಗಳನ್ನು ಆಡಿದ ಪತ್ರಕರ್ತ ಜಡೇಕುಂಟೆ ಮಂಜುನಾಥ, ಲೇಖನಗಳಿಗೆ ತನ್ನದೇ ಆದ ಶಕ್ತಿ ಸಾಮರ್ಥ್ಯವಿದೆ. ಕೆಲವೊಂದು ಸಂದರ್ಭಗಳಲ್ಲಿ ನಮ್ಮ ಕಣ್ಣೆದುರಿಗೆ ನಡೆಯುವ ಅನೇಕ ಸಂಗತಿಗಳನ್ನು ಬಿಚ್ಚಿಡಲು ಸಾಧ್ಯವಿಲ್ಲ. ಆದರೆ, ಲೇಖಕ ಹಾಗೂ ಲೇಖನ ಈ ಕೆಲಸವನ್ನು ಸುಲಭವಾಗಿ ಮಾಡುತ್ತದೆ. ಅಂತಹ ಸಮರ್ಥತೆ ಇವರ ಸಂಕಲನದಲ್ಲಿದೆ ಎಂದರು.ನಿವೃತ್ತ ಪ್ರಾಂಶುಪಾಲ, ಬಂಡಾಯ ಸಾಹಿತಿ ಪ್ರೊ.ಸಿ. ಶಿವಲಿಂಗಪ್ಪ, ನಮ್ಮಲ್ಲಿ ಉಂಟಾಗುವ ನೋವುಗಳು ನಮ್ಮ ಬದುಕನ್ನು ಚಿಧ್ರಗೊಳಿಸುತ್ತವೆ. ಆದರೆ, ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದು. ಆದರೆ, ತಿಪ್ಪೇಸ್ವಾಮಿಯವರ ಸಂಕಲನದಲ್ಲಿ ಇಂತಹ ಜ್ವಲಂತ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಇದರ ಅವಶ್ಯಕತೆ ಎಂದಿಗೂ ಪ್ರಸ್ತುತ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮೀಣ ಪರಿಷತ್ ಅಧ್ಯಕ್ಷ, ಲೇಖಕ ಬಿ. ತಿಪ್ಪಣ್ಣ ಮರಿಕುಂಟೆ ಮಾತನಾಡಿ, ಲೇಖಕ ತನ್ನದೇ ಆದ ಆಯಾಮಗಳಲ್ಲಿ ಸಮಸ್ಯೆಗಳನ್ನು ಬರಹದ ಮೂಲಕ ಸರ್ಕಾರ ಹಾಗೂ ಓದುಗರಿಗೆ ನೀಡುತ್ತಾನೆ. ವಾಸ್ತಾಂಶಗಳ ಬಗ್ಗೆ ಒತ್ತು ನೀಡುವ ಹಾಗೂ ಬೆಳಕು ಚೆಲ್ಲುವಂತಹ ಹಲವಾರು ಅಂಶಗಳು ಇರುತ್ತವೆ. ಸರ್ಕಾರ ಮತ್ತು ಬಡ ಜನರ ಸಮಸ್ಯೆಗಳ ಬಗ್ಗೆ ಅಸಮಾನತೆಯನ್ನು ನಿಯಂತ್ರಿಸಲು ತಿಪ್ಪೇಸ್ವಾಮಿ ತಮ್ಮ ಸಂಕಲನದಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ. ಇವರ ಸಾಹಿತ್ಯ ಚಟುವಟಿಕೆ ಪ್ರಶಂಸನೀಯವೆಂದರು.ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಜೈತುಂಬಿ, ಉಪಾಧ್ಯಕ್ಷ ಓ.ಸುಜಾತ, ಸದಸ್ಯರಾದ ಬಿ.ಟಿ. ರಮೇಶ್‌ಗೌಡ, ಎಂ.ಜೆ. ರಾಘವೇಂದ್ರ, ಆರ್. ಮಂಜುಳಾ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಟಿ. ವೀರಭದ್ರಸ್ವಾಮಿ, ನಿವೃತ್ತ ಪ್ರಾಂಶುಪಾಲ ಎಸ್.ಲಕ್ಷ್ಮಣ್, ನಾಟಕ ಅಕಾಡೆಮೆ ಮಾಜಿ ಸದಸ್ಯ ಪಿ. ತಿಪ್ಪೇಸ್ವಾಮಿ, ಯಾದಲಗಟ್ಟೆ ಜಗನ್ನಾಥ, ಎಚ್. ಲಂಕಪ್ಪ, ಕೆ.ಪಿ. ಭೂತಯ್ಯ, ರೆಡ್ಡಿಹಳ್ಳಿ ವೀರಣ್ಣ, ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಅಧ್ಯಕ್ಷ ಡಾ. ಎಸ್.ಎಚ್. ಶಫೀವುಲ್ಲಾ, ದಲಿತ ಸಂಘಟನೆಗಳ ಹಿರಿಯ ಮುಖಂಡ ಟಿ. ವಿಜಯಕುಮಾರ್, ಭೀಮನಕೆರೆ ಶಿವಮೂರ್ತಿ, ಸಿ.ಜಿ. ಜಯಕುಮಾರ್, ಟಿ. ರಂಗನಾಥ, ಆರ್. ನೇತಾಜಿ ಪ್ರಸನ್ನ, ಜಾಲಿಮಂಜು, ಬಿ. ಶಬ್ರೀನಾ ಪಗಡಲ ಬಂಡೆನಾಗೇಂದ್ರಪ್ಪ, ಎಸ್.ಬಿ. ತಿಪ್ಪೇಸ್ವಾಮಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.