ಕನಕಪುರದ ಕಿಲ್ಲೆ ರಂಗನಾಥಸ್ವಾಮಿ ದೇವಾಲಯದ ಮೂಲ ಸ್ವರೂಪ ಉಳಿಸಿಕೊಳ್ಳುವಂತೆ ಸ್ಥಳೀಯರ ಮನವಿ

| Published : Sep 07 2024, 01:36 AM IST

ಕನಕಪುರದ ಕಿಲ್ಲೆ ರಂಗನಾಥಸ್ವಾಮಿ ದೇವಾಲಯದ ಮೂಲ ಸ್ವರೂಪ ಉಳಿಸಿಕೊಳ್ಳುವಂತೆ ಸ್ಥಳೀಯರ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಕನಕಪುರ ನಗರದ ಕೋಟೆ ಶ್ರೀ ಕಿಲ್ಲೆ ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ಕಾಂಕ್ರೀಟ್ ಬ್ಲಾಕ್ ಹಾಗೂ ಫ್ಲೆಕ್ಸಿಬಲ್ ಬ್ಲಾಕ್ ಹಾಕುವುದಕ್ಕೆ ಸ್ಥಳೀಯ ನಿವಾಸಿಗಳು ಹಾಗೂ ಬಿಜೆಪಿ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ.

ಕಿಲ್ಲೆ ರಂಗನಾಥಸ್ವಾಮಿ ದೇಗುಲದ ಆವರಣದಲ್ಲಿ ಕಾಂಕ್ರೀಟ್ ಬ್ಲಾಕ್ । ಫ್ಲೆಕ್ಸಿಬಲ್ ಬ್ಲಾಕ್ ಹಾಕುವುದಕ್ಕೆ ಸ್ಥಳೀಯರ ವಿರೋಧಕನ್ನಡಪ್ರಭ ವಾರ್ತೆ ಕನಕಪುರ

ನಗರದ ಕೋಟೆ ಶ್ರೀ ಕಿಲ್ಲೆ ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ಕಾಂಕ್ರೀಟ್ ಬ್ಲಾಕ್ ಹಾಗೂ ಫ್ಲೆಕ್ಸಿಬಲ್ ಬ್ಲಾಕ್ ಹಾಕುವುದಕ್ಕೆ ಸ್ಥಳೀಯ ನಿವಾಸಿಗಳು ಹಾಗೂ ಬಿಜೆಪಿ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಥಳೀಯ ನಿವಾಸಿ ಹಾಗೂ ಮುಖಂಡ ಡಿ.ಶ್ರೀನಿವಾಸ್, ಈ ದೇವಾಲಯ ಅತ್ಯಂತ ಪುರಾತನ ಹಾಗೂ ಪ್ರಸಿದ್ಧ ದೇವಾಲಯವಾಗಿದ್ದು, ಬಹಳ ಹಿಂದಿನ ಕಾಲದಿಂದ ಈ ದೇವಾಲಯದ ಸುತ್ತಲೂ ವಾಸಿಸುತ್ತಿರುವ ಜನರು ಹಬ್ಬ- ಹರಿದಿನಗಳಲ್ಲಿ ಭಕ್ತಿಯಿಂದ ಪೂಜಿಸಿಕೊಂಡು ಬರುತ್ತಿದ್ದಾರೆ ಎಂದರು.

ದೇವಾಲಯದ ಮುಂಭಾಗದ ಆವರಣ ಮಣ್ಣಿನ ಸೊಗಡನ್ನು ಮೈದುಂಬಿಗೊಂಡಿದ್ದು, ಈ ಭಾಗದ ಮಕ್ಕಳು ಇಂದಿನ ಪಾಶ್ಚಾತ್ಯ ಸಂಸ್ಕೃತಿಯ ನಡುವೆಯೂ ತಮ್ಮ ದೈನಂದಿನ ವ್ಯಾಯಾಮವನ್ನು ಈ ಮಣ್ಣಿನಲ್ಲಿ ನಡೆಸುತ್ತಾ ಬರುತ್ತಿರುವುದಲ್ಲದೆ ಹಿರಿಯರು, ಮಹಿಳೆಯರು ಬೆಳಗ್ಗೆ ಮತ್ತು ಸಂಜೆಯ ವೇಳೆ ಬರಿಗಾಲಿನಲ್ಲಿ ಮಣ್ಣಿನ ಮೇಲೆ ನಡೆದಾಡುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳುವಂತಹ ಕೆಲಸವನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಈ ದೇವಾಲಯ ಮುಜರಾಯಿ ಇಲಾಖೆಗೆ ಸೇರಿದ್ದು ಸುಮಾರು 800 ವರ್ಷಗಳ ಇತಿಹಾಸವಿದೆ. ಪ್ರಸ್ತುತ ಕೆಲ ವ್ಯಕ್ತಿಗಳ ಸ್ವ-ಪ್ರತಿಷ್ಠೆ ಹಾಗೂ ರಾಜಕೀಯ ದ್ವೇಷದಿಂದ ಜೀರ್ಣೋದ್ಧಾರ ನೆಪದಲ್ಲಿ ದೇವಾಲಯದ ಮೂಲ ಸ್ವರೂಪವನ್ನು ಹಾಳು ಮಾಡಲು ಹೊರಟಿರುವುದು ನೋವಿನ ಸಂಗತಿಯಾಗಿದೆ ಎಂದರು.

ದೇವಾಲಯದ ಅಭಿವೃದ್ಧಿಗೆ ನಮ್ಮದು ಯಾವುದೇ ತಕರಾರಿಲ್ಲ. ಆದರೆ ಅಭಿವೃದ್ಧಿ ನೆಪದಲ್ಲಿ ದೇವಾಲಯದ ಮುಂಭಾಗವನ್ನು ಸಂಪೂರ್ಣ ಕಾಂಕ್ರೀಟ್ ಗೊಳಿಸಿದರೆ ಮಕ್ಕಳ ಆಟಕ್ಕೆ, ಹಿರಿಯರ ವಾಯು ವಿಹಾರಕ್ಕೆ ತೊಂದರೆಯಾಗಲಿದೆ. ಆದ್ದರಿಂದ ಮುಜರಾಯಿ ಇಲಾಖೆ ಅಧಿಕಾರಿಗಳು ಈ ಭಾಗದ ಜನರ ಅಭಿಪ್ರಾಯ ಪಡೆದು ಒಮ್ಮತದಿಂದ ಅಭಿವೃದ್ಧಿ ಕೆಲಸ ಮಾಡುವಂತೆ ಈಗಾಗಲೇ ತಹಸೀಲ್ದಾರ್, ನಗರಸಭಾ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಲಾಗಿದೆ ಎಂದು ತಿಳಿಸಿದ ಅವರು, ಮುಜರಾಯಿ ಇಲಾಖೆ ಅಧಿಕಾರಿಗಳು ಸಾರ್ವಜನಿಕರ ಭಾವನೆಗೆ ಬೆಲೆ ಕೊಡುವಂತೆ ಮನವಿ ಮಾಡಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಜೇಶ್, ವಿಶ್ವಕರ್ಮ ಯೋಜನೆಯ ಜಿಲ್ಲಾ ಸಂಚಾಲಕ ಕೃಷ್ಣಪ್ಪ, ನಗರಮಂಡಲ ಅಧ್ಯಕ್ಷ ಎಂ.ಮಂಜುನಾಥ್, ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಪಾಲಾಕ್ಷ.ಎ.ವಿ, ರಾಜ್ಯ ಅಲ್ಪ ಸಂಖ್ಯಾತ ಮೋರ್ಚಾದ ಕಾರ್ಯಕಾರಿಣಿ ಸದಸ್ಯೆ ತಾಸಿನ ಖಾನಮ್, ಕನಕಪುರ ನಗರ ಮಂಡಲ ಯುವ ಮೋರ್ಚಾ ಅಧ್ಯಕ್ಷ ದಯಾನಂದ.ಪಿ, ರಮೇಶ, ಪುಟ್ಟಸ್ವಾಮಿ, ರಾಮಕೃಷ್ಣ (ಭಗತ್ ರಾಮ್) ಸೇರಿ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.