ಗ್ರಾಪಂ ಅವ್ಯವಹಾರ ತನಿಖೆಗೆ ಆಗ್ರಹಿಸಿ ಧರಣಿ

| Published : Sep 07 2024, 01:36 AM IST

ಸಾರಾಂಶ

ಸಿಂಧನೂರು ತಾಲೂಕಿನ ಆರ್.ಎಚ್.ನಂ.1 ಗ್ರಾಪಂ ಕಚೇರಿಯ ಮುಂದೆ ರೈತ ಸಂಘದ ಮುಖಂಡರು ಪ್ರತಿಭಟನಾ ಧರಣಿ ನಡೆಸಿ ತಾ.ಪಂ.ಯೋಜನಾಧಿಕಾರಿ ಅಮರಗುಂಡಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿತು.

ಸಿಂಧನೂರು: ತಾಲೂಕಿನ ಆರ್.ಎಚ್.ನಂ.1 ಗ್ರಾಪಂಯಲ್ಲಿ ನಡೆದ ಅವ್ಯವಹಾರವನ್ನು ತನಿಖೆ ಮಾಡಬೇಕು. ಸಿದ್ದಲಿಂಗೇಶ್ವರ ಏತ ನೀರಾವರಿ ಜಾರಿಗೊಳಿಸಬೇಕು. ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳಿಗೆ ಡಾಂಬರೀಕರಣ ರಸ್ತೆ ನಿರ್ಮಿಸಿ, ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕ ಗ್ರಾಪಂ ಕಚೇರಿಯ ಮುಂದೆ ಪ್ರತಿಭಟನಾ ಧರಣಿ ನಡೆಸಿತು.

ಪಂಚಾಯಿತಿಯಲ್ಲಿ ಅಪಾರ ಪ್ರಮಾಣದಲ್ಲಿ ಸರ್ಕಾರದ ಹಣ ದುರುಪಯೋಗವಾಗಿದ್ದು, ಅಭಿವೃದ್ಧಿ ಅಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಬೇಕು. ಆರ್.ಎಚ್.ನಂ.1, ಈರಣ್ಣ ಕ್ಯಾಂಪ್, ಆರ್.ಎಚ್.ನ.3 ಕ್ಯಾಂಪ್‌ಗೆ ತೆರಳುವ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಮಳೆ ಬಂದರೆ ಸಾಕು ಕೆಸರು ಗದ್ದೆಯಂತಾಗುತ್ತದೆ. ಆದ್ದರಿಂದ ಈ ರಸ್ತೆಗಳನ್ನು ಡಾಂಬರೀಕರಣ ಮಾಡಬೇಕು. ಸಿದ್ದಲಿಂಗೇಶ್ವರ ಏತ ನೀರಾವರಿಯನ್ನು ಶೀಘ್ರ ಜಾರಿಗೊಳಿಸಿ ಬರ್ಮಾ ಕ್ಯಾಂಪ್‌ಗೆ ವಿಸ್ತರಿಸಿ, ಕೆಳಭಾಗದ ರೈತರ ಜಮೀನುಗಳಿಗೆ ನೀರುಣಿಸಬೇಕು ಎಂದು ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಬಸವರಾಜ ಗೋಡಿಹಾಳ ಆಗ್ರಹಿಸಿದರು.

ಧರಣಿ ಸ್ಥಳಕ್ಕೆ ಬಂದ ತಾಲೂಕು ಪಂಚಾಯಿತಿ ಯೋಜನಾಧಿಕಾರಿ ಅಮರಗುಂಡಪ್ಪ ಮನವಿ ಪತ್ರ ಸ್ವೀಕರಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಮಾರಲದಿನ್ನಿ, ತಾಲೂಕು ಘಟಕದ ಅಧ್ಯಕ್ಷ ಹುಲಿಗಯ್ಯ ತಿಮ್ಮಾಪುರ, ಮುಖಂಡರಾದ ಬಸವರಾಜ ಹಂಚಿನಾಳ ಹಾಗೂ ರೈತರು ಇದ್ದರು.