ಹಾವೇರಿ:ಬಸವಕೇಂದ್ರ ಶ್ರೀ ಹೊಸಮಠ ಹಾಗೂ ಕನ್ನಡ ಜಾಗೃತಿ ಸಮಿತಿ ಹಾವೇರಿ ಇವರ ಸಂಯುಕ್ತಾಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಸೋಮವಾರ ಸಂಜೆ ಶ್ರೀ ಮಠದಲ್ಲಿ ಶರಣ ಸಂಗಮ ಮತ್ತು ಕವಿಗೋಷ್ಠಿ ನಡೆಯಿತು.
ಶ್ರೀ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಬಸವ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ಯಾವ ಭಾಷೆ ವಿಜ್ಞಾನ ಮತ್ತು ತಂತ್ರಜ್ಞಾನಗಳೊಂದಿಗೆ ತನ್ನನ್ನು ಬೆಸೆಯಿಕೊಳ್ಳುತ್ತದೆಯೋ ಆ ಭಾಷೆ ಸಮೃದ್ಧವಾಗಿ ಜೀವಂತವಾಗಿರುತ್ತದೆ. ಈ ನಿಟ್ಟಿನಲ್ಲಿ ನಮ್ಮ ಬದುಕಿನ ಎಲ್ಲ ಆಯಾಮಗಳೂ ಕನ್ನಡಮಯವಾಗುವಂತೆ ನಾವೆಲ್ಲರೂ ಪ್ರಯತ್ನಿಸಬೇಕು ಎಂದರು.ವ್ಯಕ್ತಿಯ ಆಲೋಚನೆಗಳು ಮೊದಲು ಮೂಡುವುದು ಮಾತೃಭಾಷೆಯಲ್ಲಿಯೇ. ಅವುಗಳ ಅತ್ಯುತ್ತಮ ಅಭಿವ್ಯಕ್ತಿ ಸಾಧ್ಯವಾಗುವುದು ಕೂಡ ಮಾತೃಭಾಷೆಯ ಮೂಲಕವೇ. ಕರ್ನಾಟಕದ ಜನಜೀವನ, ಆಡಳಿತ, ಶಿಕ್ಷಣ, ವ್ಯವಹಾರ, ಜಾನಪದ, ಸಂಗೀತ, ರಂಗಭೂಮಿ ಹಾಗೂ ಚಲನಚಿತ್ರರಂಗದಲ್ಲಿ ಕನ್ನಡವೇ ಜೀವನಾಡಿಯಾಗಿದೆ. ಕನ್ನಡದ ನಾಣ್ಣುಡಿ, ಉದಯ ಮತ್ತು ಹೃದಯ ನಮ್ಮ ಬದುಕಿನ ಭಾಗವಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಕನ್ನಡ ಜಾಗೃತಿ ಸಮಿತಿ ಸದಸ್ಯ ಡಾ. ಹೊನ್ನಪ್ಪ ಹೊನ್ನಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿರೇಶ ಹಿತ್ತಲಮನಿ ಉಪನ್ಯಾಸ ನೀಡಿದರು. ಡಾ. ಸಿ.ಎಸ್. ಕಮ್ಮಾರ, ಕುಮಾರ ಮಡಿವಾಳರ ಹಾಗೂ ಬಿ.ಎಂ. ಬೇವಿನಮರ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಕವಿಗಳು ತಮ್ಮ ಸ್ವರಚಿತ ಕವಿತೆಗಳನ್ನು ವಾಚಿಸಿದರು. ಶ್ರೀ ಮಠದ ಶಾಲಾ ವಿದ್ಯಾರ್ಥಿಗಳು ಕನ್ನಡ ನಾಡು-ನುಡಿ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ನೃತ್ಯ ಪ್ರದರ್ಶಿಸಿದರು. ಮಮತಾ ನಂದಿಹಳ್ಳಿ ಪ್ರಾರ್ಥಿಸಿದರು. ಜಿ.ಎಂ. ಓಂಕಾರಣ್ಣವರ ಸ್ವಾಗತಿಸಿದರು. ಅನಿತಾ ಉಪಲಿ ನಿರೂಪಿಸಿದರು. ರಂಜನಾ ಭಟ್ ವಂದಿಸಿದರು.