ಸಾರಾಂಶ
- ನನ್ನ ಹೆಸರಲ್ಲೇ ರಾಮ ಇದೆ, ನಾವೂ ಹಿಂದೂಗಳಲ್ವೇ?
- ವೈಫಲ್ಯ ಮುಚ್ಚಿಹಾಕಲು ಮೋದಿಯಿಂದ ರಾಮಜಪ- 2 ಲಕ್ಷ ಉದ್ಯೋಗ ಸೃಷ್ಟಿಸುವಲ್ಲಿ ಪ್ರಧಾನಿ ವಿಫಲಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ(ಮೈಸೂರು)
‘ ನಾನು ಕೂಡ ಬೆಂಗಳೂರಿನಲ್ಲಿ ರಾಮಮಂದಿರ ಉದ್ಘಾಟನೆ ಮಾಡಿದ್ದೇನೆ. ಜೈ ಶ್ರೀರಾಮ್ ಘೋಷಣೆಯನ್ನು ಕೂಗಿಸಿದ್ದೇನೆ, ನಾವು ಗಾಂಧಿ ಹೇಳಿದ ರಾಮನ ಭಜನೆ ಮಾಡುತ್ತೇವೆ. ನನ್ನ ಹೆಸರು ಸಿದ್ಧರಾಮ. ನನ್ನ ಹೆಸರಲ್ಲೇ ರಾಮ ಇದ್ದಾನೆ. ತಮ್ಮಂದಿರ ಹೆಸರು ರಾಮೇಗೌಡ, ಸಿದ್ದೇಗೌಡ, ಸಿದ್ದರಾಮೇಗೌಡ. ಹಾಗಿದ್ದರೆ, ನಾವ್ಯಾರೂ ಹಿಂದುಗಳು ಅಲ್ವೇ?‘ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ 79 ಗ್ರಾಮಗಳ 150 ಕೆರೆಗಳಿಗೆ ಮತ್ತು ಕಟ್ಟೆಗಳಿಗೆ ಕಾವೇರಿ ನದಿಯ ನೀರು ತುಂಬಿಸುವ ಯೋಜನೆಯನ್ನು ಬುಧವಾರ ಮುತ್ತಿನಮುಳುಸೋಗೆಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ನಾವು ರಾಮನ ಪೂಜೆ ಮಾಡುತ್ತೇವೆ. ಧನುರ್ ಮಾಸದಲ್ಲಿ ಬೆಳಗ್ಗೆ ಎದ್ದು ದೇವಸ್ಥಾನಕ್ಕೆ ಹೋಗಿ ರಾಮನ ಭಜನೆ ಮಾಡುತ್ತಿದ್ದೆ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಆದರೆ, ಬಿಜೆಪಿಯವರು ಹಿಂದುತ್ವದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇದೇ ವೇಳೆ, ಮೋದಿ ವಿರುದ್ಧ ಹರಿಹಾಯ್ದ ಸಿಎಂ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಅವರ ಹತ್ತು ವರ್ಷದ ಆಡಳಿತಾವಧಿಯಲ್ಲಿ 20 ಕೋಟಿ ಉದ್ಯೋಗ ಕೊಡಬೇಕಿತ್ತು. ಆದರೆ, ಆ ಆಶ್ವಾಸನೆ ಈಡೇರಿಸುವಲ್ಲಿ ಅವರು ವಿಫಲರಾದರು. ಈ ವೈಫಲ್ಯ ಮುಚ್ಚಿಕೊಳ್ಳಲು ಇದೀಗ ಶ್ರೀರಾಮನನ್ನು ಮುಂದಿಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.ದೇವೇಗೌಡರು ಈಗ ಪ್ರಧಾನಿ ಮೋದಿ ಮತ್ತು ಬಿಜೆಪಿ ಜತೆ ತಮ್ಮ ಅಸ್ತಿತ್ವಕ್ಕಾಗಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಪ್ರಧಾನಿಗೆ ಹೇಳಿ ಅವರು ರಾಜ್ಯಕ್ಕೆ ಬರಬೇಕಾದ ರಾಜ್ಯದ ಪಾಲಿನ ಬರ ಪರಿಹಾರ ದೊರಕಿಸಿ ಕೊಡಲಿ. ಜಾತ್ಯತೀತ ಎಂದು ಪಕ್ಷದ ಹೆಸರಿಟ್ಟುಕೊಂಡು ಈಗ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.