ಕಾಡಿನಲ್ಲಿದ್ದು ಶಸ್ತ್ರಾಸ್ತ್ರಗಳಿಂದ ಸಾಧನೆ ಅಸಾಧ್ಯ: ಮಾಜಿ ನಕ್ಸಲ್ ಸಲೀಂ

| Published : Feb 02 2025, 11:47 PM IST

ಕಾಡಿನಲ್ಲಿದ್ದು ಶಸ್ತ್ರಾಸ್ತ್ರಗಳಿಂದ ಸಾಧನೆ ಅಸಾಧ್ಯ: ಮಾಜಿ ನಕ್ಸಲ್ ಸಲೀಂ
Share this Article
  • FB
  • TW
  • Linkdin
  • Email

ಸಾರಾಂಶ

ಇನ್ನು ಮುಂದೆ ಶಸ್ತ್ರಾಸ್ತ್ರ ಹೋರಾಟದಿಂದ ಯಾವುದೇ ಸಾಧನೆ ಮಾಡುವುದಕ್ಕಾಗುವುದಿಲ್ಲ ಎಂಬ ಸತ್ಯದರ್ಶನವಾಗಿ 2009ರಲ್ಲಿ ನಕ್ಸಲ್ ಚಳುವಳಿ ಬಿಟ್ಟು ಹೊರಗೆ ಬಂದಿರುವ ಸಲೀಂ ಯಾನೆ ಸಂಜೀವ, ಇನ್ನು ಯಾರೂ ಕೂಡ ಶಸ್ತ್ರಾಸ್ತ್ರ ಹಿಡಿದು ಕಾಡಿಗೆ ಹೋಗಿ ಹೋರಾಟ ಮಾಡಬೇಕಾಗಿಲ್ಲ, ಹೋರಾಟ ಮಾಡುವುದಿದ್ದರೆ ಅಂಬೇಡ್ಕರ್‌ ಅವರ ಸಂವಿಧಾನದಡಿ ಹೋರಾಟ ಮಾಡಿ ಎಂದು ಸಲಹೆ ಮಾಡಿದ್ದಾರೆ.

ನಾನೂ ಕರ್ನಾಟಕದವನು, ಮುಂದೆ ಪತ್ನಿ ಲಕ್ಷ್ಮೀ ಜೊತೆ ಇಲ್ಲೇ ವಾಸ ಮಾಡುತ್ತೇನೆ

ಕನ್ನಡಪ್ರಭ ವಾರ್ತೆ ಉಡುಪಿ

ಇನ್ನು ಮುಂದೆ ಶಸ್ತ್ರಾಸ್ತ್ರ ಹೋರಾಟದಿಂದ ಯಾವುದೇ ಸಾಧನೆ ಮಾಡುವುದಕ್ಕಾಗುವುದಿಲ್ಲ ಎಂಬ ಸತ್ಯದರ್ಶನವಾಗಿ 2009ರಲ್ಲಿ ನಕ್ಸಲ್ ಚಳುವಳಿ ಬಿಟ್ಟು ಹೊರಗೆ ಬಂದಿರುವ ಸಲೀಂ ಯಾನೆ ಸಂಜೀವ, ಇನ್ನು ಯಾರೂ ಕೂಡ ಶಸ್ತ್ರಾಸ್ತ್ರ ಹಿಡಿದು ಕಾಡಿಗೆ ಹೋಗಿ ಹೋರಾಟ ಮಾಡಬೇಕಾಗಿಲ್ಲ, ಹೋರಾಟ ಮಾಡುವುದಿದ್ದರೆ ಅಂಬೇಡ್ಕರ್‌ ಅವರ ಸಂವಿಧಾನದಡಿ ಹೋರಾಟ ಮಾಡಿ ಎಂದು ಸಲಹೆ ಮಾಡಿದ್ದಾರೆ.

ಭಾನುವಾರ ಪತ್ನಿ ಉಡುಪಿ ಮೂಲದ ನಕ್ಸಲ್‌ ಲಕ್ಷ್ಮೀ ತೊಂಬಟ್ಟು ಉಡುಪಿ ಜಿಲ್ಲಾಡಳಿತದ ಮುಂದೆ ಶರಣಾಗುವ ಸಂದರ್ಭದಲ್ಲಿ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ನಾನು ಕೂಡ ಮೂಲತಃ ಕರ್ನಾಟಕದವನೇ, ಪಾವಗಡ ತಾಲೂಕಿನವನು. 2004 ರಿಂದ 2009ರ ತನಕ ನಾನು ನಕ್ಸಲ್ ಚಳವಳಿಯಲ್ಲದ್ದೆ, ಅದರಲ್ಲಿ ಕರ್ನಾಟಕದಲ್ಲಿದ್ದುದು ಕೇವಲ 6 ತಿಂಗಳು ಮಾತ್ರ. ಉಳಿದೆಲ್ಲಾ ಕಾಲ ಆಂಧ್ರದಲ್ಲಿ ಹೋರಾಟ ನಡೆಸುತ್ತಿದ್ದೆ. ಈ ಸಂದರ್ಭದಲ್ಲಿಯೇ ಲಕ್ಷ್ಮೀಯನ್ನು ಮದುವೆಯಾದೆ, ನಕ್ಸಲ್ ಆಗಿದ್ದರೆ ಯಾವ ಪ್ರಯೋಜನ ಇಲ್ಲ, ಯಾವ ಸಾಧನೆ ಮಾಡಲು ಸಾಧ್ಯವಿಲ್ಲ ಎಂಬ ಅರಿವಾಯಿತು. ಹೀಗಾಗಿ 2009ರಲ್ಲಿ ರಾಜಶೇಖರ ರೆಡ್ಡಿ ಅವರು ಸಿಎಂ ಆಗಿದ್ದಾಗ ಮುಖ್ಯವಾಹಿನಿಗೆ ಮರಳಿದೆ ಎಂದರು.

ಚಳವಳಿ ಮಾಡುವ ಕಾಲದಲ್ಲಿ ಮಾಡಿದ್ದೇನೆ. ಆದರೆ ಈ ತಲೆಮಾರಿನಲ್ಲಿ ಶಸ್ತ್ರಾಸ್ತ್ರ ಚಳುವಳಿಗಳು ಸಾಧ್ಯವಿಲ್ಲ. ಬಂದೂಕು ಹಿಡಿದುಕೊಂಡು ಕಾಡಿಗೆ ಹೋಗಿ ಹೋರಾಟ ಮಾಡುವ ಅವಶ್ಯಕತೆ ಇಲ್ಲ, ಹೊರಗೆ ಬಂದು ಅಂಬೇಡ್ಕರ್ ಕೊಟ್ಟ ಸಂವಿಧಾನದ ಮೂಲಕ ಚಳುವಳಿ ಮಾಡಿ, ಸಂವಿಧಾನದಡಿ ಏನು ಬೇಕಾದರೂ ಸಾಧನೆ ಮಾಡಬಹುದಾಗಿದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಶರಣಾಗತಿಗೆ ಕರೆಕೊಟ್ಟಿದ್ದಾರೆ ಎಂದು ಲಕ್ಷ್ಮೀಯ ಅಕ್ಕ, ಅಣ್ಣ ತಿಳಿಸಿದರು. ಅದರಂತೆ ಕರ್ನಾಟಕಕ್ಕೆ ಹೋಗಿ ಶರಣಾಗು ಎಂದು ನಾನೂ ಸಲಹೆ ಮಾಡಿದೆ. ಶರಣಾಗುವುದು ಆಕೆಯದ್ದೇ ನಿರ್ಧಾರ, ಸ್ವತಃ ಬಂದು ಶರಣಾಗಿದ್ದಾಳೆ. ಆಕೆಯ ವಿರುದ್ಧದ 3 ಪ್ರಕರಣಗಳು ಕ್ಲೋಸ್ ಆಗಲಿದೆ ಎಂದು ನಂಬಿ ಶರಣಾಗಿದ್ದಾಳೆ ಎಂದರು.

ಕರ್ನಾಟಕದಲ್ಲಿ ನನ್ನ ಮೇಲೆ ಯಾವುದೇ ಪ್ರಕರಣಗಳಿಲ್ಲ, ಆಂಧ್ರದಲ್ಲಿದ್ದ ಎಲ್ಲ ಪ್ರಕರಣ ರದ್ದಾಗಿವೆ. ಪ್ರಸ್ತುತ ಆಂಧ್ರಪ್ರದೇಶದಲ್ಲಿ ಉದ್ಯಮ ನಡೆಸುತ್ತಿದ್ದೇನೆ. ಇಲ್ಲಿ ಲಕ್ಷ್ಮೀ ವಿರುದ್ಧದ ಪ್ರಕರಣಗಳು ಮುಗಿದ ನಂತರ ಕರ್ನಾಟಕಕ್ಕೆ ಬಂದು ಇಲ್ಲೇ ಅವಳೊಂದಿಗೆ ವಾಸ ಮಾಡುತ್ತೇನೆ ಎಂದರು.