ಜಿಲ್ಲಾಧಿಕಾರಿ ಸೂಚನೆಯನ್ನು ಅಧಿಕಾರಿಗಳು, ಸಂಬಂಧಿಸಿದ ಸಂಸ್ಥೆಗಳು ಎಷ್ಟರ ಮಟ್ಟಿಗೆ ಗಂಭೀರವಾಗಿ ಪರಿಗಣಿಸುತ್ತವೆ ಎಂಬ ಕುತೂಹಲ ಮೂಡಿದೆ.
ಮಂಜುನಾಥ ಕೆ.ಎಂ.
ಬಳ್ಳಾರಿ: ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ಮಟ್ಟದ ಕನ್ನಡ ಜಾಗೃತಿ ಸಭೆ ನಡೆಸಿ, ಎಲ್ಲ ಇಲಾಖೆಗಳು, ಸಂಸ್ಥೆಗಳು, ವಾಣಿಜ್ಯ ಮತ್ತು ನಿಗಮ ಮಂಡಳಿಗಳಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿ ಪತ್ರ ವ್ಯವಹರಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.ಆದರೆ, ಜಿಲ್ಲಾಡಳಿತ ಸೂಚನೆ ಎಷ್ಟರ ಮಟ್ಟಿಗೆ ಜಾರಿಯಾಗುತ್ತದೆ? ಜಿಲ್ಲಾಧಿಕಾರಿ ಸೂಚನೆಯನ್ನು ಅಧಿಕಾರಿಗಳು, ಸಂಬಂಧಿಸಿದ ಸಂಸ್ಥೆಗಳು ಎಷ್ಟರ ಮಟ್ಟಿಗೆ ಗಂಭೀರವಾಗಿ ಪರಿಗಣಿಸುತ್ತವೆ ಎಂಬ ಕುತೂಹಲ ಮೂಡಿದೆ.
ಈ ರೀತಿಯ ಕುತೂಹಲಕ್ಕೆ ಕಾರಣವೂ ಇದೆ. ಈ ಹಿಂದಿನ ಜಿಲ್ಲಾಧಿಕಾರಿ ನಿಯಮದಂತೆ ಕನ್ನಡ ಜಾಗೃತಿ ಸಭೆ ನಡೆಸಿ, ಕೈ ತೊಳೆದುಕೊಂಡರೇ ವಿನಃ, ಕನ್ನಡ ಅನುಷ್ಠಾನಕ್ಕೆ ಹೆಚ್ಚಿನ ಮುತುವರ್ಜಿ ವಹಿಸಲಿಲ್ಲ. ಈ ಬಗ್ಗೆ ಧ್ವನಿ ಎತ್ತಬೇಕಾದ ಸಂಘಟನೆಗಳು ಜಿಲ್ಲಾಡಳಿತ ವೈಖರಿಯನ್ನು ಪ್ರಶ್ನಿಸುವ ಧೈರ್ಯವೂ ತೋರಿಸಲಿಲ್ಲ. ಕನ್ನಡ ಜಾಗೃತಿ ಸಭೆ ನಾಮಕಾವಾಸ್ತೆ ಎಂಬಂತಾಗಿತ್ತಲ್ಲದೆ, ಗಡಿನಾಡು ಬಳ್ಳಾರಿಯಲ್ಲಿ ಕನ್ನಡದ ವಾತಾವರಣ ಮಂಕಾದರೂ ಪ್ರಶ್ನಿಸುವವರು ಇಲ್ಲದಂತಾಗಿದೆ.ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ತೆಲುಗು ಭಾಷಿಕರದ್ದೇ ಹಾವಳಿ. ಪಾಲಿಕೆಯ ಪ್ರತಿ ವಿಭಾಗದಲ್ಲೂ ಕನ್ನಡ ಮಾತನಾಡುವವರು ಅಪರೂಪ ಎಂಬಂತಾಗಿದೆ. ಜವಾನರಿಂದ ಹಿಡಿದು ಅಧಿಕಾರಿಸ್ಥ ವಲಯದಲ್ಲಿ ತೆಲುಗು ಭಾಷಿಕರೇ ಹೆಚ್ಚು. ಹೊರ ಜಿಲ್ಲೆಗಳಿಂದ ಬಂದಿರುವ ಅಧಿಕಾರಿಗಳು ಹೊರತುಪಡಿಸಿದರೆ, ಸ್ಥಳೀಯರು ಮಾತು ಶುರು ಮಾಡುವುದೇ ತೆಲುಗಿನಲ್ಲಿ. ಪಾಲಿಕೆಯ ಸದಸ್ಯರಾಗಿ ಆಯ್ಕೆಗೊಳ್ಳುವವರು ಸಹ ಹೆಚ್ಚಿನ ಸಂಖ್ಯೆಯಲ್ಲಿ ತೆಲುಗು ಭಾಷಿಕರೇ ಆಗಿರುವುದು ಮಹಾನಗರ ಪಾಲಿಕೆಯಲ್ಲಿ ಕನ್ನಡಕ್ಕೆ ಆದ್ಯತೆಗೆ ಧಕ್ಕೆ ಬರಲು ಪ್ರಮುಖ ಕಾರಣವೂ ಆಗಿದೆ.
ಇದನ್ನು ಸರಿಪಡಿಸಬೇಕಾದ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತ ಸೇರಿದಂತೆ ಯಾರೂ ಈ ಬಗ್ಗೆ ಗಮನ ಹರಿಸಿಲ್ಲ. ಇನ್ನು ಬ್ಯಾಂಕ್ ವಲಯದಲ್ಲಿ ಹೊರ ರಾಜ್ಯಗಳ ಅಧಿಕಾರಿಗಳು, ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿದ್ದು ಕನ್ನಡಕ್ಕೆ ಆದ್ಯತೆ ಮರೆಯಾಗಿದೆ. ಕನ್ನಡೇತರರ ನೇಮಕಾತಿಯಿಂದಾಗಿ ಬ್ಯಾಂಕುಗಳಲ್ಲಿ ಸ್ಥಳೀಯ ಭಾಷೆ ಬಳಕೆ ಚ್ಯುತಿಗೊಂಡಿದೆ. ಸರ್ಕಾರಿ ಮತ್ತು ಖಾಸಗಿ ಕಚೇರಿಯ ನಾಮಫಲಕ, ವಾಣಿಜ್ಯ ಮತ್ತು ಅಂಗಡಿ ಮುಂಗಟ್ಟುಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಕಡ್ಡಾಯ, ಮಾರ್ಗಸೂಚಿಯನ್ನು ಪಾಲಿಸುವವರೇ ಅಪರೂಪ ಎಂಬಂತಾಗಿದೆ. ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ವಿವಿಧ ಸ್ಥಳಗಳಲ್ಲಿ ಅಳವಡಿಸುವ ಜಾಹಿರಾತು ಬ್ಯಾನರ್‌ಗಳಲ್ಲಿ ಕನ್ನಡ ಮಾಯವಾದರೂ ಪ್ರಶ್ನಿಸುವವರಿಲ್ಲ.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಕನ್ನಡ ಜಾಗೃತಿ ಸಮಿತಿ ಸಭೆ ಜರುಗಿದ್ದು, ಸಭೆಯಲ್ಲಿ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಅಧ್ಯಕ್ಷತೆ ವಹಿಸಿ ಆಡಳಿತದಲ್ಲಿ ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರಲ್ಲದೆ, ಸರ್ಕಾರದ ಎಲ್ಲ ಕಚೇರಿಗಳು, ಸಂಘ ಸಂಸ್ಥೆಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಕಸಾಪ, ಕನ್ನಡಪರ ಸಂಘಟನೆಗಳ ಸದಸ್ಯರು ಹಾಗೂ ಜಾಗೃತಿ ಸಮಿತಿ ಸದಸ್ಯರು, ಕನ್ನಡ ಅನುಷ್ಠಾನ ವಿಚಾರದಲ್ಲಿ ತೋರಿಸುತ್ತಿರುವ ನಿರ್ಲಕ್ಷ್ಯದ ಬಗ್ಗೆ ಬೇಸರ ವ್ಯಕ್ತಪಡಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಕನ್ನಡ ಬಳಕೆಯ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡಬೇಕು. ಪಾಲಿಸದೇ ಇರುವ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸೂಚಿಸಿದ್ದಾರೆ. ಜಿಲ್ಲಾಧಿಕಾರಿಯ ಈ ಸೂಚನೆ ಎಷ್ಟರ ಮಟ್ಟಿಗೆ ಜಾರಿಗೊಂಡು, ಕನ್ನಡ ಅನುಷ್ಠಾನಕ್ಕೆ ಪೂರಕವಾಗುತ್ತದೆ ಎಂಬ ಕುತೂಹಲವಿದೆ.