ಗೃಹಲಕ್ಷ್ಮಿ ಯೋಜನೆಯಲ್ಲಿ ಹೆಬ್ಬಳ್ಳಿ ಮತ್ತು ಕನಕೂರು ಭಾಗದ 6 ಗ್ರಾಮಗಳ 4,788 ಮಹಿಳೆಯರ ಖಾತೆಗೆ ಈ ವರೆಗೆ ಒಟ್ಟು ₹ 22.02 ಕೋಟಿ ನೇರವಾಗಿ ಜಮೆಯಾಗಿದೆ. ಇದು ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ದೊಡ್ಡ ಶಕ್ತಿ ತುಂಬಿದೆ.

ಧಾರವಾಡ:

ಗ್ರಾಮೀಣ ಭಾಗದ ಪ್ರತಿಯೊಬ್ಬ ಅರ್ಹ ನಾಗರಿಕನಿಗೂ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಲಾಭ ತಲುಪಿಸುವುದೇ ನಮ್ಮ ಮೊದಲ ಆದ್ಯತೆ ಎಂದು ಧಾರವಾಡ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅರವಿಂದ ಏಗನಗೌಡರ ಹೇಳಿದರು.

ತಾಲೂಕಿನ ಹೆಬ್ಬಳ್ಳಿ ಮತ್ತು ಕನಕೂರು ಗ್ರಾಪಂ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಮನೆ ಬಾಗಿಲಿಗೆ ಗ್ಯಾರಂಟಿ ಯೋಜನೆಗಳ ಶಿಬಿರದಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆಯಲ್ಲಿ ಹೆಬ್ಬಳ್ಳಿ ಮತ್ತು ಕನಕೂರು ಭಾಗದ 6 ಗ್ರಾಮಗಳ 4,788 ಮಹಿಳೆಯರ ಖಾತೆಗೆ ಈ ವರೆಗೆ ಒಟ್ಟು ₹ 22.02 ಕೋಟಿ ನೇರವಾಗಿ ಜಮೆಯಾಗಿದೆ. ಇದು ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ದೊಡ್ಡ ಶಕ್ತಿ ತುಂಬಿದೆ ಎಂದರು.

ಗೃಹಜ್ಯೋತಿ ಯೋಜನೆಯಲ್ಲಿ ಈ ಭಾಗದ ಬಹುತೇಕ ಕುಟುಂಬಗಳು ಪ್ರತಿ ತಿಂಗಳು ಶೂನ್ಯ ವಿದ್ಯುತ್ ಬಿಲ್ ಪಡೆಯುತ್ತಿದ್ದು, ಜನಸಾಮಾನ್ಯರ ಮೇಲಿನ ಆರ್ಥಿಕ ಹೊರೆ ತಗ್ಗಿದೆ ಎಂದ ಅವರು, ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ ಸಿಗುತ್ತಿದ್ದು, ಶೈಕ್ಷಣಿಕ, ಧಾರ್ಮಿಕ ಮತ್ತು ಆರ್ಥಿಕ ಚಟುವಟಿಕೆಗಳಿಗೆ ವೇಗ ಸಿಕ್ಕಿದೆ. ಹಾಗೆಯೇ, ಅನ್ನಭಾಗ್ಯ, ಯುವನಿಧಿ ಪ್ರಯೋಜನ ಸಹ ಪಡೆಯಲಾಗಿದೆ ಎಂದು ಹೇಳಿದರು.

ತಾಪಂ ಇಒ ಗಂಗಾಧರ ಕಂದಕೂರ, ಇ-ಕೆವೈಸಿ ಅಥವಾ ಬ್ಯಾಂಕ್ ಖಾತೆ ಜೋಡಣೆಯ ತೊಂದರೆಯಿಂದ ಹಣ ಬರದಿದ್ದಲ್ಲಿ ಅಂತಹ ಪ್ರಕರಣಗಳನ್ನು ಈ ಶಿಬಿರದ ಮೂಲಕ ಸ್ಥಳದಲ್ಲೇ ಇತ್ಯರ್ಥಪಡಿಸಲಾಗುತ್ತಿದೆ ಎಂದರು.

ಹೆಬ್ಬಳ್ಳಿ ಗ್ರಾಪಂ ಅಧ್ಯಕ್ಷ ವಿಠ್ಠಲ ಭೋವಿ, ಕನಕೂರು ಗ್ರಾಪಂ ಅಧ್ಯಕ್ಷ ರಾಜು ಹುಡೇದ, ಜಿಪಂ ಮಾಜಿ ಸದಸ್ಯ ಚನ್ನಬಸಪ್ಪ ಮಟ್ಟಿ, ಅನುಷ್ಠಾನ ಸಮಿತಿ ಸದಸ್ಯರಾದ ಚಂದ್ರಶೇಖರ ಕದಂ, ಕಲಾವತಿ ಭೀಮಕ್ಕನವರ, ಮಿಲಿಂದ ಇಚಂಗಿ, ಕಾರ್ತಿಕ ಗೋಕಾಕ, ಮಂಜು ಉಡಕೇರಿ, ಪರಮೇಶ್ವರ ಕಾಳೆ ಇದ್ದರು.