ಎದುರುಗಡೆಯಿಂದ ಕಂಟೇನರ್ ಲಾರಿಯೊಂದು ಡಿವೈಡರ್ ದಾಟಿ ಬಂದು ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದಿದ್ದು, ಖಾಸಗಿ ಬಸ್ ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆ ಜವನಗೊಂಡನ ಸಮೀಪದ ಗೊರ್ಲಡಕು ಗೇಟ್ ಬಳಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಮುಂಜಾನೆ ನಡೆದಿದೆ.
ಕನ್ನಡಪ್ರಭ ವಾರ್ತೆ ಹಿರಿಯೂರು
ಎದುರುಗಡೆಯಿಂದ ಕಂಟೇನರ್ ಲಾರಿಯೊಂದು ಡಿವೈಡರ್ ದಾಟಿ ಬಂದು ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದಿದ್ದು, ಖಾಸಗಿ ಬಸ್ ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆ ಜವನಗೊಂಡನ ಸಮೀಪದ ಗೊರ್ಲಡಕು ಗೇಟ್ ಬಳಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಮುಂಜಾನೆ ನಡೆದಿದೆ. ದುರಂತದಲ್ಲಿ ಕಂಟೇನರ್ ಲಾರಿಯ ಚಾಲಕ ಸೇರಿ ಐವರು ಸಜೀವ ದಹನವಾಗಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೂವರು ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.ಖಾಸಗಿ ಬಸ್ (ಸೀಬರ್ಡ್) ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿತ್ತು. ಬಸ್‌ನಲ್ಲಿ 29 ಪ್ರಯಾಣಿಕರು, ಮೂವರು ಸಿಬ್ಬಂದಿ ಇದ್ದರು. ರಾತ್ರಿ 2 ಗಂಟೆ ಸುಮಾರಿಗೆ ಬಸ್ ಗೊರ್ಲಡಕು ಗೇಟ್ ಬಳಿ ಬರುತ್ತಿದ್ದಾಗ ಹಿರಿಯೂರಿನಿಂದ ಬೆಂಗಳೂರು ಕಡೆ ಹೋಗುತ್ತಿದ್ದ ಕಂಟೇನರ್ ಲಾರಿ ಹೆದ್ದಾರಿ ನಡುವೆ ಇದ್ದ ರಸ್ತೆ ವಿಭಜಕ ದಾಟಿ ಬಂದು, ಬಸ್‌ನ ಡೀಸೆಲ್ ಟ್ಯಾಂಕ್‌ಗೆ ಡಿಕ್ಕಿ ಹೊಡೆಯಿತು. ಡಿಕ್ಕಿಯ ರಭಸಕ್ಕೆ ಬಸ್ಸು ಹೊತ್ತಿ ಉರಿದಿದೆ. ಬಸ್‌ನಲ್ಲಿದ್ದ ಬಹುತೇಕ ಪ್ರಯಾಣಿಕರು ಗಾಢ ನಿದ್ರೆಯಲ್ಲಿದ್ದರು. ಬಸ್ಸಿನಲ್ಲಿ ಹೊಗೆ ಆವರಿಸಿದ್ದರಿಂದ ಏನೂ ಕಾಣದಂತಾಗಿ ಕೆಲವರು ಕಿಟಕಿಯಿಂದ ಹೊರಗೆ ಜಿಗಿದಿದ್ದಾರೆ. ಮತ್ತೆ ಕೆಲವರು ಬಸ್ಸಿನ ಹಿಂಭಾಗದಿಂದ ಕೆಳಗೆ ಹಾರಿದ್ದಾರೆ. ನಾಲ್ವರು ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದ್ದಾರೆ. ಮೃತದೇಹಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಡಿಎನ್‌ಎ ಪರೀಕ್ಷೆ ಮೂಲಕ ಗುರುತು ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಲಾರಿ, ಹರಿಯಾಣ ರಾಜ್ಯದ ನೋಂದಣಿ ಹೊಂದಿದ್ದು, ಚಾಲಕನ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದಲ್ಲಿ ಲಾರಿಯ ಚಾಲಕ ಕೂಡ ಸಜೀವ ದಹನವಾಗಿದ್ದಾನೆ.ಬಸ್‌ನಲ್ಲಿ 29 ಪ್ರಯಾಣಿಕರು, ಇಬ್ಬರು ಚಾಲಕರು ಸೇರಿ ಮೂವರು ಸಿಬ್ಬಂದಿ ಪ್ರಯಾಣಿಸುತ್ತಿದ್ದು, 25 ಮಂದಿ ಬದುಕುಳಿದಿದ್ದಾರೆ. ಗಾಯಾಳುಗಳ ಪೈಕಿ 12 ಮಂದಿಯನ್ನು ಹಿರಿಯೂರು ಸರ್ಕಾರಿ ಆಸ್ಪತ್ರೆ, 9 ಮಂದಿಯನ್ನು ಶಿರಾ ಸಾರ್ವಜನಿಕ ಆಸ್ಪತ್ರೆ ಹಾಗೂ ಇಬ್ಬರನ್ನು ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೀಬರ್ಡ್ ಬಸ್‌ನ ಚಾಲಕ ಮೊಹಮ್ಮದ್ ರಫೀಕ್ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ. ರಫೀಕ್‌ಗೆ ಎರಡೂ ಕಾಲು ಹಾಗೂ ಒಂದು ಕೈ ಮುರಿದಿದೆ. ಮೂವರು ನಾಪತ್ತೆಯಾಗಿದ್ದು, ಘಟನೆಯ ನಂತರ ಬೇರೆ ಕಡೆ ಆಸ್ಪತ್ರೆಗೆ ಅವರು ದಾಖಲಾಗಿರುವ ಶಂಕೆಯಿದೆ.
ಅಪಘಾತದಿಂದಾಗಿ ಕಿ.ಮೀ.ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬಳಿಕ, ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ಸುಟ್ಟಿದ್ದ ಬಸ್ ಮತ್ತು ಕಂಟೈನರ್ ಲಾರಿಯನ್ನು ತೆರವು ಮಾಡಿದರು.ಶಾಲಾ ಮಕ್ಕಳು ಪಾರು:ಗೊರ್ಲಡಕು ಗೇಟ್ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೆಂಗಳೂರಿನಿಂದ ದಾಂಡೇಲಿಗೆ ಪ್ರವಾಸ ಹೊರಟಿದ್ದ 43 ಶಾಲಾ ಮಕ್ಕಳು ಮತ್ತು ಮೂವರು ಶಿಕ್ಷಕರು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ. ಬೆಂಗಳೂರಿನ ಟಿ.ದಾಸರಹಳ್ಳಿಯ ಶಾಲೆಯೊಂದರ ಮಕ್ಕಳು ಹಾಗೂ ಶಿಕ್ಷಕರು ಇದ್ದ ಬಸ್ ಅಪಘಾತಕ್ಕೀಡಾದ ಖಾಸಗಿ ಬಸ್ ಹಿಂದೆಯೇ ಚಲಿಸುತ್ತಿತ್ತು. ಚಾಲಕ ಸಚಿನ್ ಓಡಿಸುತ್ತಿದ್ದ ಬಸ್ಸನ್ನು ಈ ಸೀಬರ್ಡ್ ಬಸ್ ಓವರ್ ಟೇಕ್ ಮಾಡಿತ್ತು. ಬಳಿಕ, ಸೀಬರ್ಡ್ ಬಸ್‌ಗೆ ಕಂಟೇನರ್ ಲಾರಿ ಡಿಕ್ಕಿ ಹೊಡೆದಿತ್ತು. ಈ ವೇಳೆ, ಸಚಿನ್ ಓಡಿಸುತ್ತಿದ್ದ ಬಸ್, ಸೀಬರ್ಡ್ ಬಸ್‌ಗೆ ಹಿಂದಿನಿಂದ ತಾಕುತ್ತಿದ್ದಂತೆ ಕೂಡಲೇ ಶಾಲಾ ಬಸ್‌ನ ಚಾಲಕ ಬಸ್ಸನ್ನು ಕಂದಕಕ್ಕೆ ಇಳಿಸಿದ್ದಾನೆ, ಸರ್ವಿಸ್ ರಸ್ತೆಗೆ ತಿರುಗಿಸಿ, ಮಕ್ಕಳ ಜೀವ ಉಳಿಸಿದ್ದಾನೆ. ಘಟನೆಯಲ್ಲಿ ಶಾಲಾ ಬಸ್‌ನ ಮುಂಭಾಗ ಜಖಂಗೊಂಡಿದ್ದು, ಬೇರೊಂದು ಬಸ್ ಮೂಲಕ ಅವರು ಪ್ರವಾಸಕ್ಕೆ ತೆರಳಿದ್ದಾರೆ.ಬಸ್ ದುರಂತ ಬಳಿಕ ರಶ್ಮಿ ನಾಪತ್ತೆ:
ಕ್ರಿಸ್‌ಮಸ್ ರಜೆ ಹಿನ್ನೆಲೆಯಲ್ಲಿ ಗೆಳತಿಯರೊಂದಿಗೆ ಗೋಕರ್ಣ ಪ್ರವಾಸಕ್ಕೆ ತೆರಳಿದ್ದ ಭಟ್ಕಳ ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ರಶ್ಮಿ ಮಹಾಲೆ, ಬಸ್ ದುರಂತದ ಬಳಿಕ ನಾಪತ್ತೆಯಾಗಿದ್ದಾರೆ. ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರಶ್ಮಿ, ಪ್ರವಾಸಕ್ಕಾಗಿ ಪಟ್ಟು ಹಿಡಿದು ರಜೆ ಪಡೆದು ಹೊರಟಿದ್ದರು ಎನ್ನಲಾಗಿದೆ.ನಾಲ್ಕು ದಿನಗಳ ಪ್ರವಾಸದ ಹಿನ್ನೆಲೆಯಲ್ಲಿ ರಶ್ಮಿ ಸೋಮವಾರದವರೆಗೆ ರಜೆ ನೀಡುವಂತೆ ಮ್ಯಾನೇಜರ್ ಬಳಿ ಕೇಳಿದ್ದರು. ಮೊದಲು ರಜೆ ನೀಡಲು ನಿರಾಕರಿಸಿದ್ದ ಮ್ಯಾನೇಜರ್ ಬಳಿ ಹಠ ಮಾಡಿ ರಜೆ ಮಂಜೂರು ಮಾಡಿಸಿಕೊಂಡಿದ್ದರು. ಅದರಂತೆ ಬುಧವಾರ ಸಂಜೆ ಕೆಲಸ ಮುಗಿಸಿ ಇಬ್ಬರು ಸ್ನೇಹಿತೆಯರೊಂದಿಗೆ ಗೋಕರ್ಣದತ್ತ ಪ್ರಯಾಣ ಬೆಳೆಸಿದ್ದರು. ಈ ಪೈಕಿ, ಆಕೆಯ ಇಬ್ಬರು ಗೆಳತಿಯರಾದ ಗಗನ ಮತ್ತು ರಕ್ಷಿತಾ ಅಪಾಯದಿಂದ ಪಾರಾಗಿದ್ದಾರೆ. ಆದರೆ, ರಶ್ಮಿಯವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಸಂಪರ್ಕಕ್ಕೆ ಸಿಗುತ್ತಿಲ್ಲ. ಆತಂಕಗೊಂಡಿರುವ ಕುಟುಂಬಸ್ಥರು ಮತ್ತು ಪೊಲೀಸರು ರಶ್ಮಿ ಪತ್ತೆಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.ಇದೇ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕುಮಟಾ ಮೂಲದ ವಿಜಯ ಭಂಡಾರಿ ಹಾಗೂ ಮೇಘರಾಜ ಎನ್ನುವವರು ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ. ಅಪಘಾತದ ನಂತರ ಇವರ ಪಾಲಕರಿಗೆ ಇವರಿಬ್ಬರೂ ಮೊಬೈಲ್ ಸಂಪರ್ಕಕ್ಕೆ ಸಿಗದೆ ಆತಂಕ ಉಂಟಾಗಿತ್ತು.ಬ್ಯಾಚುಲರ್ ಪಾರ್ಟಿಗೆ ಹೊರಟಿದ್ದ ತಾಯಿ-ಮಗಳ ದುರಂತ ಸಾವು:ಚಿತ್ರದುರ್ಗದಲ್ಲಿ ಸಂಭವಿಸಿದ ಬಸ್ ದುರಂತದಲ್ಲಿ ತಮ್ಮ ಆಪ್ತ ಒಡನಾಡಿಯ ಬ್ಯಾಚುಲರ್ ಪಾರ್ಟಿ ಸಲುವಾಗಿ ಗೋಕರ್ಣಕ್ಕೆ ಹೊರಟ್ಟಿದ್ದ ತಾಯಿ-ಮಗಳು ಮೃತಪಟ್ಟು, ಐವರು ಗಾಯಗೊಂಡಿದ್ದಾರೆ.ಬೆಂಗಳೂರಿನ ಶ್ರೀನಿವಾಸಪುರ ಸಮೀಪದ ಬ್ಯಾಂಕ್ ಕಾಲೊನಿಯ ಬಿಂದು, ಅವರ ಪುತ್ರಿ ಗ್ರಿಯಾ ಮೃತಪಟ್ಟಿದ್ದು, ದೊಡ್ಡ ಮಾವಳ್ಳಿ ನಿವಾಸಿಗಳಾದ ಕವಿತಾ, ಮಂಜುನಾಥ್, ಶಶಾಂಕ್, ರಾಮಮೂರ್ತಿ ನಗರದ ಸಂಧ್ಯಾ, ಶಾಂತಿನಗರದ ದಿಲೀಪ್ ಗಾಯಗೊಂಡಿದ್ದಾರೆಂದು ತಿಳಿದು ಬಂದಿದೆ.ಇನ್ನು ಈ ಗಾಯಾಳುಗಳ ಪೈಕಿ ಮಂಜುನಾಥ್ ಅವರ ಪರಿಸ್ಥಿತಿ ಗಂಭೀರವಾಗಿದ್ದು, ಘಟನೆಯಲ್ಲಿ ಶೇ.24 ರಷ್ಟು ಅವರ ದೇಹ ಸುಟ್ಟಿದೆ. ವಿಕ್ಟೋರಿಯಾ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಅವರು ಜೀನ್ಮರಣ ಹೋರಾಟ ನಡೆಸುತ್ತಿದ್ದಾರೆ. ಇನ್ನುಳಿದ ಶಶಾಂಕ್. ಸಂಧ್ಯಾ ಹಾಗೂ ದಿಲೀಪ್ ಅವರು ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ ಎನ್ನಲಾಗಿದೆ.ಮುಂದಿನ ವರ್ಷದ ಏಪ್ರಿಲ್‌ನಲ್ಲಿ ಖಾಸಗಿ ಕಂಪನಿ ಉದ್ಯೋಗಿ ಕವಿತಾ ವಿವಾಹ ನಿಶ್ಚಯವಾಗಿತ್ತು. ಈ ಹಿನ್ನಲೆಯಲ್ಲಿ ಕ್ರಿಸ್ ಮಸ್ ರಜೆಯಲ್ಲಿ ತಮ್ಮ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಬ್ಯಾಚುಲರ್ ಪಾರ್ಟಿ ನೀಡಲು ಅವರು ಯೋಜಿಸಿದ್ದರು. ಅಂತೆಯೇ ತಮ್ಮ ಆಪ್ತರನ್ನು ಗೋಕರ್ಣ ಪ್ರವಾಸಕ್ಕೆ ಕವಿತಾ ಕರೆದುಕೊಂಡು ಹೋಗುತ್ತಿದ್ದರು. ಆದರೆ ಅವರ ಸುಂದರ ಕನಸುಗಳು ಹಿರಿಯೂರು ಸಮೀಪ ಸಂಭವಿಸಿ ಬಸ್ ಅಗ್ನಿ ದುರಂತದಲ್ಲಿ ಬೆಂದು ಹೋಗಿವೆ.