ಸುಸಂಸ್ಕೃತರ ಜಿಲ್ಲೆಯಲ್ಲಿ ಇಂತಹ ಅಮಾನವೀಯ ಘಟನೆ ನಡೆಯಬಾರದಾಗಿತ್ತು. ದೌರ್ಜನ್ಯ ಪೀಡಿತ ಕುಟುಂಬಕ್ಕೆ ಸಕಾಲಕ್ಕೆ ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಸೂಕ್ತ ಭದ್ರತೆ, ಅಗತ್ಯ ನೆರವು ನೀಡಿದೆ. ಹೀಗಾಗಿಯೇ ಹೆಚ್ಚಿನ ಅನಾಹುತ ತಪ್ಪಿರುವುದು ಅವಲೋಕಿಸಿದಾಗ ಕಂಡು ಬಂದಿದೆ ಎಂದು ಎಲ್‌. ಮೂರ್ತಿ ಹೇಳಿದರು.

ಹುಬ್ಬಳ್ಳಿ:

ಮರ್ಯಾದೆಗೇಡು ಹತ್ಯೆ ಪ್ರಕರಣದಿಂದ ದೌರ್ಜನ್ಯಕ್ಕೊಳಗಾಗಿರುವ ಕುಟುಂಬಕ್ಕೆ ಭದ್ರತೆ, ಉದ್ಯೋಗ, ಪುನರ್ವಸತಿ, ಪರಿಹಾರ ಕೊಡಲು ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಡಾ. ಎಲ್. ಮೂರ್ತಿ ತಿಳಿಸಿದ್ದಾರೆ.

ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ಸಕಾಲಕ್ಕೆ ಸೂಕ್ತ ಕ್ರಮ ವಹಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ ಎಂದು ಇದೇ ವೇಳೆ ತಿಳಿಸಿದರು.

ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದಿರುವ ದೌರ್ಜನ್ಯ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವೇಕಾನಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದಲಿತ ಕುಟುಂಬದ ಗಾಯಾಳುಗಳನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿ, ಸಾಂತ್ವನ ತಿಳಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಸುಸಂಸ್ಕೃತರ ಜಿಲ್ಲೆಯಲ್ಲಿ ಇಂತಹ ಅಮಾನವೀಯ ಘಟನೆ ನಡೆಯಬಾರದಾಗಿತ್ತು. ದೌರ್ಜನ್ಯ ಪೀಡಿತ ಕುಟುಂಬಕ್ಕೆ ಸಕಾಲಕ್ಕೆ ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಸೂಕ್ತ ಭದ್ರತೆ, ಅಗತ್ಯ ನೆರವು ನೀಡಿದೆ. ಹೀಗಾಗಿಯೇ ಹೆಚ್ಚಿನ ಅನಾಹುತ ತಪ್ಪಿರುವುದು ಅವಲೋಕಿಸಿದಾಗ ಕಂಡು ಬಂದಿದೆ ಎಂದರು.ಕುಟುಂಬಕ್ಕೆ ಭದ್ರತೆ, ಉದ್ಯೋಗ ಮತ್ತು ಪುನರ್ವಸತಿಯ ಅಗತ್ಯವಿದೆ ಎಂದು ದೌರ್ಜನ್ಯಕ್ಕೆ ಒಳಗಾದ ಕುಟುಂಬ ಸದಸ್ಯರು ತಿಳಿಸಿದ್ದಾರೆ. ಈ ಕುರಿತು ಸ್ವತಃ ಮುಖ್ಯಮಂತ್ರಿ ಭೇಟಿ ಮಾಡಿ, ಪ್ರಕರಣದ ಮಾಹಿತಿ ನೀಡಿ, ಪರಿಹಾರ ಕ್ರಮಗಳ ಸೂಕ್ತ ಶಿಫಾರಸು ಸಲ್ಲಿಸುತ್ತೇನೆ ಎಂದ ಅವರು, ಅಂತರ್ಜಾತಿ ವಿವಾಹ ಮಾಡಿಕೊಂಡ ಕಾರಣಕ್ಕೆ ತಂದೆಯೇ ತನ್ನ ಮಗಳನ್ನು ಹತ್ಯೆ ಮಾಡಿರುವುದು ಮಾನವೀಯತೆಯ ಮೇಲಿನ ದಾಳಿ ಮಾತ್ರವಲ್ಲ, ಸಂವಿಧಾನಾತ್ಮಕ ಮೌಲ್ಯಗಳಿಗೆ ವಿರುದ್ಧವಾದ ಕೃತ್ಯ. ಇದನ್ನು ಆಯೋಗ ಬಲವಾಗಿ ಖಂಡಿಸುತ್ತದೆ. ಕುಟುಂಬ ಸದಸ್ಯರಿಗೆ ಜಿಲ್ಲಾಡಳಿತದಿಂದ ₹ 5 ಲಕ್ಷ ಪರಿಹಾರ ನೀಡಲಾಗಿದೆ, ಸಮಾಜ ಕಲ್ಯಾಣ ಇಲಾಖೆಯಿಂದ ದೌರ್ಜನ್ಯ ಪೀಡಿತ ಕುಟುಂಬಕ್ಕೆ ದಿನಸಿ, ಆಹಾರ ಸಾಮಗ್ರಿ ವಿತರಿಸಿದ್ದಾರೆ. ಗಾಯಾಳುಗಳಿಗೆ ಸೂಕ್ತ ಮತ್ತು ಅಗತ್ಯ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆಯ ಕೈಗೊಂಡ ತಕ್ಷಣದ ಕ್ರಮಗಳು ನೋಂದವರಿಗೆ ನ್ಯಾಯದ ಭರವಸೆ ಮೂಡಿಸಿವೆ ಎಂದು ಹೇಳಿದರು.

ಈ ವೇಳೆ ಆಯೋಗದ ಸದಸ್ಯರಾದ ಸುನೀಲ ಉಕ್ಕಲಿ, ಕಾರ್ಯದರ್ಶಿ ಡಾ. ಎಚ್.ಎಸ್. ಶಿವರಾಮು, ಎಸ್ಪಿ ಗುಂಜನ್ ಆರ್ಯ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಡಿಸಿಪಿ ಮಾನಿಂಗ ನಂದಗಾವಿ, ಡಿವೈಎಸ್‌ಪಿ ವಿನೋದ ಮುಕ್ತೇದಾರ, ಎಸಿಪಿ ಶಿವಪ್ರಕಾಶ ನಾಯ್ಕ್ , ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಶುಭ ಪಿ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಡಾ. ಎಚ್.ಎಚ್. ಕುಕನೂರ, ವಿಜಯಲಕ್ಷ್ಮಿ ಪಾಟೀಲ, ತಹಸೀಲ್ದಾರ್ ಜೆ.ಬಿ. ಮಜ್ಜಗಿ, ತಾಪಂ ಇಒ ರಾಮಚಂದ್ರ ಹೊಸಮನಿ, ಸಹಾಯಕ ನಿರ್ದೇಶಕಿ ಪ್ರಿಯದರ್ಶಿನಿ ಹಿರೇಮಠ, ಇನ್‌ಸ್ಪೆಕ್ಟರಗಳಾದ ಮುರಗೇಶ ಚನ್ನಣ್ಣವರ, ಪ್ರಭು ಗಂಗೆನಹಳ್ಳಿ ಸೇರಿದಂತೆ ಹಲವರಿದ್ದರು.ಗ್ರಾಮಕ್ಕೂ ಭೇಟಿಭೇಟಿಯ ಪೂರ್ವದಲ್ಲಿ ಹುಬ್ಬಳ್ಳಿಯ ಪ್ರವಾಸಿ ಮಂದಿರದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಎಲ್‌. ಮೂರ್ತಿ ಮಾಹಿತಿ ಪಡೆದುಕೊಂಡರು. ಬಳಿಕ ಇನಾಂವೀರಾಪುರ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

ಕೊಲೆಗಡುಕರಿಗೆ ಉಗ್ರವಾದ ಶಿಕ್ಷೆಯಾಗಲಿ:

ವಿವೇಕಾನಂದ ಆಸ್ಪತ್ರೆಗೆ ಭೇಟಿ ನೀಡಿದ ಮಾಜಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಗಾಯಾಳುಗಳ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದರು. ಘಟನೆಗೆ ಕಾರಣರಾದ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ಒತ್ತಾಯಿಸಿದರು.ಇಬ್ಬರು ಪ್ರತ್ಯೇಕವಾಗಿಯೇ ಭೇಟಿ ನೀಡಿ ಸಾಂತ್ವನ ಹೇಳಿದರು. ಮೊದಲಿಗೆ ಭೇಟಿ ನೀಡಿದ್ದ ರಮೇಶ ಜಾರಕಿಹೊಳಿ ಮಾತನಾಡಿ, ದಲಿತರಿಗೆ ಆಗಿರುವ ಅನ್ಯಾಯದ ಬಗ್ಗೆ ರಾಜಕೀಯ ಬೆರೆಸುವುದು ಬೇಡ. ಆದಷ್ಟು ಶೀಘ್ರ ಅವರು ಗುಣಮುಖವಾಗಲಿ. ಇಂತಹ ಕೊಲೆಗಡುಕರಿಗೆ ಅದಷ್ಟು ಬೇಗ ಶಿಕ್ಷೆ ಆಗಬೇಕು.‌ ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ವಿರುದ್ಧ ಕೆಲ ದೂರುಗಳು ಕೇಳಿಬಂದಿದ್ದು, ಈ ಕುರಿತು ಎಸ್ಸಿ, ಎಸ್ಟಿ ಕಮಿಟಿಯಲ್ಲಿ ಚರ್ಚಿಸಿ ಸೂಕ್ತ ಕ್ರಮಕ್ಕೆ ಸರ್ಕಾರವನ್ನು ಒತ್ತಾಯಿಸಲಾಗುವುದು.‌ ವೈಯಕ್ತಿಕವಾಗಿಯೂ ಕುಟುಂಬಕ್ಕೆ ನೆರವಾಗುತ್ತೇನೆ ಎಂದರು.

ಆರೋಪಿಗಳಿಗೆ ಗುಂಡು ಹೊಡೆಯಿರಿ:ಬಳಿಕ ಭೇಟಿ ನೀಡಿದ ಪ್ರಮೋದ್ ಮುತಾಲಿಕ್‌, ಕೊಲೆಗೈದ ಆರೋಪಿಗಳು ಮನುಷ್ಯರಲ್ಲ ರಾಕ್ಷಸರು. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕನಸು ಈ ವರೆಗೆ ನನಸಾಗಿಲ್ಲ, ಇಂತಹ ಕೃತ್ಯಗಳಿಂದ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಹೆತ್ತ ಮಗಳನ್ನೇ ಕೊಲೆ ಮಾಡಿದ ಆರೋಪಿಗಳಿಗೆ ಯಾವುದೇ ನ್ಯಾಯಾಲಯದಲ್ಲಿ ಪ್ರಕರಣ ನಡೆಸದೇ ನೇರವಾಗಿ ಗುಂಡು ಹೊಡೆಯಬೇಕು. ಈ ಘಟನೆಯಲ್ಲಿ ಉತ್ತಮ ಕೆಲಸ ನಿರ್ವಹಿಸಿದ ಪೊಲೀಸರ ಅಮಾನತುಗೊಳಿಸಿರುವುದು ಖಂಡನಾರ್ಹ. ತಪ್ಪು ಮಾಡಿದ ಅಧಿಕಾರಿಗಳಿಗೆ ಶಿಕ್ಷೆ ವಿಧಿಸಿ ಜತೆಗೆ ಅನ್ಯಾಯಕ್ಕೆ ಒಳಗಾದ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.