ಮುಖ್ಯಮಂತ್ರಿ ಬದಲಾಗುತ್ತಾರೆ ಎನ್ನುವ ವಾದ ಕೇಳಿಬರುತ್ತಿದ್ದರೂ, ಅದು ಆಗದಿದ್ದರೂ ಸಚಿವ ಸಂಪುಟ ಪುನರ್ ರಚನೆಯಂತೂ ಆಗಿಯೇ ಆಗುತ್ತದೆ ಎನ್ನುವ ಮಾತು ಕಾಂಗ್ರೆಸ್ ಪಾಳೆಯದಲ್ಲಿ ಕೇಳಿ ಬರುತ್ತಿದೆ.
ಸೋಮರಡ್ಡಿ ಅಳವಂಡಿ ಕೊಪ್ಪಳ
ಹ್ಯಾಟ್ರಿಕ್ ಗೆಲವು ಸಾಧಿಸಿದರೂ ಸಚಿವ ಸ್ಥಾನ ಸಿಗದೆ ಇರುವ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅವರಿಗೆ ಈ ಬಾರಿಯಾದರೂ ಸಚಿವ ಸ್ಥಾನ ಸಿಗುತ್ತದೆಯೋ ಎನ್ನುವುದು ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ಚರ್ಚೆಯಾಗಿದ್ದರೆ, ಯಲಬುರ್ಗಾ ಶಾಸಕ, ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರಿಗೆ ಸರ್ಕಾರ ರಚನೆಯ ವೇಳೆಯಲ್ಲಿ ಸಚಿವ ಸ್ಥಾನ ತಪ್ಪಿತ್ತು. ಈಗ ಸಚಿವ ಸಂಪುಟ ಪುನರ್ ರಚನೆಯ ವೇಳೆಯಲ್ಲಿಯಾದರೂ ಸಚಿವ ಸ್ಥಾನ ಸಿಗುತ್ತದೆಯೋ ಎನ್ನುವುದು ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಕೇಳಿ ಬರುತ್ತಿರುವ ಚರ್ಚೆಯಾಗಿದೆ.ಹೌದು, ಮುಖ್ಯಮಂತ್ರಿ ಬದಲಾಗುತ್ತಾರೆ ಎನ್ನುವ ವಾದ ಕೇಳಿಬರುತ್ತಿದ್ದರೂ, ಅದು ಆಗದಿದ್ದರೂ ಸಚಿವ ಸಂಪುಟ ಪುನರ್ ರಚನೆಯಂತೂ ಆಗಿಯೇ ಆಗುತ್ತದೆ ಎನ್ನುವ ಮಾತು ಕಾಂಗ್ರೆಸ್ ಪಾಳೆಯದಲ್ಲಿ ಕೇಳಿ ಬರುತ್ತಿದೆ. ಹೀಗಾಗಿ, ಕೊಪ್ಪಳ ಜಿಲ್ಲೆಯಲ್ಲಿ ಯಾರಿಗೆ ಸಚಿವ ಸ್ಥಾನ ಒಲಿಯುತ್ತದೆ ಎನ್ನುವ ಕುರಿತು ಹೆಚ್ಚು ಚರ್ಚೆಯಾಗುತ್ತಿದೆ.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸಚಿವರಾಗಿಯೇ ಮುಂದುವರಿಯುವ ಸಾಧ್ಯತೆಗಳು ಇವೆ. ಅವರ ಸಮುದಾಯದಲ್ಲಿರುವ ಏಕಮಾತ್ರ ಸಚಿವನಾಗಿರುವುದರಿಂದ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಲ್ಲಿ ಇಬ್ಬರ ವಿಶ್ವಾಸ ಗಳಿಸಿರುವ ಅವರು, ತಮ್ಮ ಸ್ಥಾನ ಭದ್ರ ಮಾಡಿಕೊಂಡಿದ್ದಾರೆ. ಹೀಗಾಗಿ, ಕೊಪ್ಪಳ ಜಿಲ್ಲೆಗೆ ಮೂರು ಸಚಿವ ಸ್ಥಾನ ನೀಡುವ ಸಾಧ್ಯತೆ ಕಡಿಮೆಯಾಗಿದ್ದು, ಇಬ್ಬರಿಗಾದರೂ ದಕ್ಕುತ್ತದೆ ಎನ್ನುವ ಭರವಸೆಯಲ್ಲಿ ಈಗ ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರಲ್ಲಿ ಯಾರಿಗಾದರೂ ಒಬ್ಬರಿಗೆ ಸಚಿವ ಸ್ಥಾನ ಪಕ್ಕಾ ಎಂದೇ ಹೇಳಲಾಗುತ್ತದೆ.ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿನ ಲೆಕ್ಕಾಚಾರದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಮೂರು ಬಾರಿ ಗೆದ್ದಿರುವುದರಿಂದ ಸಚಿವರಾಗುವುದು ಪಕ್ಕಾ ಎಂದೇ ಹೇಳಲಾಗುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ಕುರುಬ ಸಮುದಾಯದ ನಾಯಕರಾಗಿ ಬೆಳೆಯುತ್ತಿರುವ ರಾಘವೇಂದ್ರ ಹಿಟ್ನಾಳ ಅವರಿಗೆ ಹೈಕಮಾಂಡ್ ಕೃಪೆ ಸಿಕ್ಕೆ ಸಿಗುತ್ತದೆ ಎಂದೇ ಹೇಳಲಾಗುತ್ತದೆ.
ಇದೇ ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ವಿಭಿನ್ನವಾಗಿ ಚರ್ಚೆಯಾಗುತ್ತದೆ. ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ರಾಯಲ್ ರೆಡ್ಡಿಯನ್ನು ಒಮ್ಮೆಯಾದರೂ ಫೈನಾನ್ಸ್ ಮಿನಿಸ್ಟರ್ ಮಾಡಬೇಕು ಎಂದು ಹೇಳಿದ್ದಾರೆ. ಹೀಗಾಗಿ, ಅವರಿಗೂ ಈ ಬಾರಿ ಸಚಿವ ಸ್ಥಾನ ಸಿಕ್ಕೆ ಸಿಗುತ್ತದೆ ಎಂದೇ ಹೇಳಲಾಗುತ್ತದೆ. ಸಿದ್ದರಾಮಯ್ಯ ಅವರು ಸದನದಲ್ಲಿಯೂ ಈ ಮಾತು ಹೇಳಿದ್ದಾರೆ. ಹೀಗಾಗಿ, ಬಸವರಾಜ ರಾಯರಡ್ಡಿ ಅವರಿಗೆ ಸಚಿವ ಸಾಧ್ಯತೆ ಅಧಿಕವಾಗಿದೆ ಎಂದೇ ಅವರ ಬೆಂಬಲಿಗರು ಮಾತನಾಡಿಕೊಳ್ಳುತ್ತಿದ್ದಾರೆ.ನಾನು ಸಹ ಅರ್ಹನಿದ್ದು, ಮೂರು ಬಾರಿ ಗೆಲುವ ಸಾಧಿಸಿದ್ದೇನೆ. ಹೀಗಾಗಿ, ಈ ಬಾರಿ ಸಚಿವ ಸ್ಥಾನ ಸಿಕ್ಕೆ ಸಿಗುತ್ತದೆ ಎನ್ನುವ ವಿಶ್ವಾಸವಿದ್ದು, ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ತಿಳಿಸಿದ್ದಾರೆ.
ನಾನು ಸಚಿವ ಸ್ಥಾನ ಕೊಡಿ ಅಂತಾ ಕೇಳಲ್ಲ, ಹಿರಿತನದ ಆಧಾರದಲ್ಲಿ ಹಂಚಿಕೆ ಮಾಡಿದಾಗ ಅದು ಆಗುತ್ತದೆ ಎನ್ನುವ ವಿಶ್ವಾಸವಿದೆ. ಹಾಗಂತ ನಾನು ಸಚಿವರನ್ನಾಗಿ ಮಾಡಿ ಎಂದು ಯಾರನ್ನು ಕೇಳುವುದಿಲ್ಲ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ತಿಳಿಸಿದ್ದಾರೆ.