ಮಲವಂತಿಗೆ ಪರಿಸರದಲ್ಲಿ ಕಾಡಾನೆಗಳ ದಾಳಿ: ವ್ಯಾಪಕ ಕೃಷಿ ಹಾನಿ

| Published : Oct 23 2024, 12:39 AM IST

ಮಲವಂತಿಗೆ ಪರಿಸರದಲ್ಲಿ ಕಾಡಾನೆಗಳ ದಾಳಿ: ವ್ಯಾಪಕ ಕೃಷಿ ಹಾನಿ
Share this Article
  • FB
  • TW
  • Linkdin
  • Email

ಸಾರಾಂಶ

ಕೆಲ ದಿನಗಳ ಹಿಂದೆ ಆರಕ್ಕೂ ಹೆಚ್ಚು ಆನೆಗಳಿದ್ದ ಹಿಂಡೊಂದು ಚಾರ್ಮಾಡಿಯಲ್ಲಿ ಕೃಷಿಗೆ ಹಾನಿಯುಂಟು ಮಾಡಿತ್ತು ಇದೇ ಆನೆಗಳು ಇದೀಗ ಮಲವಂತಿಗೆ ಪ್ರದೇಶಕ್ಕೆ ಬಂದಿರಬಹುದು ಎಂದು ಅನುಮಾನಿಸಲಾಗಿದೆ.

ಬೆಳ್ತಂಗಡಿ; ಮಲವಂತಿಗೆ ಗ್ರಾಮದ ಮಲ್ಲ, ನಂದಿಕಾಡು ಪರಿಸರದಲ್ಲಿ ಕಾಡಾನೆಗಳ ಹಿಂಡು ಓಡಾಟ ನಡೆಸಿದ್ದು ವ್ಯಾಪಕವಾಗಿ ಕೃಷಿಗೆ ಹಾನಿಯುಂಟಾಗಿದೆ.

ಆನೆಗಳು ಇಲ್ಲಿನ ನಿವಾಸಿ ಸದಾಶಿವ ಮಲೆಕುಡಿಯ ಎಂಬವರ ತೋಟಕ್ಕೆ ನುಗ್ಗಿದ್ದು ಸುಮಾರು 150 ಅಡಕೆ ಮರಗಳನ್ನು ಸಂಪೂರ್ಣವಾಗಿ ಮುರಿದು ಹಾಕಿದೆ. ತೆಂಗಿನ ಮರಗಳು ಹಾಗೂ ಇತರ ಮರಗಳನ್ನೂ ಕಾಡಾನೆಗಳು ನೆಲಕ್ಕೆ ಉರುಳಿಸಿದೆ. ಇವರದ್ದೇ ಸುಮಾರು ಒಂದೂವರೆ ಎಕರೆ ಗದ್ದೆಯಲ್ಲಿನ ಭತ್ತದ ಕೃಷಿಯನ್ನು ಸಂಪೂರ್ಣವಾಗಿ ನಶಗೊಳಿಸಿದ್ದು ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿದೆ. ಮನೆಗಳ ಸಮೀಪದಲ್ಲಯೇ ಕಾಡಾನೆಗಳು ಓಡಾಟ ನಡೆಸಿದ್ದು ಜನರಲ್ಲಿ ಆತಂಕ ಹೆಚ್ಚಲು ಕಾರಣವಾಗಿದೆ. ಆರಕ್ಕೂ ಹೆಚ್ಚು ಆನೆಗಳು ತಂಡದಲ್ಲಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಆನೆಗಳು ಇದೇ ಪರಿಸರದ ಅರಣ್ಯದಲ್ಲಿ ಬೀಡು ಬಿಟ್ಟಿರುವ ಅನುಮಾನವಿದ್ದು ಸ್ಥಳೀಯ ಜನರಲ್ಲಿ ಆತಂಕ ಹೆಚ್ಚಿಸಿದೆ.

ಕೆಲ ದಿನಗಳ ಹಿಂದೆ ಆರಕ್ಕೂ ಹೆಚ್ಚು ಆನೆಗಳಿದ್ದ ಹಿಂಡೊಂದು ಚಾರ್ಮಾಡಿಯಲ್ಲಿ ಕೃಷಿಗೆ ಹಾನಿಯುಂಟು ಮಾಡಿತ್ತು ಇದೇ ಆನೆಗಳು ಇದೀಗ ಮಲವಂತಿಗೆ ಪ್ರದೇಶಕ್ಕೆ ಬಂದಿರಬಹುದು ಎಂದು ಅನುಮಾನಿಸಲಾಗಿದೆ.