ಸಾರಾಂಶ
ಗ್ರಾಮೀಣ ಭಾಗದ ಮಹಿಳೆಯರ ಆರ್ಥಿಕ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಈ ಗಾರ್ಮೆಂಟ್ಸ್ ಆರಂಭಿಸಲಾಗಿದೆ. ಅದರಿಂದಾಗಿ ಮಹಿಳೆಯರು ಸ್ವಾವಲಂಬನೆ ಬದುಕು ಸಾಗಿಸಲು ಸಾಧ್ಯವಿದೆ.
ಶಿಗ್ಗಾಂವಿ: ತಾಲೂಕಿನ ಖುರ್ಸಾಪುರ ಗ್ರಾಮದಲ್ಲಿ ಆರಂಭವಾದ ಮಹಿಳಾ ಗಾರ್ಮೆಂಟ್ಸ್ (ಮಹಿಳಾ ಟೆಕ್ಸ್‌ಟೈಲ್)ನ್ನು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಗ್ರಾಮೀಣ ಭಾಗದ ಮಹಿಳೆಯರ ಆರ್ಥಿಕ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಈ ಗಾರ್ಮೆಂಟ್ಸ್ ಆರಂಭಿಸಲಾಗಿದೆ. ಅದರಿಂದಾಗಿ ಮಹಿಳೆಯರು ಸ್ವಾವಲಂಬನೆ ಬದುಕು ಸಾಗಿಸಲು ಸಾಧ್ಯವಿದೆ. ಅದಕ್ಕಾಗಿ ಹಿಂದೆ ಬಿಜೆಪಿ ಸರ್ಕಾರ ಇದಕ್ಕೆ ಸುಮಾರು ₹೫೦ ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಮಹಿಳೆಯರು ಸಹ ಪುರುಷರಷ್ಟೆ ಸರಿಸಮಾನವಾಗಿ ಕೆಲಸ ಮಾಡುತ್ತಿದ್ದಾರೆ. ಅಂತಹ ಸಾಮರ್ಥ್ಯ ಮಹಿಳೆಯರಲ್ಲಿ ಮೂಡಿದೆ. ಕುಟುಂಬದ ಆರ್ಥಿಕ ಬೆಳವಣಿಗೆಗೆ ಆಧಾರಸ್ತಂಭವಾಗಿ ನಿಲ್ಲುತ್ತಿದ್ದಾರೆ. ಪ್ರತಿ ಉದ್ಯೋಗದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುವ ಮೂಲಕ ಶ್ರಮಜೀವಿಯಾಗಿದ್ದಾರೆ. ಅವರಿಗೆ ಈ ಕಾರ್ಖಾನೆ ನೆರವಾಗಲಿದೆ ಎಂದರು.ರಾಷ್ಟ್ರೀಯ ಮಟ್ಟದಲ್ಲಿ ಟೆಕ್ಸ್ ವರ್ಸ್ ಕಂಪನಿ ರಪ್ತು ಮಾಡುವಲ್ಲಿ ಮುಂಚೂಣಿಯಲ್ಲಿದೆ. ನಮ್ಮೂರ ಮಹಿಳೆಯರು ಸಿದ್ಧಪಡಿಸಿದ ಬಟ್ಟೆಗಳು ಬೇರೆ ದೇಶಗಳಿಗೆ ಕಳುಹಿಸುತ್ತಿದ್ದಾರೆ. ಅದರಿಂದ ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗದಲ್ಲಿ ಮೌನಕ್ರಾಂತಿ ನಡೆದಿದೆ. ಕ್ಷೇತ್ರದ ಅಭಿವೃದ್ಧಿ ಕಾರ್ಯದಲ್ಲಿ ರಾಜಕಾರಣ ಬೇಡ, ಕ್ಷೇತ್ರದಲ್ಲಿ ಅಭಿವೃದ್ಧಿಪರ ಕಾರ್ಯಗಳು ಹೆಚ್ಚಾಗಿ ನಡೆಯಬೇಕು ಎಂದರು.
ಬಿಜೆಪಿ ಮುಖಂಡ ಭರತ ಬೊಮ್ಮಾಯಿ, ಬಿಜೆಪಿ ತಾಲೂಕು ಅಧ್ಯಕ್ಷ ವಿಶ್ವನಾಥ ಹರವಿ, ಮುಖಂಡರಾದ ಶೋಭಾ ನಿಸೀಮಗೌಡ್ರ, ಗಂಗಣ್ಣ ಸಾತಣ್ಣವರ, ಶಿವಪ್ರಸಾದ ಸುರಗಿಮಠ, ತಿಪ್ಪಣ್ಣ ಸಾತಣ್ಣವರ, ಶಿವಾನಂದ ಮ್ಯಾಗೇರಿ, ದೇವಣ್ಣ ಚಾಕಲಬ್ಬಿ, ಶಂಭು ಕಡಕೋಳ, ಹೊನ್ನಪ್ಪ ಹುಗಾರ, ಕಾಶೀನಾಥ ಕಳ್ಳಿಮನಿ ಇದ್ದರು.