ಬದುಕಿನ ಪಾಠದ ಜ್ಞಾನ ಕಲಿಯಿರಿ: ಶಾಸಕ ಶಿವರಾಮ ಹೆಬ್ಬಾರ

| Published : Sep 17 2025, 01:07 AM IST

ಸಾರಾಂಶ

ಪುಸ್ತಕ ಓದುವುದರ ಜೊತೆಗೆ ಬದುಕಿನ ಪಾಠದ ಜ್ಞಾನ ಕಲಿಯದೇ ಹೋದರೆ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ.

ಮುಂಡಗೋಡ: ಕೇವಲ ಉತ್ತಮ ಅಂಕ ಗಳಿಸಿದರೆ ಸಾಲದು. ಸಾಮಾನ್ಯ ಜ್ಞಾನ ಕೂಡ ಅತ್ಯಗತ್ಯ. ಪುಸ್ತಕ ಓದುವುದರ ಜೊತೆಗೆ ಬದುಕಿನ ಪಾಠದ ಜ್ಞಾನ ಕಲಿಯದೇ ಹೋದರೆ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆ ಕೂಡ ಅತ್ಯಗತ್ಯ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ, ಕ್ರೀಡಾ, ಎನ್.ಎಸ್.ಎಸ್ ಹಾಗೂ ಭಾರತ ಸ್ಕೌಟ್ ಮತ್ತು ಗೈಡ್ಸ್ ಮುಂತಾದ ಘಟಕಗಳನ್ನು ಉದ್ಘಾಟಿಸಿ ಮಾತನಾಡಿದರು.

ಮುಂಡಗೋಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸುಮಾರು ೪೦ ವರ್ಷಗಳಿಂದ ಹಲವಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದೆ. ಪ್ರಸ್ತುತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ೯೨೫ ಜನರಲ್ಲಿ ಶೇ.೭೦ರಷ್ಟು ವಿದ್ಯಾರ್ಥಿನಿಯರೇ ಇದ್ದು, ಈ ಮೂಲಕ ಹೆಣ್ಣು ಮಕ್ಕಳು ಕಲಿಕೆಯಲ್ಲಿ ಮುಂದಿದ್ದಾರೆ ಎಂಬುವುದನ್ನು ಸಾಬೀತುಪಡಿಸುತ್ತಿರುವುದು ಸಂತಸದ ಸಂಗತಿ ಎಂದರು.

ಕಾಲೇಜು ಪ್ರಾಂಶುಪಾಲ ಪ್ರಸನ್ನಸಿಂಗ್ ಹಜೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ಥಳೀಯವಾಗಿ ಉನ್ನತ ಶಿಕ್ಷಣ ನೀಡುವ ದೃಷ್ಟಿಯಿಂದ ಬಿಸಿಎ, ಬಿಎಸ್ಸಿ, ಎಂಕಾಂ ಸೇರಿದಂತೆ ವಿವಿಧ ಪದವಿ ಕೋರ್ಸ್ಗಳನ್ನು ಪ್ರಾರಂಭಿಸಲಾಗಿದೆ. ವಿದ್ಯಾಥಿಗಳು ಇದರ ಸದುಪಯೋಗ ಪಡೆದುಕೊಂಡು ಉತ್ತಮ ಶಿಕ್ಷಣ ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಂತೆ ಕರೆ ನೀಡಿದರು.

ಮಾಜಿ ಶಾಸಕ ವಿ.ಎಸ್ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಮಾಜಿ ಜಿ.ಪಂ ಸದಸ್ಯ ರವಿಗೌಡ ಪಾಟೀಲ, ಎಚ್.ಎಮ್ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. ತಾರಾಮತಿ ನಾಕೋಡ ಸ್ವಾಗತಿಸಿದರು. ವಿನಾಯಕ ಮಿರಜಕರ ನಿರೂಪಿಸಿರು.

ಮುಂಡಗೋಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವನ್ನು ಶಾಸಕ ಶಿವರಾಮ ಹೆಬ್ಬಾರ ಉದ್ಘಾಟಿಸಿದರು.