ಮಹಿಳಾ ಸಬಲೀಕರಣ ದೇಶದ ಅಭಿವೃದ್ಧಿ ಸಂಕೇತ: ಇನ್ಸ್ ಸ್ಪೆಕ್ಟರ್ ರೇವತಿ

| Published : Mar 17 2025, 12:31 AM IST

ಮಹಿಳಾ ಸಬಲೀಕರಣ ದೇಶದ ಅಭಿವೃದ್ಧಿ ಸಂಕೇತ: ಇನ್ಸ್ ಸ್ಪೆಕ್ಟರ್ ರೇವತಿ
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳೆ ಕೇವಲ ಕೌಟುಂಬಿಕ ವ್ಯವಸ್ಥೆಗೆ ಸೀಮಿತವಾಗದೆ ಶೈಕ್ಷಣಿಕ, ಉದ್ಯೋಗ, ರಾಜಕೀಯ ಎಲ್ಲ ರಂಗದಲ್ಲಿಯೂ ಸಮಾನ ಅವಕಾಶ ಕಲ್ಪಿಸಿಕೊಟ್ಟಲ್ಲಿ ಬಲು ದೊಡ್ಡ ಶಕ್ತಿಯಾಗಿ ಶಾಂತಿ ನೆಮ್ಮದಿಯ ಸಮಾಜವನ್ನು ನಾಡಿಗೆ ನೀಡಲಿದ್ದಾಳೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಮಹಿಳಾ ಸಬಲೀಕರಣದಿಂದ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಇನ್ಸ್ ಸ್ಪೆಕ್ಟರ್ ರೇವತಿ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ರಾಜ್ಯ ರೈತೋದ್ಯಯ ಹಸಿರು ಸಂಘ ಹಾಗೂ ಇತರೆ ಸಂಸ್ಥೆಗಳು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನೀಡಿದ ಗೌರವ ಸ್ವೀಕರಿಸಿ ಮಾತನಾಡಿ, ತಾಯಿ ನಮಗೆ ಮೊದಲ ಗುರು. ಇಡೀ ವಿಶ್ವಕ್ಕೆ ಅವಶ್ಯವಾಗಿ ಬೇಕಿರುವುದು ಮಹಿಳೆ ಎಂದರು.

ಮಹಿಳೆ ಕೇವಲ ಕೌಟುಂಬಿಕ ವ್ಯವಸ್ಥೆಗೆ ಸೀಮಿತವಾಗದೆ ಶೈಕ್ಷಣಿಕ, ಉದ್ಯೋಗ, ರಾಜಕೀಯ ಎಲ್ಲ ರಂಗದಲ್ಲಿಯೂ ಸಮಾನ ಅವಕಾಶ ಕಲ್ಪಿಸಿಕೊಟ್ಟಲ್ಲಿ ಬಲು ದೊಡ್ಡ ಶಕ್ತಿಯಾಗಿ ಶಾಂತಿ ನೆಮ್ಮದಿಯ ಸಮಾಜವನ್ನು ನಾಡಿಗೆ ನೀಡಲಿದ್ದಾಳೆ ಎಂದರು.

ಸ್ವಾತಂತ್ರ್ಯ ಪೂರ್ವದಲ್ಲಿ ಸಾವಿತ್ರಿಬಾಯಿ ಫುಲೆ ಅಕ್ಷರದ ಅವ್ವಳಾಗಿ ಮಾಡಿದ ಸಾಧನೆ ಇಂದಿನ ಯುವ ಪೀಳಿಗೆಯಲ್ಲಿ ನೆನಪು ಮೂಡಬೇಕಿದೆ. ವಿವಾಹದ ಹೆಸರಿನಲ್ಲಿ ಹೆಣ್ಣು ಮಕ್ಕಳ ಉನ್ನತ ಶಿಕ್ಷಣ ಮೊಟಕು ಆಗಬಾರದು. ಮಹಿಳೆಯರ ಅಧಿಕಾರದಲ್ಲಿ ಯಾರೂ ಹಸ್ತಕ್ಷೇಪ ಮಾಡದಂತೆ ವ್ಯವಸ್ಥೆ ನಿರ್ಮಾಣ ಬೇಕಿದೆ. ಪ್ರಾಮಾಣಿಕವಾಗಿ ದುಡಿಯಲು ಮಹಿಳೆಗೆ ಮೀಸಲಾತಿ ಜೊತೆಗೆ ರಕ್ಷಣೆ ಅವಶ್ಯವಾಗಿ ಬೇಕಿದೆ ಎಂದರು.

ಕುಟುಂಬದ ಜವಾಬ್ದಾರಿ ನಿರ್ವಹಿಸುವ ಹೆಣ್ಣಿಗೆ ಎಲ್ಲ ರೀತಿಯ ಸಮಾನತೆ ಬೇಕಿದೆ. ಸಾಕಷ್ಟು ಮೀಸಲಾತಿಗಳು ಸಿಕ್ಕರೂ, ಮನೆಯಿಂದ ಹೊರಗೆ ಬರಲು ಸೂಕ್ತ ವಾತಾವರಣವಿಲ್ಲದಿರುವುದು ಶೋಚನೀಯವಾಗಿದೆ ಎಂದು ವಿಷಾದಿಸಿದರು.

ಹೆತ್ತು, ಹೊತ್ತು, ತಾನು ಹಸಿದು ಮಕ್ಕಳನ್ನು ಕಾಪಾಡುವ ಸ್ತ್ರೀ ಅಬಲೆಯಲ್ಲ ನೀ ಸಬಲೆ ಎನ್ನುವ ಬಾಯಿ ಮಾತಿನ ಹೊಗಳಿಕೆ ಬೇಡ. ಮಹಿಳೆಯರು ಸ್ವಸಹಾಯ ಸಂಘಗಳ ಮೂಲಕ ಗುಡಿ ಕೈಗಾರಿಕೆ, ಕೌಶಲ್ಯವನ್ನು ರೂಢಿಸಿಕೊಂಡು ಬದುಕುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರಿಗಾಗಿ ಸ್ವ ಉದ್ಯೋಗ ಕ್ಷೇತ್ರ ನಿರ್ಮಾಣ, ಕೈಗಾರಿಕೆಗಳು ಸ್ಥಾಪನೆಯಾಗಬೇಕಿದೆ ಎಂದು ಆಶಿಸಿದರು.

ಮಹಿಳಾ ದೌರ್ಜನ್ಯ, ಬಾಲ್ಯವಿವಾಹ, ಹೆಣ್ಣು ಭ್ರೂಣ ಹತ್ಯೆ ಶಿಕ್ಷಾರ್ಹ ಅಪರಾಧವಾಗಿದೆ. ಇಂತಹ ಘಟನೆಗಳು ನಡೆದಲ್ಲಿ ತಿಳಿಸಿ ಸಮಾಜದ ಆರೋಗ್ಯ, ಮಹಿಳೆಯರ ಸ್ವಾತಂತ್ರ್ಯಕ್ಕೆ ಆಗುವ ಹಾನಿಯನ್ನು ತಪ್ಪಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ಜಾವೇದ್, ಗೋವಿಂದರಾಜು, ಲೋಕೇಶ್, ಮಾಕವಳ್ಳಿ ರಂಗನಾಥ, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.