ಸಾರಾಂಶ
ತಾಲೂಕಿನ ಐತಿಹಾಸಿಕ ಶ್ರೀ ಕೊಡದಗುಡ್ಡದ ವೀರಭದ್ರಸ್ವಾಮಿ ರಥೋತ್ಸವ ಸಾವಿರಾರು ಅಪಾರ ಭಕ್ತರ ಮಧ್ಯೆ ಸಡಗರ ಸಂಭ್ರಮದಿಂದ ಶನಿವಾರ ಅದ್ಧೂರಿಯಾಗಿ ನೆರವೇರಿತು..
ರಥಕ್ಕೆ ಬಾಳಿಹಣ್ಣು, ಮೆಣಸು, ಉತ್ತತ್ತಿ ಎರಚಿ ಸಂಭ್ರಮ
ಜಗಳೂರು: ತಾಲೂಕಿನ ಐತಿಹಾಸಿಕ ಶ್ರೀ ಕೊಡದಗುಡ್ಡದ ವೀರಭದ್ರಸ್ವಾಮಿ ರಥೋತ್ಸವ ಸಾವಿರಾರು ಅಪಾರ ಭಕ್ತರ ಮಧ್ಯೆ ಸಡಗರ ಸಂಭ್ರಮದಿಂದ ಶನಿವಾರ ಅದ್ಧೂರಿಯಾಗಿ ನೆರವೇರಿತು..ದೇವರಪಟವನ್ನು ದೇವಿಕೆರೆ ಎಲೆ ಶ್ರೀ ಶರಬೇಂದ್ರಪ್ಪ ಎಂಬುವವರು ೪.೬೫ ಲಕ್ಷ ರು. ಹರಾಜಿನಲ್ಲಿ ತಮ್ಮದಾಗಿಸಿಕೊಳ್ಳುತ್ತಿದ್ದಂತೆ ಭಕ್ತರು ಶ್ರೀ ವೀರಭದ್ರ ಸ್ವಾಮಿಗೆ ಜೈಕಾರ ಹಾಕುತ್ತ ರಥವನ್ನು ಎಳೆದರು. ಭಕ್ತರು ರಥಕ್ಕೆ ಬಾಳಿಹಣ್ಣು, ಮೆಣಸು, ಉತ್ತುತ್ತಿ, ಇತರೆ ಧಾನ್ಯಗಳನ್ನು ಎಸೆದು ಸ್ವಾಮಿಗೆ ಸಮರ್ಪಿಸಿದರು.
ದಾವಣಗೆರೆ. ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಂದ ಮತ್ತು ನಾನಾ ಗ್ರಾಮಗಳಿಂದ ಭಕ್ತರು ಕಾರು, ಟ್ರ್ಯಾಕ್ಟರ್, ಬಸ್ ಸೇರಿದಂತೆ ವಿವಿಧ ವಾಹನಗಳ ಮೂಲಕ ಸಾವಿರಾರು ಭಕ್ತರು ಆಗಮಿಸಿದ್ದರು. ಜಾತ್ರಗೆ ಬರುವ ಭಕ್ತರಿಗೆ ತಂಗಲೂ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಮರದ ಕೆಳಗೆ ಬಿಡಾರ ಹಾಕಿ ತಂಗಿದ್ದರು.ಶನಿವಾರ ಬೆಳಿಗ್ಗೆಯಿಂದಲೇ ಭಕ್ತರು ಶ್ರೀ ವೀರಭದ್ರಸ್ವಾಮಿಗೆ ಕಾಯಿ, ಬಾಳೆಹಣ್ಣು, ಕರ್ಪೂರ, ಊದಿನಕಡ್ಡಿ, ಅರ್ಪಿಸಿ ಶ್ರೀ ಸ್ವಾಮಿಯ ದರ್ಶನವನ್ನು ಪಡೆಯಲು ಸರದಿ ಸಾಲಿನಲ್ಲಿ ಜನರು ಮುಗಿಬಿದ್ದಿದ್ದರು.
ರಥೋತ್ಸವ ನೀಲುವ ಜಾಗದಲ್ಲಿ ಮತ್ತು ರಸ್ತೆಯ ಅಕ್ಕ-ಪಕ್ಕದಲ್ಲಿ ಖಾರಮಂಡಕ್ಕೆ ಅಂಗಡಿಗಳು, ಸ್ತ್ರೀಯರ ಸೌಂದರ್ಯವರ್ಧಕದ ಅಂಗಡಿಗಳು, ಮಕ್ಕಳ ಅಂಟಿಕೆ ಅಂಗಡಿಗಳು, ಐಸ್ಕ್ರೀಂ ಗಾಡಿಗಳು, ಕಬ್ಬಿನಗಾಡಿಗಳು, ಪಾನಿಪೂರಿ ಅಂಗಡಿಗಳು, ಮಂಡಕ್ಕೆ ಮೆಣಸಿನಕಾಯಿಯನ್ನು ಭಕ್ತರು ಸವಿದರು.ಮಾಜಿ ಶಾಸಕ ಎಸ್.ವಿ.ರಾಮಚಂದ್ರ. ಎಚ್.ಪಿ.ರಾಜೇಶ್, ಮುಖಂಡರಾದ ಬಸವಾಪುರ ರವಿಚಂದ್ರಪ್ಪ, ದೇವಸ್ಥಾನದ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನಪ್ಪ, ಎಂ.ವಿ.ಚನ್ನಯ್ಯ, ರುದ್ರುಮುನಿ, ಶಿವಕುಮಾರಸ್ವಾಮಿ, ಚಂದ್ರಶೇಖರ್, ದೇವಿಕೆರೆ ರುದ್ರಯ್ಯ ಇದ್ದರು.