ಸಾರಾಂಶ
ದೇಶದ ಪ್ರಗತಿಯ ವಿಚಾರದಲ್ಲಿ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ। ಡಿ.ವಿ.ಪರಮಶಿವಮೂರ್ತಿ ಪ್ರತಿಪಾದಿಸಿದರು.
ಕನ್ನಡಪ್ರಭ ವಾರ್ತೆ ಕೆಂಗೇರಿ
ದೇಶದ ಪ್ರಗತಿಯ ವಿಚಾರದಲ್ಲಿ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ। ಡಿ.ವಿ.ಪರಮಶಿವಮೂರ್ತಿ ಪ್ರತಿಪಾದಿಸಿದರು.ಕೆಂಗೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗ, ಹಂಪಿ ಕನ್ನಡ ವಿವಿಯ ಮಹಿಳಾ ಅಧ್ಯಯನ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ ‘ಮಹಿಳೆ ಬದುಕು ಸಮಕಾಲಿನ ಸ್ವರೂಪಗಳು’ ಕುರಿತ ವಿಚಾರಣಾ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಮಹಿಳೆ ಎಲ್ಲ ಕ್ಷೇತ್ರಗಳಲ್ಲೂ ಪುರುಷರ ರೀತಿಯಲ್ಲೇ ತಮ್ಮನ್ನು ತೊಡಗಿಸಿಕೊಂಡು ಉತ್ತಮ ಸಾಧನೆ ಮಾಡುತ್ತಿದ್ದಾರೆ. ಹಾಗಾಗಿ ಮಹಿಳೆಯನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಮಹಿಳಾ ಸಮಾನತೆಗೆ ಅವರ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸಬಲೀಕರಣ ಬಹಳ ಮುಖ್ಯ. ಆ ಮೂಲಕ ಅವರ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿದಾಗ ಮಾತ್ರ ದೇಶದ ಪ್ರಗತಿಗೆ ಮಹತ್ವ ಬರಲಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ। ಎ.ವಿ.ಲಕ್ಷ್ಮೀನಾರಾಯಣ್ ಮಾತನಾಡಿ, ಮಹಿಳೆಯರಿಗೂ ಎಲ್ಲ ಕ್ಷೇತ್ರದಲ್ಲಿ ಸಮಾನ ಅವಕಾಶಗಳು ಸಿಕ್ಕಾಗ ಇನ್ನಷ್ಟು ಸಾಧನೆಗಳು ಹೊರಬರಲು ಸಾಧ್ಯ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಎಲ್ಲ ಕಡೆಯೂ ಮಹಿಳೆಯರಿಗೆ ಸಮಾನ ಪ್ರಾತಿನಿಧ್ಯ ಸಿಗಬೇಕು. ಆಗ ಮಾತ್ರ ಲಿಂಗ ಸಮಾನತೆ ಬರಲು ಸಾಧ್ಯ ಎಂದು ಹೇಳಿದರು.
ಕೆಂಗೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ. ಬಿ.ಯು.ಸುಮಾ, ಕನ್ನಡ ವಿಶ್ವವಿದ್ಯಾಲಯ ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊಫೆಸರ್ ಶೈಲಜಾ ಹಿರೇಮಠ್, ಕಾಲೇಜಿನ ಐಕ್ಯೂಎಸ್‌ಸಿ ಸಂಚಾಲಕ ಡಾ। ಶಂಕರ್ ಮೂರ್ತಿ ಉಪಸ್ಥಿತರಿದ್ದರು.