ಸಾಮಾಜಿಕ ಜಾಲತಾಣದ ಪಿಡುಗಿನಿಂದ ಮಕ್ಕಳ ರಕ್ಷಣೆಯಲ್ಲಿ ಪೋಷಕರ ಪಾತ್ರ ವಿಷಯದಲ್ಲಿ ಉಪನ್ಯಾಸ ನೀಡಿ, ಎಳೆಯ ಮಕ್ಕಳ ಕೈಯಲ್ಲಿ ಮೊಬೈಲ್ ನೀಡಿದ ಪರಿಣಾಮ ಇವತ್ತು ಮೊಬೈಲ್ ಗೀಳು ಹೆಚ್ಚಾಗಿದೆ. ಇದರಿಂದಾಗಿ ಅನೇಕ ಸೈಬರ್ ಅಪರಾಧ ಪ್ರಕರಣ ಹೆಚ್ಚಾಗಿವೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಮಹಿಳೆ ಅಬಲೆಯಲ್ಲ, ಸಬಲೆ. ಶಿಕ್ಷಣ, ಸ್ವ ಉದ್ಯೋಗ, ಸ್ವಾವಲಂಬಿ ಬದುಕಿನಿಂದ ಮಾತ್ರ ಸದೃಢವಾಗಲು ಸಾಧ್ಯ. ಇದಕ್ಕಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮವು ಮಹಿಳಾ ಸಬಲೀಕರಣಕ್ಕೆ ಪೂರಕವಾಗಿದೆ ಕೆಲಸ ಮಾಡುತ್ತಿದೆ ಎಂದು ಜಿಲ್ಲಾ ನಿರ್ದೇಶಕಿ ಮಮತಾ ಹರೀಶ್‌ರಾವ್ ತಿಳಿಸಿದರು.ತಾಲೂಕಿನ ಎಲೆಕೆರೆಯ ರುತ್ವಿ ಅಕ್ಷಯ ಕನ್ವೆನ್ಷನ್ ಹಾಲ್‌ನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್, ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ನಡೆದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿ, ವಕೀಲರಾದ ತೇಜಸ್ವಿನಿ ಚೆಲುವೆಗೌಡ, ಸಾಮಾಜಿಕ ಜಾಲತಾಣದ ಪಿಡುಗಿನಿಂದ ಮಕ್ಕಳ ರಕ್ಷಣೆಯಲ್ಲಿ ಪೋಷಕರ ಪಾತ್ರ ವಿಷಯದಲ್ಲಿ ಉಪನ್ಯಾಸ ನೀಡಿ, ಎಳೆಯ ಮಕ್ಕಳ ಕೈಯಲ್ಲಿ ಮೊಬೈಲ್ ನೀಡಿದ ಪರಿಣಾಮ ಇವತ್ತು ಮೊಬೈಲ್ ಗೀಳು ಹೆಚ್ಚಾಗಿದೆ. ಇದರಿಂದಾಗಿ ಅನೇಕ ಸೈಬರ್ ಅಪರಾಧ ಪ್ರಕರಣ ಹೆಚ್ಚಾಗಿವೆ. ಆಂತರಿಕ ಗೌಪ್ಯ ವಿಷಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಪರಿಣಾಮ ವೈಯಕ್ತಿಕ ಜೀವನ ಹಾಳಾಗುತ್ತಿದೆ ಎಂದು ಎಚ್ಚರಿಸಿದರು.ಮಹಿಳಾ ಆರೋಗ್ಯದ ಬಗ್ಗೆ ಡಾ.ಎಚ್.ಆರ್.ಮಣಿಕರ್ಣಿಕಾ ಅವರು ಮಹಿಳೆ ಮತ್ತು ಆರೋಗ್ಯದ ಬಗ್ಗೆ ಉಪನ್ಯಾಸ ನೀಡಿ, ಮಹಿಳೆ ಮನೆಮಂದಿಗೆ ಕೊಡುವ ಸಮಯದ ಜೊತೆಗೆ ತನಗಾಗಿ ಸ್ವಲ್ಪ ಸಮಯ ಇಟ್ಟುಕೊಳ್ಳಬೇಕು. ದಿನಚರಿಯಲ್ಲಿ ಆಹಾರ ವಿಹಾರ, ವ್ಯಾಯಾಮ, ವಿರಾಮ, ದ್ಯಾನ ಇವುಗಳನ್ನು ಅಳವಡಿಸಬೇಕು. ಸಕಾರಾತ್ಮಕ ಅಲೋಚನೆಯಲ್ಲಿ ಇರಬೇಕು. ಹಿತಮಿತವಾದ ಆಹಾರ ಕ್ರಮಗಳಿರಬೇಕೆಂದರು.
ವೇದಿಕೆಯಲ್ಲಿ ಜನಜಾಗೃತಿ ವೇದಿಕೆ ಸದಸ್ಯೆ ಶಾಂತಲಾ ರಾಮಕೃಷ್ಣೇಗೌಡ, ಉಮಾ ಬಸವರಾಜ್, ತೀರ್ಪುಗಾರರಾಗಿ ಎಚ್.ಆರ್.ಧನ್ಯಕುಮಾರ್, ಮುಖ್ಯ ಶಿಕ್ಷಕ ಚೆಲುವೆಗೌಡ, ಮೀನಾಕ್ಷಿ ಚೆಲುವರಾಜ್ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಸಾಧಕರಾದ ಪುಷ್ಪಾವತಿ, ಅಮ್ಮನ ಆಸರೆ ಅನಾಥಾಶ್ರಮದ ಕುಮಾರಿ ಹೊನ್ನು, ಹ್ಯಾಂಡ್ ಬಾಲ್ ರಾಷ್ಟ್ರೀಯ ಚಿನ್ನದ ಪದಕ ಪಡೆದ ಕ್ರೀಡಾಪಟು ವೀಣಾ ಶಿವರಾಜು, ಬನ್ನಂಗಾಡಿ ಹೈನುಗಾರಿಕೆ, ಸಾವಿತ್ರಿ ನಿರ್ಮಲೇಶ್, ಜೈಪುರ ಕೃಷಿ ಮಹಿಳೆ ಶಿ ರಂಜಿತಾ ರಾಜೇಶ್, ಸ್ವ ಉದ್ಯೋಗದಲ್ಲಿ ಬ್ಯೂಟಿಷೀಯನ್ ಇವರುಗಳನ್ನು ಗುರುತಿಸಲಾಯಿತು.ವಿಶೇಷ ಆಕರ್ಷಣೆಯಲ್ಲಿ ಮಹಿಳೆಯರಿಗೆ ರಂಗೋಲಿ, ಪುಷ್ಪಗುಚ್ಚ, ಸ್ವ-ಉದ್ಯೋಗ ಮಳಿಗೆ, ಪೌಷ್ಟಿಕ ಆಹಾರ , ಕರಕುಶಲ ಮತ್ತು ಸಮೂಹ ನೃತ್ಯ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನ ವಿತರಿಸಲಾಯಿತು.