ಜಯಂತಿ ಮಹೋತ್ಸವದ ಯಶಸ್ವಿಗೆ ಶ್ರಮಿಸಿದ ಪೌರ ಕಾರ್ಮಿಕರು, ದಾಸೋಹ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಮಂಡ್ಯದ ಅನಿಲ್ ಮತ್ತು ತಂಡ, ವಸ್ತುಪ್ರದರ್ಶನ ಸಮಿತಿ ಪದಾಧಿಕಾರಿಗಳಿಗೆ, ಸೆಕ್ಯೂರಿಟಿ ಸಿಬ್ಬಂದಿ, ಸಮಿತಿಯ ಪದಾಧಿಕಾರಿಗಳಿಗೆ, ಅಧಿಕಾರಿಗಳು ಸೇರಿದಂತೆ ಹಲವು ಭಕ್ತರಿಗೆ ಸುತ್ತೂರು ಶ್ರೀಗಳು ಪ್ರಸಾದ ನೀಡಿ ಅಶೀರ್ವದಿಸಿದರು.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದಲ್ಲಿ 6 ದಿನಗಳ ಕಾಲ ಅದ್ಧೂರಿಯಾಗಿ ನಡೆದ ಆದಿ ಜಗದ್ಗುರು 1066ನೇ ಶಿವರಾತ್ರೀಶ್ವರ ಶಿವಯೋಗಿಗಳ ಜಯಂತಿಯಲ್ಲಿ ದಿವ್ಯಸಾನಿಧ್ಯ ವಹಿಸಿದ್ದ ಉತ್ಸವ ಮೂರ್ತಿ ಸೋಮವಾರ ಸುತ್ತೂರಿಗೆ ತೆರಳಿತು.ಬೃಹತ್ ವೇದಿಕೆ ಸಮೀಪ ನಿರ್ಮಿಸಿದ್ದ ಅನುಭವ ಮಂಟಪ (ದೇವಸ್ಥಾನ)ದಲ್ಲಿ ಪ್ರತಿಷ್ಟಾಪಿಸಲಾಗಿದ್ದ ಉತ್ಸವ ಮೂರ್ತಿಗೆ ಸುತ್ತೂರಿನ ಗುರುಪರಂಪರೆಯಂತೆ ಸಂಪ್ರದಾಯ ಬದ್ಧಪೂಜೆಗಳೊಂದಿಗೆ ಅನುಭವ ಮಂಟಪದ ದೇವಸ್ಥಾನದಿಂದ ತೆಗೆದುಕೊಂಡು ರಥಕ್ಕೆ ಕೂರಿಸಿದ ನಂತರ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ ಹಾಗೂ ಹಾಜರಿದ್ದ ಹರಗುರು ಚರಮೂರ್ತಿಗಳು ವಿಶೇಷ ಪೂಜೆ ಸಲ್ಲಿಸಿದರು.
ಸಾವಿರಾರು ಭಕ್ತರ ಸಮ್ಮುಖದಲ್ಲಿ ಸುತ್ತೂರಿಗೆ ತೆರಳಿದ ಉತ್ಸವ ಮೂರ್ತಿಗೆ ಅಂತಿಮ ಪೂಜೆ ಸಲ್ಲಿಸಿ ಧ್ವಜಾರೋಹಣದ ಬಾವುಟ ಸಂಪ್ರದಾಯಬದ್ಧವಾಗಿ ಆಚರಣೆಯಂತೆ ಕೆಳಗಿಳಿಸಿದ ನಂತರ ಉತ್ಸವ ಮೂರ್ತಿಯ ರಥ ಸುತ್ತೂರಿಗೆ ಬೀಳ್ಕೊಡಲಾಯಿತು.ಜಯಂತಿ ಮಹೋತ್ಸವದ ಯಶಸ್ವಿಗೆ ಶ್ರಮಿಸಿದ ಪೌರ ಕಾರ್ಮಿಕರು, ದಾಸೋಹ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಮಂಡ್ಯದ ಅನಿಲ್ ಮತ್ತು ತಂಡ, ವಸ್ತುಪ್ರದರ್ಶನ ಸಮಿತಿ ಪದಾಧಿಕಾರಿಗಳಿಗೆ, ಸೆಕ್ಯೂರಿಟಿ ಸಿಬ್ಬಂದಿ, ಸಮಿತಿಯ ಪದಾಧಿಕಾರಿಗಳಿಗೆ, ಅಧಿಕಾರಿಗಳು ಸೇರಿದಂತೆ ಹಲವು ಭಕ್ತರಿಗೆ ಸುತ್ತೂರು ಶ್ರೀಗಳು ಪ್ರಸಾದ ನೀಡಿ ಅಶೀರ್ವದಿಸಿದರು.
ಸುತ್ತೂರಿಗೆ ತೆರಳಿದೆ ಆದಿಜಗದ್ಗುರು ಉತ್ಸವಮೂರ್ತಿ ರಥಕ್ಕೆ ಭಕ್ತರು ಸಂಪ್ರದಾಯಬದ್ಧ ಆಚರಣೆಯಂತೆ ತೆಂಗಿನ ಕಾಯಿಗಳ ಹಾಗೂ ಬೂದು ಗುಂಬಳ ಹೊಡೆದು ಅರತಿ ನೀಡಿ ಭಕ್ತಿ ಸಮರ್ಪಿಸಿದರು. ಉತ್ಸವ ಮೂರ್ತಿಗೆ ದೊಡ್ಡ ಕ್ರೇನ್ ಮೂಲಕ ಬೃಹದಾಕಾರದ ಸೇಬಿನ ಹಾರ ಹಾಕುವುದರಲ್ಲದೇ ರಾಗಿಬೊಮ್ಮನಹಳ್ಳಿ ಗೇಟ್ ಎರಡು ಜೆಸಿಬಿಗಳಿಂದ ಹೂವುಗಳ ಸುರಿಮಳೆಗೈದು, ಸುತ್ತೂರಿಗೆ ತೆರಳಿದ 100ಕ್ಕೂ ಹೆಚ್ಚು ವಾಹನಗಳಿಗೆ ಪುಷ್ಪಗಳನ್ನು ಸುರಿಸಿ ಅದ್ಧೂರಿಯಾಗಿ ಬೀಳ್ಕೋಡುವುದು ನೋಡುಗರ ಗಮನ ಸೆಳೆಯಿತು.ವಿಶೇಷ ಪೂಜೆ ಹಾಗೂ ರಥಯಾತ್ರೆಯಲ್ಲಿ ಭಾಗವಹಿಸಿದ್ದ ಜನರಿಗೆ ತಂಪು ಪಾನಿಯ ವಿತರಿಸಲಾಯಿತು. ಕನಕಪುರ ದೇಗುಲ ಮಠದ ಡಾ.ಚನ್ನಬಸವ ಸ್ವಾಮೀಜಿ, ಅಲಮಟ್ಟಿ ಶ್ರೀಗಳು, ಸುತ್ತೂರಿನ ಕಿರಿಯ ಶ್ರೀಗಳು, ಜೆಎಸ್ಎಸ್ ಸಂಸ್ಥೆಯ ಕಾರ್ಯದರ್ಶಿ ಎಸ್.ಪಿ. ಮಂಜುನಾಥಸ್ವಾಮಿ, ತಾಲೂಕಿನ ಹರಗುರು ಚರಮೂರ್ತಿಗಳು, ಶಾಸಕ ಪಿ.ಎಂ.ನರೇಂದ್ರಸ್ವಾಮಿ, ವಿಧಾನ ಪರಿಷತ್ ಮಾಜಿ ಉಪಸಭಾಪತಿ ಮರಿತಿಬ್ಬೆಗೌಡ, ಮಾಜಿ ಶಾಸಕ ಡಾ.ಕೆ.ಅನ್ನದಾನಿ ಸೇರಿದಂತೆ ಮಹೋತ್ಸವದ ವಿವಿಧ ಸಮಿತಿಯ ಎಲ್ಲಾ ಪದಾಧಿಕಾರಿಗಳು, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಮತ್ತು ತಾಲೂಕು ಘಟಕದ ಎಲ್ಲ ಪದಾಧಿಕಾರಿಗಳು ಇದ್ದರು.