ಮಹಿಳೆ ಕೇವಲ ಮನೆಯನ್ನು ನಿರ್ವಹಿಸುವುದು ಅಷ್ಟೆ ಅಲ್ಲದೇ ಉದ್ಯೋಗ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾಳೆ ಎಂದು ಬಾಗಲಕೋಟೆ ವಿ.ವಿ.ಕೆ.ಫೌಂಡೇಶನ್ ಸಂಸ್ಥಾಪಕಿ, ಬಾಗಲಕೋಟೆ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಮಹಿಳೆ ಕೇವಲ ಮನೆಯನ್ನು ನಿರ್ವಹಿಸುವುದು ಅಷ್ಟೆ ಅಲ್ಲದೇ ಉದ್ಯೋಗ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾಳೆ ಎಂದು ಬಾಗಲಕೋಟೆ ವಿ.ವಿ.ಕೆ.ಫೌಂಡೇಶನ್ ಸಂಸ್ಥಾಪಕಿ, ಬಾಗಲಕೋಟೆ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದರು.

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಹಾಗೂ ವಿವಿಧ ನಿಕಾಯಗಳ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಮಹಿಳಾ ಸಾಂಸ್ಕೃತಿಕ ಹಬ್ಬ-2026 ಉದ್ಘಾಟನೆಯಲ್ಲಿ ಮಾತನಾಡಿದ ಅವರು, ಮಹಿಳೆಯರು ಇಂದು ಪ್ರತಿಯೊಂದು ಕ್ಷೇತ್ರಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದು, ಮಹಿಳೆಯರು ಸ್ಪಷ್ಟವಾದ ಗುರಿಗಳನ್ನು ಹೊಂದಬೇಕು. ಅದಕ್ಕಾಗಿ ಸತತ ಪರಿಶ್ರಮ ಅಗತ್ಯವಿದೆ ಎಂದರು.ಪದ್ಮಶ್ರೀ ಪುರಸ್ಕೃತೆ ಡಾ.ಸೀತವ್ವ ಜೋಡಟ್ಟಿ ಮಾತನಾಡಿ, ನಾಲ್ಕು ಗೋಡೆಗಳ ಮಧ್ಯದಿಂದ ಮಹಿಳೆಯರು ಮೊದಲು ಹೊರ ಬರಬೇಕು. ಅಂದಾಗ ಮಾತ್ರ ಮಹಿಳೆಯರು ಸುಧಾರಣೆಯಾಗಲು ಸಾಧ್ಯ ಎಂದರು.ಮಹಿಳೆಯರು ಅಬಲೆಯಲ್ಲ ಸಬಲರು, ತೊಟ್ಟಿಲು ತೂಗುವ ಕೈ ದೇಶವನ್ನು ಆಳುತ್ತದೆ, ಇದಕ್ಕೆ ರಾಷ್ಟ್ರಪತಿ ಮುರ್ಮು ಅವರು ನಿದರ್ಶನ. ಮಹಿಳೆಯರ ಸಬಲೀಕರಣಕ್ಕೆ ಡಾ.ಬಾಬಾಸಾಹೇಬ ಅಂಬೇಡ್ಕರ್‌ ಅವರ ಶಿಕ್ಷಣ, ಸಂಘಟನೆ, ಹೋರಾಟ ಈ ಸಂದೇಶಗಳೆ ಮೂಲ ಮಂತ್ರಗಳಾಗಿವೆ. ದೇವದಾಸಿ ಪದ್ಧತಿ ನಿಲ್ಲಿಸಿ ದೇವದಾಸಿಯರ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಮಾಸ್ ಸಂಸ್ಥೆ 29 ವರ್ಷಗಳನ್ನು ಪೂರೈಸಿದೆ. ದೇವದಾಸಿಯರು ಮನೆಯಲ್ಲಿ ಆಸ್ತಿ ಕೇಳಿದಾಗ ಹಲವಾರು ಎಡರು ತೊಡರುಗಳು ಬಂದವು. ಆಗ ನಾವೂ ಸಂಸ್ಥೆಯಲ್ಲಿ ಕಾನೂನು ಕೋಶ ಆರಂಭಿಸಿದೇವು. ದೇವದಾಸಿ ಮಹಿಳೆಯರಿಗೆ ಮಾಶಾಸನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದೆವು. ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ಮಾಶಾಸನ ಮಂಜೂರು ಮಾಡಿದರು. ಈ ಎಲ್ಲ ಶ್ರೇಯಸ್ಸು ಮಾಸ್ ಸಂಸ್ಥೆಗೆ ಸೇರುತ್ತದೆ ಎಂದರು.ಸಿಂಡಿಕೇಟ್ ಸದಸ್ಯೆ ಮಮತಾ.ಎಸ್ ಮಾತನಾಡಿ, ಮಹಿಳೆಯರು ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಬಲಿಷ್ಠ ರಾಷ್ಟ್ರವನ್ನು ಕಟ್ಟಲು ಸಾಧ್ಯ. ಕೇವಲ ಒಬ್ಬರೇ ಬೆಳೆಯುವುದು ಅಲ್ಲಾ ನಮ್ಮ ಜೊತೆಯಲ್ಲಿ ಇರುವವರನ್ನು ಬೆಳೆಸಿದಾಗ ಮಹಿಳಾ ಸಬಲೀಕರಣ ಸಾಧ್ಯವಾಗುತ್ತದೆ. ಜೀವನದಲ್ಲಿ ತಂದೆ ತಾಯಿಗಳ ಸ್ಥಾನ ಮಹತ್ವದಾಗಿದೆ. ಅವರಿಗೆ ಗೌರವವಿಸುವುದು ನಮ್ಮ ಕರ್ತವ್ಯವಾಗಿದೆ. ಉತ್ತಮ ಆರೋಗ್ಯ ಮತ್ತು ಮನಸ್ಥಿತಿಯನ್ನು ಹೊಂದಿ ಪ್ರಗತಿ ಹೊಂದಬೇಕು ಎಂದು ಸಲಹೆ ನೀಡಿದರು.ಕುಲಸಚಿವ ಶಂಕರಗೌಡ ಸೋಮನಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಆಶಯಗಳನ್ನು ಅನುಷ್ಠಾನಗೊಳಿಸಲು ನಾವೆಲ್ಲರೂ ಇಂದು ಸಂಕಲ್ಪ ಮಾಡಬೇಕಾಗಿದೆ ಎಂದರು.ಇದೇ ವೇಳೆ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಡಾ.ಶಶಿಕಲಾ ರಾಠೋಡ ಕಾರ್ಯಕ್ರಮ ನಡೆಸಿಕೊಟ್ಟರು. ಸಿಂಡಿಕೇಟ್ ಹಾಗೂ ಅಕಾಡೆಮಿಕ್ ಕೌನ್ಸಿಲ್ ಸದಸ್ಯರು, ವಿವಿಧ ನಿಕಾಯಗಳ ಡೀನರು, ವಿವಿಯ ಸ್ನಾತಕ ಹಾಗೂ ಸ್ನಾತಕೋತರ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್.ಲಕ್ಕಣ್ಣವರ, ಸಂವಿಧಾನ ಪ್ರಸ್ತಾವನೆ ಓದಿಸಿದರು. ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಭಾಗದ ವಿದ್ಯಾರ್ಥಿನಿಯರು ಮಹಿಳಾ ಗೀತೆ ಹಾಗೂ ಹೋರಾಟ ಗೀತೆ ಹಾಡಿದರು. ಮಹಿಳಾ ಸಾಂಸ್ಕೃತಿಕ ಹಬ್ಬದ ಸದಸ್ಯ ಸಂಚಾಲಕಿ ಪ್ರೊ.ಲಕ್ಷ್ಮೀದೇವಿ.ವೈ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೊ.ಶಾಂತಾದೇವಿ.ಟಿ ಸ್ವಾಗತಿಸಿದರು, ಡಾ.ತಹಮೀನಾ ಕೋಲಾರ, ಡಾ.ಕಲಾವತಿ ಕಾಂಬಳೆ ಮತ್ತು ಪ್ರೊ.ಜ್ಯೋತಿ ಉಪಾದ್ಯೆ ಅತಿಥಿಯರನ್ನು ಪರಿಚಯಿಸಿದರು. ರುಕ್ಮವ್ವ ಅಗಸರ ವಂದಿಸಿದರು, ಪ್ರೊ.ರಾಜು ಬಾಗಲಕೋಟೆ ನಿರೂಪಿಸಿದರು.