ಕುಶಾಲನಗರ: ಸರ್ಕಾರಿ ಯೋಜನೆಗಳು ಹಾಗೂ ಜನಪರ ಕಾರ್ಯಕ್ರಮಗಳ ನ್ಯೂನತೆಗಳ ಬಗ್ಗೆ ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಪ್ರಕಟಗೊಳ್ಳುವ ವರದಿಗಳನ್ನು ಆಧರಿಸಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಮೇಲೆ ಲೋಕಾಯುಕ್ತ ಪ್ರಾಧಿಕಾರ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ಪ್ರಾಧಿಕಾರದ ಡಿ ವೈ ಎಸ್ ಪಿ ದಿನಕರ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.
ಕುಶಾಲನಗರದ ಪುರಸಭೆ ಸಭಾಂಗಣದಲ್ಲಿ ನಡೆದ ಲೋಕಾಯುಕ್ತ ಕುಂದು ಕೊರತೆ ಅಹವಾಲು ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಜನರಿಂದ ದೂರುಗಳನ್ನು ಸ್ವೀಕರಿಸಿ ನಂತರ ಮಾತನಾಡಿದರು.ಅಧಿಕಾರಿಗಳು ಸಿಬ್ಬಂದಿ ಜನರಿಗೆ ತೊಂದರೆ ಆಗದ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಆತ್ಮ ಸಾಕ್ಷಿಗೆ ಅನುಗುಣವಾಗಿ ಕೆಲಸವಾಗಲಿ ಎಂದ ದಿನಕರ ಶೆಟ್ಟಿ, ರೈತಾಪಿ ವರ್ಗ, ವಯೋವೃದ್ಧರ ಸಮಸ್ಯೆಗಳ ತಕ್ಷಣ ಪರಿಶೀಲಿಸಿ ಬಗೆಹರಿಸಬೇಕು. ಮಾಹಿತಿ ನೀಡಲು ಕಚೇರಿಗಳಿಗೆ ಅಲೆದಾಡಿಸಬಾರದು. ಸರ್ಕಾರಿ ಕಚೇರಿಗಳು ಸಮರ್ಪಕವಾಗಿ ನಿರ್ವಹಣೆ ಆಗುವಂತೆ ಅಧಿಕಾರಿಗಳು ಗಮನಿಸಬೇಕು ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಕಚೇರಿಗಳ ವ್ಯಾಪ್ತಿಯ ಸಣ್ಣ ವಿಷಯಗಳ ಬಗ್ಗೆ ದೂರುಗಳ ಪಟ್ಟಿ ಹೆಚ್ಚಾಗಿದ್ದು ಅಧಿಕಾರಿಗಳು ಗಮನಹರಿಸುವಂತೆ ಸೂಚಿಸಿದರು. ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಕಳೆದ 12 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಒಳಚರಂಡಿ ಕಾಮಗಾರಿ ಬಗ್ಗೆ ಕಾವೇರಿ ನದಿ ಸ್ವಚ್ಛತಾ ಆಂದೋಲನದ ಪ್ರಮುಖರು ದೂರು ನೀಡಿದ ಹಿನ್ನೆಲೆಯಲ್ಲಿ ಒಳಚರಂಡಿ ಮಂಡಳಿ ಅಧಿಕಾರಿ ಪ್ರಸನ್ನ ಕುಮಾರ್, ಪುರಸಭೆ ಮುಖ್ಯ ಅಧಿಕಾರಿ ಟಿ ಎಸ್ ಗಿರೀಶ್ ಮತ್ತಿತರ ಅಧಿಕಾರಿಗಳ ಬಳಿ ಮಾಹಿತಿ ಕಲೆ ಹಾಕಿದರು. ಕೂಡಲೇ ಕಾಮಗಾರಿಯನ್ನು ಪೂರ್ಣಗೊಳಿಸಿ ಹೊರಗೆ ನೀಡುವಂತೆ ಸೂಚಿಸಿದರು.ಸ್ವಯಂಪ್ರೇರಿತ ದೂರು: ತಾವರೆಕೆರೆ ದುಸ್ಥಿತಿಯ ಬಗ್ಗೆ ಪತ್ರಿಕಾ ವರದಿ ಆಧರಿಸಿ ಈಗಾಗಲೇ ಲೋಕಾಯುಕ್ತದ ಮೂಲಕ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ. ಒಂದು ತಿಂಗಳೊಳಗೆ ಕೆರೆ ಅಭಿವೃದ್ಧಿಯ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಕೆರೆ ಜಾಗದ ಸಂರಕ್ಷಣೆಗಾಗಿ ಕೂಡಲೇ ಹದ್ದುಬಸ್ತು ಸರ್ವೇ ನಡೆಸಿ ಆವರಣ ಬೇಲಿ ನಿರ್ಮಿಸುವಂತೆ ಸೂಚಿಸಿದರು.
ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಮಜಾಯಿಸಿಕೆ ಪಡೆದ ಡಿ ವೈ ಎಸ್ ಪಿ ದಿನಕರ ಶೆಟ್ಟಿ, ಎಲ್ಲಾ ಸಮಸ್ಯೆಗಳಿಗೂ ಶೀಘ್ರದಲ್ಲಿ ಪರಿಹಾರ ಕಂಡುಹಿಡಿಯಬೇಕು. ಸಮಸ್ಯೆಗಳ ಪರಿಹಾರದ ಬಗ್ಗೆ ಅಧಿಕಾರಿಗಳು ವರದಿ ಸಲ್ಲಿಸುವಂತೆ ಡಿ ವೈ ಎಸ್ ಪಿ ದಿನಕರ್ ಶೆಟ್ಟಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಲೋಕಾಯುಕ್ತ ಇನ್ಸ್ಪೆಕ್ಟರ್ ವೀಣಾ ನಾಯಕ್ ಮತ್ತು ಸಿಬ್ಬಂದಿಗಳು ತಾಲೂಕು ತಹಶೀಲ್ದಾರ್ ಕೃಷ್ಣಮೂರ್ತಿ, ಕುಶಾಲನಗರ ಪುರಸಭೆ ಮುಖ್ಯ ಅಧಿಕಾರಿ ಗಿರೀಶ್ ಪೊಲೀಸ್ ವೃತ್ತ ನಿರೀಕ್ಷಕ ಪ್ರದೀಪ್ ಕುಮಾರ್ ಮತ್ತು ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ದೂರುದಾರರು ಪಾಲ್ಗೊಂಡಿದ್ದರು.