ಕನ್ನಡಪ್ರಭ ವಾರ್ತೆ ಸಕಲೇಶಪುರ
ದುಡಿಯುವ ವರ್ಗದವರು ದುಷ್ಚಟಗಳಿಗೆ ಬಿದ್ದು ಜೀವನ ಹಾಳು ಮಾಡಿಕೊಳ್ಳುವುದಕ್ಕಿಂತ ತಮ್ಮ ತಮ್ಮ ವೃತ್ತಿ ಕ್ಷೇತ್ರದಲ್ಲಿ ಹಠ ಹಾಗೂ ಪರಿಶ್ರಮದಿಂದ ದುಡಿದರೆ ಸ್ವಾವಲಂಬಿ ಜೀವನ ನಡೆಸಲು ಸಾಧ್ಯ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿವಿಧ ವೃತ್ತಿ ಆಧಾರಿತ 69 ಕುಶಲಕರ್ಮಿಗಳಿಗೆ ಯಂತ್ರೋಪಕರಣಗಳನ್ನು ವಿತರಿಸಿ ಅವರು ಮಾತನಾಡಿದರು. ಸಮಾಜದ ಎಲ್ಲ ವರ್ಗದವರೂ ತಮ್ಮ ವೃತ್ತಿಗೆ ಅಗತ್ಯವಾದ ಸಾಧನಗಳನ್ನು ಪಡೆದು ಸ್ವಾವಲಂಬಿಗಳಾಗಬೇಕು. ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಸಕಾರಾತ್ಮಕವಾಗಿ ಬಳಸಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಸಲಹೆ ನೀಡಿದರು.ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಉಪ ನಿರ್ದೇಶಕ ರವಿಪ್ರಸಾದ್ ಮಾತನಾಡಿ, ಮರ ಕೆಲಸ, ಗಾರೆ ಕೆಲಸ, ಹೊಲಿಗೆ, ಧೋಬಿ, ಎಲೆಕ್ಟ್ರಿಕಲ್ ವೈರಿಂಗ್, ಮೋಟಾರ್ ರಿವೈಂಡಿಂಗ್ ಹಾಗೂ ಬೋರ್ವೆಲ್ ದುರಸ್ತಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ತೊಡಗಿರುವವರಿಗೆ ಸರ್ಕಾರದಿಂದ ಈ ನೆರವು ನೀಡಲಾಗುತ್ತಿದೆ. ಆಯ್ಕೆಯಾದ ಫಲಾನುಭವಿಗಳಿಗೆ ಬ್ಯಾಂಕ್‌ಗಳ ಮೂಲಕ ಸಾಲ ಸೌಲಭ್ಯದೊಂದಿಗೆ ಸಹಾಯಧನ ನೀಡಲಾಗುತ್ತಿದ್ದು, ಇದು ಉದ್ಯಮ ವಿಸ್ತರಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಕೈಗಾರಿಕಾ ವಿಸ್ತರಣಾ ಅಧಿಕಾರಿ ಆನಂದ್ ಸೇರಿದಂತೆ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಫಲಾನುಭವಿಗಳು ಉಪಸ್ಥಿತರಿದ್ದರು.
