ಶಿಕ್ಷಕರ ಕುಂದುಕೊರತೆ ನಿವಾರಣೆಗೆ ಶ್ರಮಿಸಿ

| Published : Jan 05 2025, 01:32 AM IST

ಸಾರಾಂಶ

ಗ್ರಾಮೀಣ ಪ್ರದೇಶದಲ್ಲಿರುವ ಪ್ರೌಢ ಶಾಲೆಗಳಲ್ಲಿ ಸರ್ಕಾರ ಆಧುನಿಕ ತಂತ್ರಜ್ಞಾನದ ಪರಿಕರ ನೀಡುವ ಮೂಲಕ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಆದ್ಯತೆ

ಶಿರಹಟ್ಟಿ: ತಾಲೂಕಿನಲ್ಲಿ ಪ್ರೌಢ ಶಾಲಾ ಶಿಕ್ಷಕರ ಸಮಸ್ಯೆ ನಿವಾರಣೆಗೆ ಪ್ರಾಮಾಣಿಕವಾಗಿ ಶ್ರಮಿಸಬೇಕು. ಕೇವಲ ಯಾವುದೇ ಒಂದು ಸಮುದಾಯದ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಕೆಲಸ ನಿರ್ವಹಿಸದೇ ಎಲ್ಲ ಸಮುದಾಯದ ಶಿಕ್ಷಕರ ಪ್ರತಿನಿಧಿಯಾಗಿ ಎಲ್ಲರ ಕುಂದುಕೊರತೆ ನಿವಾರಣೆಗೆ ಶ್ರಮಿಸಬೇಕು ಎಂದು ಸಹ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಬಿ.ಎಫ್.ಪೂಜಾರ ಕರೆ ನೀಡಿದರು.

ಪಟ್ಟಣದ ಎ.ಎ.ಪಠಾಣ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯ ಸಹ ಶಿಕ್ಷಕರ ಸಂಘದ ಶಿರಹಟ್ಟಿ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರೌಢ ಶಾಲಾ ಶಿಕ್ಷಕರ ಸಂಘದ ಕಾರ್ಯಚಟುವಟಿಕೆಗಳನ್ನು ಚಾಚು ತಪ್ಪದೇ ಮಾಡುವ ಜತೆಗೆ ಎಲ್ಲ ಶಿಕ್ಷಕರಿಗೆ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಹೆಜ್ಜೆ ಇಡಬೇಕು ಎಂದು ಹೇಳಿದರು.

ಗ್ರಾಮೀಣ ಪ್ರದೇಶದಲ್ಲಿರುವ ಪ್ರೌಢ ಶಾಲೆಗಳಲ್ಲಿ ಸರ್ಕಾರ ಆಧುನಿಕ ತಂತ್ರಜ್ಞಾನದ ಪರಿಕರ ನೀಡುವ ಮೂಲಕ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಆದ್ಯತೆ ನೀಡುತ್ತಿದೆ.ಅದರಂತೆ ಶಿಕ್ಷರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಿಕ್ಷಣದ ಗುಣಮಟ್ಟ ಹೆಚ್ಚಳಕ್ಕೆ ಪ್ರಥಮ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ತಾಂತ್ರಿಕತೆ ಇಲ್ಲದೆ ಮುಂದಿನ ಜೀವನ ನಡೆಯುವುದು ಕಷ್ಟ. ಶಿಕ್ಷಣದಲ್ಲಿ ತಂತ್ರಜ್ಞಾನ ಬಹಳ ಮುಖ್ಯವಾಗಿದೆ. ಶಿಕ್ಷಕರು ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಯಲ್ಲಿ ತಂತ್ರಜ್ಞಾನದ ಅರಿವು ಮೂಡಿಸಬೇಕು.ಬರೆದು ಕಲಿಯುವ ಶಿಕ್ಷಣ ಪದ್ಧತಿಯ ಬದಲು ವೀಕ್ಷಣೆ ಮತ್ತು ಪ್ರಯೋಗ ಮಾಡಿ ಕಲಿಯುವ ಶಿಕ್ಷಣ ಪದ್ಧತಿ ಬಂದಿದೆ.ಈ ಹಿನ್ನೆಲೆಯಲ್ಲಿ ಜವಾಬ್ದಾರಿ ಅರಿತು ಮಕ್ಕಳಿಗೆ ಬೋಧನೆ ಮಾಡಬೇಕು ಎಂದು ಹೇಳಿದರು.

ಕರ್ನಾಟಕ ರಾಜ ಮಾಧ್ಯಮಿಕ ಶಾಲಾ ನೌಕರ ಸಂಘದ ಜಿಲ್ಲಾಧ್ಯಕ್ಷ ಎಂ.ಕೆ.ಲಮಾಣಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಸಂಘಟನೆಯಿಂದ ನೌಕರರು ಎಲ್ಲ ಸೌಲಭ್ಯ ಪಡೆಯಲು ಸಾಧ್ಯ.ಶಿಕ್ಷಕರ ಯಾವುದೇ ರೀತಿಯ ಸಮಸ್ಯೆ ಇದ್ದರೂ ಕೂಡ ಸಂಘಟನೆ ಮೂಲಕ ಎಲ್ಲರೂ ಒಗ್ಗೂಡಿ ಹೋರಾಟ ಮಾಡಿ ಪಡೆಯಬಹುದು ಎಂದು ಹೇಳಿದರು.

ಇಂದು ದಿನಕ್ಕೊಂದು ಸಂಘಟನೆಗಳು ಹುಟ್ಟಿಕೊಳ್ಳುತ್ತಿವೆ.ಸಂಘಟನೆ ಹುಟ್ಟು ಹಾಕುವುದು ಮುಖ್ಯವಲ್ಲ.ಅದನ್ನು ಸರಿಯಾದ ರೀತಿಯಲ್ಲಿ ಬೆಳೆಸುವುದು ಸಂಘದ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಜವಾಬ್ದಾರಿಯಾಗಿದೆ.ಸಂಘಟನೆಯಲ್ಲಿರುವ ಪದಾಧಿಕಾರಿಗಳು ಸಂಘದ ಗುರಿ- ಉದ್ದೇಶ ಸರಿಯಾದ ರೀತಿಯಲ್ಲಿ ತಿಳಿಯಬೇಕು. ಸಂಘದ ಅಭಿವೃದ್ಧಿಗಾಗಿ ಶ್ರಮಿಸಲು ಪ್ರತಿಯೊಬ್ಬರೂ ಕೈಜೋಡಿಸಬೆಕು ಎಂದರು.

ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ನೂತನ ತಾಲೂಕಾಧ್ಯಕ್ಷರನ್ನಾಗಿ ವೆಂಕಟೇಶ ಅರ್ಕಸಾಲಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಅಶೋಕ ಇಚ್ಛಂಗಿ, ಗೌರವಾಧ್ಯಕ್ಷರಾಗಿ ಎಂ.ಎ.ಮಕಾನದಾರ, ಉಪಾಧ್ಯಕ್ಷ ರಾಗಿ ಬಿ.ಸುರೇಶ, ಸಹ ಕಾರ್ಯದರ್ಶಿಯಾಗಿ ಘಂಟಾಮಠ, ಸುನೀಲ ಲಮಾಣಿ ಸಂಘಟನಾ ಕಾರ್ಯದರ್ಶಿಯಾಗಿ, ವೆಂಕಟೇಶ ಜಿ. ರಾಜ್ಯ ಪರಿಷತ್ ಸದಸ್ಯರಾಗಿ, ಅಗಡಿ ವಿ.ಟಿ. ಅವರನ್ನು ಸೇರಿದಂತೆ ಉಳಿದ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು. ತೇಲಸಂಗ ಸ್ವಾಗತಿಸಿದರು. ಟಿ.ಎಸ್. ಲಮಾಣಿ ವಂದಿಸಿದರು.