ಸಾರಾಂಶ
ಮೇಸ್ತ್ರಿ ಮೂರ್ತಿಗೆ ಕಿರುಕುಳ ನೀಡಿ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ । ಮಾಜಿ ಕಾರ್ಪೊರೇಟರ್ ಪ್ರಭು ಬಂಧನಕ್ಕೆ ಪಾಲಿಕೆ ನೌಕರರ ಆಗ್ರಹ
ಕನ್ನಡಪ್ರಭ ವಾರ್ತೆ ಶಿವಮೊಗ್ಗಶಿವಮೊಗ್ಗ ಮಹಾನಗರ ಪಾಲಿಕೆ ಪೌರಕಾರ್ಮಿಕ ಮೇಸ್ತ್ರಿ ಮೂರ್ತಿಗೆ ಕಿರುಕುಳ ನೀಡಿದ ಮಹಾನಗರ ಪಾಲಿಕೆ ಮಾಜಿ ಸದಸ್ಯ ಬಿಜೆಪಿಯ ಪ್ರಭು ಯಾನೆ ಪ್ರಭಾಕರ್ ಅವರನ್ನು ಬಂಧಿಸಿ, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪಾಲಿಕೆ ನೌಕರ ಸಂಘದ ನೇತೃತ್ವದಲ್ಲಿ ನೌಕರರು ಪ್ರತಿಭಟನೆ ನಡೆಸಿದರು.
ಪಾಲಿಕೆ ಅವಧಿ ಮುಗಿದಿದ್ದರೂ ಮಾಜಿ ಸದಸ್ಯರಾಗಿರುವ ಪ್ರಭು ಅವರು ತಮ್ಮ ವಾರ್ಡಿನ ಪೌರಕಾರ್ಮಿಕ ಮೇಸ್ತ್ರಿ ಮೂರ್ತಿಗೆ ಅನಾವಶ್ಯಕ ಕಿರುಕುಳ ನೀಡಿದ್ದಾರೆ. ಇದರಿಂದ ಮನನೊಂದ ಮೂರ್ತಿ ಅವರು ಆತ್ಮಹತ್ಯೆ ನಿರ್ಧಾರಕ್ಕೆ ಬಂದು ನಾಪತ್ತೆಯಾಗಿದ್ದರು. ಬಳಿಕ ಅವರನ್ನು ಪತ್ತೆದ ಮಾಡಿ ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು.13ನೇ ವಾರ್ಡಿನ ಮೇಸ್ತಿಯಾಗಿದ್ದ ಮೂರ್ತಿಗೆ ಮಾಜಿ ಸದಸ್ಯ ಪ್ರಭು ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದು, ಇದರಿಂದ ಬೇಸತ್ತು ತಾನು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಮೂರ್ತಿಯವರು ನಿನ್ನೆ ವೀಡಿಯೋ ಒಂದನ್ನು ಮಾಡಿ ವಾಟ್ಸಾಪ್‌ನಲ್ಲಿ ಹರಿಬಿಟ್ಟು ನಾಪತ್ತೆಯಾಗಿದ್ದರು. ತಕ್ಷಣವೇ ನೌಕರ ಸಂಘದ ಅಧ್ಯಕ್ಷ ಎನ್.ಗೋವಿಂದ, ಪದಾಧಿಕಾರಿಗಳು ಮತ್ತು ಕೋಟೆ ಪೊಲೀಸರು ಮೊಬೈಲ್ ಟವರ್ ನೆಟ್‌ವರ್ಕ್ ಮೂಲಕ ಮೂರ್ತಿಯವರನ್ನು ಉಂಬ್ಳೇಬೈಲು ಅರಣ್ಯ ಪ್ರದೇಶದಲ್ಲಿ ಪತ್ತೆ ಮಾಡಲಾಯಿತು ಎಂದು ತಿಳಿಸಿದರು.ಮೂರ್ತಿಯವರಿಗೆ ತೀವ್ರ ಕಿರುಕುಳ ನೀಡಿ, ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದನೆ ನೀಡಿದ ಪ್ರಭು ಅವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ, ಜಾತಿನಿಂದನೆ ಮತ್ತು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಪ್ರಕರಣಗಳನ್ನು ದಾಖಲಿಸಿ ತಕ್ಷಣ ಬಂಧಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.ನೌಕರರ ಸಂಘದ ಅಧ್ಯಕ್ಷ ಎನ್.ಗೋವಿಂದು ಮಾತನಾಡಿ, ಪೌರಕಾರ್ಮಿಕರ ಮೇಲೆ ನಡೆಯುವ ಕಿರುಕುಳವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಇಡೀ ನಗರದ ಸ್ವಚ್ಛತೆ ಕಾಪಾಡಲು ಹಗಲು ರಾತ್ರಿ ದುಡಿಯುವ ಪೌರಕಾರ್ಮಿಕರು, ಪಾಲಿಕೆ ನೌಕರ ವರ್ಗದ ಮೇಲೆ ಯಾರೆ ದಬ್ಬಾಳಿಕೆ ನಡೆಸಿದರೂ ಅದು ಖಂಡನೀಯ. ಅವರ ವಿರುದ್ಧ ಹೋರಾಟ ಮಾಡಲಾಗುವುದು. ಮೂರ್ತಿಗೆ ಕಿರುಕುಳ ನೀಡಿದ ಮಾಜಿ ಪಾಲಿಕೆ ಸದಸ್ಯ ಪ್ರಭು ಅವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಗುರದತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಅವರು ಮನವಿ ಸ್ವೀಕರಿಸಿ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ಶಾಸಕ ಎಸ್.ಎನ್.ಚನ್ನಬಸಪ್ಪ, ಮಾಜಿ ಪಾಲಿಕೆ ಸದಸ್ಯ ಎಚ್.ಸಿ.ಯೋಗೀಶ್, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಶಿವಕುಮಾರ್, ಕಾಶಿವಿಶ್ವನಾಥ್ ಭೇಟಿ ನೀಡಿ ಅಹವಾಲು ಆಲಿಸಿದರು.
ಮಹಾನಗರ ಪಾಲಿಕ ನೌಕರರ ಸಂಘದ ಉಪಾಧ್ಯಕ್ಷ ಕುಮಾರ.ಪಿ, ಪ್ರಧಾನ ಕಾರ್ಯದರ್ಶಿ ಡಿ.ಮೋಹನ್ ಕುಮಾರ್, ಖಜಾಂಚಿ ಕೆ.ಮಂಜಣ್ಣ, ಸಹ ಕಾರ್ಯದರ್ಶಿ ಲೋಹಿತ್ ಯಾದವ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.ಪೌರ ಕಾರ್ಮಿಕರ ಪರವಾಗಿ ನಾನಿದ್ದೇನೆ: ಶಾಸಕ ಚನ್ನಬಸಪ್ಪ
ಪೌರ ಕಾರ್ಮಿಕರ ಪರವಾಗಿ ನಾನಿದ್ದೇನೆ. ಪೌರ ಕಾರ್ಮಿಕರಿಗೋಸ್ಕರ ಹಿಂದಿನಿಂದಲೂ ಅನೇಕ ಕಾರ್ಯಗಳನ್ನು ಮಾಡುತ್ತ ಬಂದಿದ್ದೇವೆ. ಜೊತೆಯಾಗಿ ನಗರದ ಅಭಿವೃದ್ಧಿಗೆ ಶ್ರಮಿಸಿದ್ದೇವೆ. ಯಾರೂ ಕೂಡ ನೌಕರರನ್ನು ಅವಮಾನ ಮಾಡಬಾರದು. ಈ ಬಗ್ಗೆ ಸೂಕ್ತ ಮಾಹಿತಿ ಪಡೆದು ಸರಿಪಡಿಸುವ ಕಾರ್ಯ ಎಲ್ಲರೂ ಸೇರಿ ಮಾಡೋಣ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಜನಪ್ರತಿನಿಧಿಗಳಿಗೂ ಪೌರ ಕಾರ್ಮಿಕರಿಗೂ ಇಬ್ಬರಿಗೂ ಅನ್ಯಾಯವಾಗಬಾರದು. ಎಲ್ಲರೂ ನಾಗರಿಕರ ಹಿತದೃಷ್ಟಿಯಿಂದ ಕೆಲಸ ಮಾಡುತ್ತಾರೆ. ಪೌರ ಕಾರ್ಮಿಕರ ಬಗ್ಗೆ ನನಗೆ ಅತೀವ ಕಾಳಜಿಯಿದೆ. ತಪ್ಪಾಗಿದ್ದರೆ ಸರಿಪಡಿಸೋಣ ಎಂದು ಭರವಸೆ ನೀಡಿದರು. ಪೌರಕಾರ್ಮಿಕರ ಪ್ರತಿಭಟನೆಗೆ ಬೆಂಬಲ
ಶಿವಮೊಗ್ಗ: ಪೌರಕಾರ್ಮಿಕ ಮೇಸ್ತ್ರಿ ಮೂರ್ತಿ ಅವರಿಗೆ ಮಾನಸಿಕ ಕಿರುಕುಳ ನೀಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಮಾಜಿ ಕಾರ್ಪೋರೇಟರ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪೌರ ಕಾರ್ಮಿಕರು ನಡೆಸಿದ ಪ್ರತಿಭಟನೆಗೆ ವಿವಿಧ ಸಂಘಟನೆ, ನಾಯಕರು ಬೆಂಬಲ ವ್ಯಕ್ತಪಡಿಸಿದ್ದಾರೆ.ನೌಕರರ ಪ್ರತಿಭಟನೆಗೆ ಡಿಎಸ್‌ಎಸ್ ಮುಖಂಡ ರಂಗಪ್ಪ, ಮಾದಿಗ ಸಮುದಾಯದ ಮುಖಂಡ ತೇಜೇಸ್ ಸೇರಿದಂತೆ ಅನೇಕ ಸಂಘಟನೆಗಳ ಮುಖಂಡರು ಬೆಂಬಲ ನೀಡಿದ್ದಾರೆ.