ವಿಶ್ವ ಏಡ್ಸ್ ದಿನ: ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಿ

| Published : Nov 17 2023, 06:45 PM IST

ಸಾರಾಂಶ

ವಿಶ್ವ ಏಡ್ಸ್ ದಿನ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ವಿಶೇಷವಾಗಿ ಆಚರಣೆ ಮಾಡಬೇಕು. ಕೇವಲ ಒಂದು ದಿನದ ಕಾರ್ಯಕ್ರಮಕ್ಕೆ ಸೀಮಿತಗೊಳಿಸದೇ ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಲ್ಲಿ ವಿಶೇಷ ಚಟುವಟಿಕೆ, ಉಪನ್ಯಾಸ, ಎಚ್.ಐ.ವಿ. ಏಡ್ಸ್ ಕುರಿತು ಅರಿವು, ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ನೋಡಲ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಹಾವೇರಿ

ವಿಶ್ವ ಏಡ್ಸ್ ದಿನ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ವಿಶೇಷವಾಗಿ ಆಚರಣೆ ಮಾಡಬೇಕು. ಕೇವಲ ಒಂದು ದಿನದ ಕಾರ್ಯಕ್ರಮಕ್ಕೆ ಸೀಮಿತಗೊಳಿಸದೇ ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಲ್ಲಿ ವಿಶೇಷ ಚಟುವಟಿಕೆ, ಉಪನ್ಯಾಸ, ಎಚ್.ಐ.ವಿ. ಏಡ್ಸ್ ಕುರಿತು ಅರಿವು, ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ನೋಡಲ್ ಅಧಿಕಾರಿಗಳಿಗೆ

ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜರುಗಿದ ವಿಶ್ವ ಏಡ್ಸ್ ದಿನದ ಪೂರ್ವ ಸಿದ್ಧತೆ ಹಾಗೂ ಎಚ್.ಐ.ವಿ. ಸೋಂಕಿತರಿಗೆ ಸರ್ಕಾರದಿಂದ ದೊರೆಯುವ ಸಾಮಾಜಿಕ ಸೌಲತ್ತುಗಳ ಅನುಷ್ಠಾನ ಕುರಿತಾಗಿ ಪ್ರಗತಿ ಪರಿಶೀಲಿಸಿದ ಅವರು, ಏಡ್ಸ್ ದಿನ ಕಾರ್ಯಕ್ರಮವನ್ನು ಜಿಲ್ಲಾ ಮಟ್ಟದಲ್ಲಿ ಹೊರತಾಗಿ ತಾಲೂಕು ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅರಿವು ಮೂಡಿಸುವಂತೆ ಸೂಚನೆ ನೀಡಿದರು.

ವಿಶೇಷ ಪಾಲನಾ ಯೋಜನೆಯಡಿ ಎಚ್.ಐ.ವಿ. ಸೋಂಕಿತ ಹಾಗೂ ಬಾಧಿತ ಮಕ್ಕಳಿಗೆ ಪೌಷ್ಠಿಕ ಆಹಾರ ಮತ್ತು ವಿದ್ಯಾಭ್ಯಸಕ್ಕಾಗಿ ಪ್ರತಿ ತಿಂಗಳು ₹ ಒಂದು ಸಾವಿರ ನೀಡಲಾಗುತ್ತಿದೆ. ಈ ಸೌಲಭ್ಯವನ್ನು ಎಲ್ಲ ಬಾಧಿತ ಮತ್ತು ಸೋಂಕಿತ ಮಕ್ಕಳು ಪಡೆಯುವಂತಾಗಬೇಕು. ಸಂಬಂಧಿಸಿದ ಅಧಿಕಾರಿಗಳು ಹೆಚ್ಚಿನ ಆಸಕ್ತಿವಹಿಸಿ ಮಕ್ಕಳಿಗೆ ಸೌಲಭ್ಯ ದೊರಕಿಸಿಕೊಡಲು ಸೂಚನೆ ನೀಡಿದರು.

ಎಚ್.ಐ.ವಿ. ಸೋಂಕಿತರಿಗೆ ಉಚಿತ ಪರೀಕ್ಷೆಗಳು ಮತ್ತು ಚಿಕಿತ್ಸೆಗಳು ಎಲ್ಲ ಸರ್ಕಾರಿ ಆಸ್ಪತ್ರೆಗಳ ಜೊತೆಗೆ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲೂ ಲಭ್ಯ ಇದೆ. ಈ ಕುರಿತಂತೆ ಅರಿವು ಮೂಡಿಸಬೇಕು. ಎ.ಆರ್.ಟಿ. ಚಿಕಿತ್ಸೆಗಾಗಿ ಆಗಮಿಸುವ ಎಚ್.ಐ.ವಿ. ಬಾಧಿತರಿಗೆ ಪ್ರಯಾಣ ಭತ್ಯೆಯನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತಿದೆ. ಶಿಕ್ಷಣ ಹಕ್ಕು ಕಾಯ್ದೆಯಡಿ 1ನೇ ತರಗತಿಯಿಂದ 9ನೇ ಹಾಗೂ ಪದವಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ವಿದ್ಯಾರ್ಥಿ ವೇತನ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ, ಸೌಲಭ್ಯ ದೊರಕಿಸಿಕೊಡಲು ಕ್ರಮವಹಿಸಿ ಎಂದರು.

ಧನಶ್ರೀ ಯೋಜನೆಯಡಿ ಎಚ್.ಐ.ವಿ. ಸೋಂಕಿತ ಮಹಿಳೆಯರಿಗೆ ಸ್ವ ಉದ್ಯೋಗ ಕೈಗೊಳ್ಳಲು ಬ್ಯಾಂಕಿನಿಂದ ಸಾಲ ವಿತರಣೆಗೆ ಮಹಿಳಾ ಅಭಿವೃದ್ಧಿ ನಿಗಮದ ಅಧಿಕಾರಿಗಳು, ಲೀಡ್ ಬ್ಯಾಂಕ್ ವ್ಯವಸ್ಥಾಪಕರೊಂದಿಗೆ ಚರ್ಚಿಸಿ ತ್ವರಿತವಾಗಿ ಸಾಲ ವಿತರಣೆಗೆ ಕ್ರಮ ವಹಿಸಬೇಕು. ಚೇತನ ಯೋಜನೆಯಡಿ ದಮನಿತ ಮಹಿಳೆಯರಿಗೆ, ಲಿಂಗತ್ವ ಅಲ್ಪಸಂಖ್ಯಾತರಿಗೆ ಮೈತ್ರಿ ಯೋಜನೆಯಡಿ ಸಕಾಲದಲ್ಲಿ ಬ್ಯಾಂಕಿನಿಂದ ಸಾಲ ಪಡೆಯಲು ಅಗತ್ಯ ಸಲಹೆ ಹಾಗೂ ನೆರವು ಒದಗಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಎಚ್.ಐ.ವಿ. ಸೋಂಕಿತರಿಗೆ ಕಾನೂನಿನ ನೆರವು ಒದಗಿಸಲು ಎ.ಆರ್.ಟಿ. ಕೇಂದ್ರಗಳಲ್ಲಿ ಕಾನೂನು ಸೇವಾ ಕೇಂದ್ರ ಸ್ಥಾಪಿಸಲಾಗಿದೆ. ತಿಂಗಳ ಮೊದಲ ಹಾಗೂ 3ನೇ ಶನಿವಾರ ಬೆಳಗ್ಗೆ 10 ರಿಂದ 2 ಗಂಟೆವರೆಗೆ ಎ.ಆರ್.ಟಿ. ಕೇಂದ್ರದಲ್ಲಿ ವಕೀಲರು ಉಪಸ್ಥಿತರಿರುತ್ತಾರೆ. ಯಾವುದೇ ದೂರುಗಳಿದ್ದಲ್ಲಿ ನೇರವಾಗಿ ವಕೀಲರನ್ನು ಸಂಪರ್ಕಿಸಿ ನೆರವು ಪಡೆದುಕೊಳ್ಳಬಹುದಾಗಿದೆ. ಈ ಕುರಿತಂತೆ ಜಾಗೃತಿ ಮೂಡಿಸಲು ಸೂಚನೆ ನೀಡಿದರು.

ಎಚ್.ಐ.ವಿ. ಬಾಧಿತರ ಪೈಕಿ ನಿವೇಶನ ಮತ್ತು ಮನೆಗಳಿಗೆ ಅರ್ಜಿ ಸಲ್ಲಿಸಿದರೆ ಆಯ್ಕೆ ಸಂದರ್ಭದಲ್ಲಿ ಅವಕಾಶಗಳಿದ್ದರೆ ಪರಿಗಣಿಸುವಂತೆ ತಿಳಿಸಿದರು.

ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ನೀಲೇಶ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಈವರೆಗೆ 675 ಎಚ್.ಐ.ವಿ. ಬಾಧಿತ ಮಕ್ಕಳಿಗೆ ವಿಶೇಷ ಪಾಲನಾ ಯೋಜನೆಯಡಿ ಪ್ರತಿ ತಿಂಗಳು ₹ಒಂದು ಸಾವಿರ ನೀಡಲಾಗುತ್ತಿದೆ. ಪ್ರಸಕ್ತ ವರ್ಷ 23 ಮಕ್ಕಳು ಈ ಯೋಜನೆ ನೆರವು ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. 280 ಎಚ್.ಐ.ವಿ. ಸೋಂಕಿಯರಿಗೆ ಎ.ಆರ್.ಟಿ. ಕೇಂದ್ರಕ್ಕೆ ಚಿಕಿತ್ಸೆ ಬರಲು ಈವರೆಗೆ ಪ್ರಯಾಣ ಭತ್ಯೆ ನೀಡಲಾಗಿದೆ. ಧನಶ್ರೀ ಯೋಜನೆಯಡಿ ಸ್ವ ಉದ್ಯೋಗ ಕೈಗೊಳ್ಳಲು ಪ್ರತಿ ಫಲಾನುಭವಿಗೆ ₹30 ಸಾವಿರ ಸಾಲವನ್ನು ಬ್ಯಾಂಕಿನಿಂದ ನೀಡಲಾಗುತ್ತಿದೆ. ಈವರೆಗೆ 23 ಫಲಾನುಭವಿಗಳಿಗೆ ಸಾಲ ಮಂಜೂರು ಮಾಡಲಾಗಿದೆ. ಹೊಸದಾಗಿ 4 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಚೇತನಾ ಯೋಜನೆಯಡಿ ಪ್ರತಿ ದಮನಿತ ಮಹಿಳೆಯರಿಗೆ ₹30 ಸಾವಿರ ಸಾಲ ಬ್ಯಾಂಕಿನಿಂದ ನೀಡಲಾಗುತ್ತಿದೆ. ಈ ವರ್ಷ ಆರು ಫಲಾನುಭವಿಗಳಿಗೆ ಮಂಜೂರು ಮಾಡಲಾಗಿದೆ. ಮೈತ್ರಿ ಯೋಜನೆಯಡಿ ಹತ್ತು ಫಲಾನುಭವಿಗಳು ನೆರವು ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.

ವಿವಿಧ ನಿಗಮಗಳಲ್ಲಿ ಎಚ್.ಐ.ವಿ. ಬಾಧಿತ ಫಲಾನುಭವಿಗಳಿಗೆ ಸರ್ಕಾರಿ ಸೌಲಭ್ಯದ ಆಯ್ಕೆಯಲ್ಲಿ ಆದ್ಯತೆ ನೀಡಬೇಕು. ನಿವೇಶನ ಮತ್ತು ಮನೆ ಹಂಚಿಕೆಯಲ್ಲಿ ಆದ್ಯತೆ ನೀಡುವಂತೆ ಸಂಘಟನೆಯ ಮುಖ್ಯಸ್ಥರು ಮನವಿ ಮಾಡಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಎಸ್. ರಾಘವೇಂದ್ರಸ್ವಾಮಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಪಿ.ಆರ್. ಹಾವನೂರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ಡಾ. ಜಗದೀಶ, ಡಾ. ಪ್ರಭಾಕರ, ಕೆ.ಸಿ. ಅಕ್ಷತಾ, ವಿವಿಧ ತಾಲೂಕಾ ಆರೋಗ್ಯಾಧಿಕಾರಿಗಳು, ಇತರ ವೈದ್ಯಾಧಿಕಾರಿಗಳು ಹಾಗೂ ಏಡ್ಸ್ ನಿಯಂತ್ರಣ ಕಾರ್ಯಕ್ರಮದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಸ್ವಯಂ ಸೇವಾ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.