ವಿಶ್ವಸಂಸ್ಥೆಯು 2024ರ ಡಿ. 21ರಂದು ವಿಶ್ವ ಧ್ಯಾನ ದಿನ ಎಂದು ಘೋಷಿಸಿದ್ದು, ಪ್ರಸಕ್ತ ವರ್ಷ 2ನೇ ವರ್ಷದ ವಿಶ್ವ ಧ್ಯಾನ ದಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಗದಗ: ನಗರದ ಈಶ್ವರೀಯ ವಿಶ್ವವಿದ್ಯಾಲಯದ ಆಧ್ಯಾತ್ಮಿಕ ಸಂಸ್ಕೃತಿ ಭವನದಲ್ಲಿ ವಿಶ್ವ ಧ್ಯಾನ ದಿನ ಕಾರ್ಯಕ್ರಮವನ್ನು ಡಿ. 21ರಂದು ಸಂಜೆ 5ಕ್ಕೆ ಆಯೋಜಿಸಲಾಗಿದೆ ಎಂದು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯ ಸಂಚಾಲಕಿ ಬಿ.ಕೆ. ಜಯಂತಿ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಾಗತಿಕ ಶಾಂತಿಯನ್ನು ಬೆಳೆಸಲು, ಒತ್ತಡವನ್ನು ಕಡಿಮೆ ಮಾಡಲು, ಮಾನಸಿಕ ಆರೋಗ್ಯವನ್ನು ಹೆಚ್ಚಿಸಲು ಮತ್ತು ಆತ್ಮಾವಲೋಕನವನ್ನು ಉತ್ತೇಜಿಸಲು ವಿಶ್ವಸಂಸ್ಥೆಯು 2024ರ ಡಿ. 21ರಂದು ವಿಶ್ವ ಧ್ಯಾನ ದಿನ ಎಂದು ಘೋಷಿಸಿದ್ದು, ಪ್ರಸಕ್ತ ವರ್ಷ 2ನೇ ವರ್ಷದ ವಿಶ್ವ ಧ್ಯಾನ ದಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಸೂರ್ಯ ಆಕಾಶದಲ್ಲಿ ತನ್ನ ಉತ್ತರ ಅಥವಾ ದಕ್ಷಿಣದ ಗರಿಷ್ಠ ಹಂತವನ್ನು ತಲುಪಿ ನಂತರ ತನ್ನ ದಿಕ್ಕನ್ನು ಹಿಮ್ಮುಖಗೊಳಿಸುತ್ತಿರುವಂತೆ ತೋರುವ ಖಗೋಳ ವಿದ್ಯಮಾನ. ಅಂದರೆ ಸೂರ್ಯ ಒಂದು ನಿರ್ದಿಷ್ಟ ದಿಕ್ಕಿನಲ್ಲಿ ನಿಂತಿರುವಂತೆ ಕಾಣಿಸುತ್ತದೆ. ಆ ದಿನ ವರ್ಷದ ಅತಿ ಚಿಕ್ಕ ಹಗಲು. ಇದು ಋತುಮಾನಗಳ ಬದಲಾವಣೆಗೆ ಕಾರಣವಾಗುತ್ತದೆ. ಅದುವೇ ಡಿ. 21 ಆಗಿದೆ. ಅತಿ ದೊಡ್ಡ ಹಗಲು ಆಗಿರುವ ಜೂ. 21 ವಿಶ್ವ ಯೋಗ ದಿನ ಆಚರಿಸಿದರೆ, ಡಿ. 21 ವಿಶ್ವ ಧ್ಯಾನ ದಿನವನ್ನಾಗಿ ಆಚರಿಸಲಾಗುತ್ತಿದೆ.

ಧ್ಯಾನವನ್ನು ಮೆಡಿಟೇಶನ್ ಎಂದು ಕೂಡ ಕರೆಯಲಾಗುತ್ತದೆ. ಇದು ಮನಸ್ಸು ಮತ್ತು ಆತ್ಮವನ್ನು ಶಾಂತಗೊಳಿಸುವ ಒಂದು ಪ್ರಾಚೀನ ವಿಧಾನವಾಗಿದೆ. ಧ್ಯಾನವು ಮಾನಸಿಕ, ಶಾರೀರಿಕ ಮತ್ತು ಆಧ್ಯಾತ್ಮಿಕ ಶಾಂತಿಯನ್ನು ಪಡೆಯಲು ಸಹಾಯ ಮಾಡುವ ಸಾಧನೆಯಾಗಿದೆ. ಭಾರತದಲ್ಲಿ ಪ್ರಾಚೀನ ವೇದ ಪರಂಪರೆಯಲ್ಲಿ ಧ್ಯಾನದ ಉಲ್ಲೇಖ ಸಿಗುತ್ತದೆ. ಅಲ್ಲಿ ಇದನ್ನು ಆತ್ಮಜ್ಞಾನ ಮತ್ತು ಪರಮಾತ್ಮನೊಂದಿಗೆ ಸಂಪರ್ಕ ಸಾಧಿಸುವ ಮಾರ್ಗವೆಂದು ವಿವರಿಸಲಾಗಿದೆ ಎಂದರು.

ಡಿ. 21ರಂದು ಸಂಜೆ 5ರಿಂದ 7ರ ವರೆಗೆ ಪ್ರಾಯೋಗಿಕವಾಗಿ ವಿಶ್ವ ಧ್ಯಾನ ದಿನವನ್ನು ಆಚರಿಸುತ್ತಿದ್ದೇವೆ. ಉದ್ಘಾಟನೆಯ ಕಾರ್ಯಕ್ರಮ ನಂತರ ಎಲ್ಲರಿಗೂ 45 ನಿಮಿಷಗಳವರೆಗೆ ಮನಸ್ಸು, ಬುದ್ಧಿಯನ್ನು ಏಕಾಗ್ರಗೊಳಿಸುವ, ಆಳವಾದ ಶಾಂತಿಯ ಅನುಭವ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಉದ್ಘಾಟಿಸುವರು. ಡಾ. ಸತೀಶ್ ಹೊಂಬಾಳಿ, ಡಾ. ಜಯಕುಮಾರ ಬ್ಯಾಳಿ, ಶರಣಬಸಪ್ಪ ಗುಡಿಮನಿ, ಲೋಕೇಶ್ ಜಿ.ಎಸ್. ಸೇರಿ ಹಲವರು ಪಾಲ್ಗೊಳ್ಳುವರು ಎಂದರು.

ಸುದ್ದಿಗೋಷ್ಠಿಯಲ್ಲಿ ಬಿ.ಕೆ. ರೇಖಾ, ಬಿ.ಕೆ. ಜೋಸ್ನಾ ಹಾಗೂ ಆಕಾಶ್ ಬುಗುಡೆ ಮುಂತಾದವರು ಇದ್ದರು.