ಸಿರುಗುಪ್ಪ: ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಸರ್ಕಾರಿ ಮಾದರಿ ಕಿರಿಯ ಪ್ರಾಥಮಿಕ (ಬೋಯಕೇರಿ) ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿಯೂಟ ತಯಾರಿಸಲು ಹುಳು ಬಿದ್ದ ತೊಗರಿ ಬೇಳೆಯನ್ನು ಬಳಸುತ್ತಿದ್ದಾರೆ. ಇದನ್ನು ಖಂಡಿಸಿ ಇಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಪಾಲಕರು ಶಿಕ್ಷಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಈ ಶಾಲೆಯಲ್ಲಿ ಒಂದರಿಂದ ಐದನೇ ತರಗತಿಯವರೆಗೆ ಒಟ್ಟು 138 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳಿಗೆ ಬಿಸಿಯೂಟ ತಯಾರಿಸಲು ಬೇಕಾದ ತೊಗರಿ ಬೇಳೆಯು ಯಾವುದೇ ರೀತಿಯಲ್ಲಿ ಬಳಕೆ ಮಾಡಲು ಯೋಗ್ಯವಾಗಿಲ್ಲ. ಆದರೂ ಇಲ್ಲಿ ಕಾರ್ಯ ನಿರ್ವಹಿಸುವ ಮುಖ್ಯ ಶಿಕ್ಷಕ ದುರ್ಗಪ್ಪ ತಿನ್ನಲು ಯೋಗ್ಯವಲ್ಲದ ತೊಗರಿ ಬೇಳೆಯಿಂದ ಸಾಂಬಾರು ತಯಾರಿಸುವಂತೆ ಬಿಸಿಯೂಟ ತಯಾರಕರಿಗೆ ತಿಳಿಸಿದ್ದರಿಂದ, ಅನಿವಾರ್ಯವಾಗಿ ಹುಳು ಬಿದ್ದ ತೊಗರಿ ಬೇಳೆಯನ್ನು ಬಳಸಿ ಸಾಂಬಾರು ಮಾಡಿ ಮಕ್ಕಳಿಗೆ ಉಣಬಡಿಸುತ್ತಿರುವುದು ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ.

ನೂರಾರು ಜನ ಪಾಲಕರು ಶಾಲೆಯ ಆವರಣದಲ್ಲಿ ಮುಖ್ಯ ಗುರು ದುರ್ಗಪ್ಪ ಅವರನ್ನು ಗುರುವಾರ ತರಾಟೆಗೆ ತೆಗೆದುಕೊಂಡರು.

ಬುಧವಾರ ಬಿಸಿಯೂಟದಲ್ಲಿ ಹುಳು ಬಂದಿರುವುದನ್ನು ಗಮನಿಸಿದ ವಿದ್ಯಾರ್ಥಿಗಳು ಈ ವಿಷಯವನ್ನು ಶಿಕ್ಷಕರಿಗೆ ಮತ್ತು ತಮ್ಮ ಪಾಲಕರಿಗೆ ತಿಳಿಸಿದ್ದಾರೆ. ಮುಖ್ಯ ಗುರುಗಳ ನಿರ್ಲಕ್ಷದಿಂದ ವಿದ್ಯಾರ್ಥಿಗಳು ತಿನ್ನುವ ಆಹಾರದಲ್ಲಿ ಹುಳು ಬೀಳಲು ಕಾರಣವಾಗಿದೆ ಎಂದು ದೂರಿದರು.

ವಿಷಯ ತಿಳಿದ ಅಕ್ಷರ ದಾಸೋಹ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕ ಜಾಫರ್ ಷರೀಫ ಶಾಲೆಗೆ ಗುರುವಾರ ಭೇಟಿ ನೀಡಿ ವಿದ್ಯಾರ್ಥಿಗಳು ಪೋಷಕರ ಅಹವಾಲನ್ನು ಕೇಳಿದರು. ಮುಖ್ಯಗುರು ಕಾರ್ಯ ವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಮಕ್ಕಳ ಆರೋಗ್ಯದ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಯ ಸಹಿಸಲಾಗುವುದಿಲ್ಲ. ಇಂತಹ ಘಟನೆ ಮರುಕಳಿಸಿದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.

ಶಾಲೆಯಲ್ಲಿರುವ ಧಾನ್ಯ ಮತ್ತು ಹಾಲಿನ ಪೌಡರ್, ಎಣ್ಣೆ ಪಾಕೆಟ್ ಗಳ ಬಗ್ಗೆ ಪರಿಶೀಲನೆ ನಡೆಸಿ, ಮುಂದೆ ಇಂತಹ ಘಟನೆ ನಡೆದರೆ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.


ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದೇನೆ. ಬಿಸಿಯೂಟ ಇಲಾಖೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಲಾಗುವುದು. ವರದಿ ಪಡೆದು ತಪ್ಪಿತಸ್ಥರು ಎಂದು ಕಂಡುಬಂದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಬಿಇಓ ಗುರಪ್ಪ ತಿಳಿಸಿದ್ದಾರೆ.