ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಬಿ.ಆರ್. ನಾಗರತ್ನ ಅವರು ರಚಿಸಿರುವ ''ಸಾಧ್ಯಸಿದ್ಧಿ'' ಕೃತಿಯು ಕಲಾವಿದೆ ಜಮುನಾರಾಣಿ ವಿ. ಮಿರ್ಲೆ ಅವರ ಯಶೋಗಾಥೆ ಕುರಿತದ್ದಾಗಿದೆ.ಗೆಜ್ಜೆ ಕಟ್ಟಿ ನರ್ತಿಸುವಾಗ ನೃತ್ಯಗಾರ್ತಿ, ಕುಂಚ ಹಿಡಿದು ಚಿತ್ರಿಸುವ ಕಲಾವಿದೆ, ಪಂಚಾಂಗ ಹಿಡಿದು ಗ್ರಹಗತಿಗಳ ಬಗ್ಗೆ ಲೆಕ್ಕಾಚಾರ ಮಾಡುವಾಗ ಜ್ಯೋತಿಷಿ, ತಂಬೂರು ಹಿಡಿದು ಆಲಾಪನೆ ಮಾಡುವಾಗ ಗಾಯಕಿ, ಇದಲ್ಲದೇ ಸಾಹಿತ್ಯ, ಯೋಗ, ಪರಿಸರ, ಸಮಾಜ ಸೇವೆ- ಹೀಗೆ ವಿವಿಧ ಕ್ಷೇತ್ರಗಳಲ್ಲಿ ಜಮುನಾರಾಣಿ ಅವರು ಮಾಡಿರುವ ಸಾಧನೆಯನ್ನು ಇಲ್ಲಿ ದಾಖಲಿಸಿದ್ದು, ಈ ಕೃತಿಯು ಅವರ ಬಹುಮುಖ ವ್ಯಕ್ತಿತ್ವವನ್ನು ಅನಾವರಣ ಮಾಡುತ್ತದೆ.ಜಮುನಾರಾಣಿ ಅವರ ಬಾಲ್ಯ, ವಿದ್ಯಾಭ್ಯಾಸ ಮತ್ತು ಕುಟುಂಬ, ರಂಗೋಲಿ- ಚಿತ್ರಕಲೆ- ಸಾಹಿತ್ಯ, ಜ್ಯೋತಿಷ್ಯ, ಸಮಾಜಮುಖಿ ಕಾರ್ಯಗಳು, ಪರಿಸರ- ಪಕ್ಷಿ, ಪ್ರಾಣಿಗಳ ಮೇಲಿನ ಒಲವುವನ್ನು ಇಲ್ಲಿ ವಿವರಿಸಲಾಗಿದೆ.ಯಾವುದೇ ಕ್ಷೇತ್ರವಿರಲಿ ಸತತ ಪರಿಶ್ರಮದಿಂದ ಪ್ರಗತಿಪಥದಲ್ಲಿ ಸಾಗಬಹುದು ಎಂಬುದಕ್ಕೆ ಜಮುನಾರಾಣಿ ಮಿರ್ಲೆ ಅವರು ನಿದರ್ಶನ. ಅವರು ವಿದ್ಯಾರ್ಥಿ ದೆಸೆಯಿಂದಲೂ ಒಂದಲ್ಲ ಒಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಎಲ್ಲಾ ಸವಾಲುಗಳನ್ನು ಎದುರಿಸಿ, ಕೌಟುಂಬಿಕ ಜವಾಬ್ದಾರಿಗಳನ್ನು ಕೂಡ ಸಮರ್ಥವಾಗಿ ನಿರ್ವಹಿಸಿ, ಹಂತ ಹಂತವಾಗಿ ಮೇಲೆ ಬಂದವರು. ಇಂತಹ ಸಾಧಕಿಯ ಸಿದ್ಧಿಸಾಧನೆಗಳನ್ನು ಅವರಿಂದಲೇ ಕೇಳಿತಿಳಿದ ನಾಗರತ್ನ ಅವರು ತಮ್ಮದೇ ಆದ ಶೈಲಿಯಲ್ಲಿ ನಿರೂಪಿಸಿ, ಓದುಗರ ಮುಂದಿಟ್ಟಿದ್ದಾರೆ. ಕೊನೆಯಲ್ಲಿ ಅಪರೂಪದ ಕಪ್ಪು- ಬಿಳುಪು ಚಿತ್ರಗಳ ಸಂಪುಟ ಇದೆ.ಮೈಸೂರು ಆರ್ಟ್ ಗ್ಯಾಲರಿಯ ಕಾರ್ಯದರ್ಶಿಯಾಗಿರುವ ಜಮುನಾರಾಣಿ ಅವರು ಸದಾ ಪಾದರಸದಂತೆ ಚುರುಕು. ಗುರುಗಳೂ ಆದ ಗ್ಯಾಲರಿಯ ಅಧ್ಯಕ್ಷ ಎಲ್. ಶಿವಲಿಂಗಪ್ಪಅವರ ಜೊತೆ ಸೇರಿ ಕಲಾಕೃತಿಗಳ ಪ್ರದರ್ಶನ, ಸಾಧಕರೊಂದಿಗೆ ಸಂವಾದ ನಡೆಸುತ್ತಾರೆ. ಅಲ್ಲದೇ ಸದಾ ಹತ್ತು ಹಲವು ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಭಾರತೀ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದ್ದು, ಹಿರಿಯ ಶಿಲ್ಪ ಕಲಾವಿದ ಎಲ್. ಶಿವಲಿಂಗಪ್ಪ ಅವರ ಮುನ್ನುಡಿ, ಚುಕ್ಕಿಚಿತ್ರ ಕಲಾವಿದ ಮೋಹನ್ ವರ್ಣೇಕರ್ ಅವರ ಬೆನ್ನುಡಿ ಇದೆ. ಆಸಕ್ತರು ಪ್ರಕಾಶಕ ಬಿ.ಎನ್. ಶ್ರೀನಿವಾಸ, ಮೊ.94484 13188, ಜಮುನಾರಾಣಿ ವಿ. ಮಿರ್ಲೆ, ಮೊ. 94481 30067 ಸಂಪರ್ಕಿಸಬಹುದು.