ಸಾರಾಂಶ
ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮೆರವಣಿಗೆ, ಮೂರ್ತಿ ವಿಸರ್ಜನಾ ಸ್ಥಳಗಳಾದ ಕೆರೆ, ಬಾವಿಗಳ ಹತ್ತಿರ ಆಯಾ ಠಾಣಾ ವ್ಯಾಪ್ತಿಯಿಂದ ಅಗತ್ಯ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
ಹುಬ್ಬಳ್ಳಿ:
ಹು-ಧಾ ಮಹಾನಗರದ ಹಲವೆಡೆ ಕಳೆದ 7 ದಿನಗಳ ಹಿಂದೆ ಪ್ರತಿಷ್ಠಾಪಿಸಲಾಗಿದ್ದ 298 ಸಾರ್ವಜನಿಕ ಹಾಗೂ ಮನೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ನೂರಾರು ಗಣೇಶ ಮೂರ್ತಿಗಳನ್ನು ಶುಕ್ರವಾರ ರಾತ್ರಿ ಅದ್ಧೂರಿ ಮೆರವಣಿಗೆಯ ಮೂಲಕ ವಿಸರ್ಜನೆ ಮಾಡಲಾಯಿತು.ಇಲ್ಲಿನ ವಿದ್ಯಾನಗರ, ಕೇಶ್ವಾಪುರ, ಗೋಕುಲ ರಸ್ತೆ, ಹಳೇ ಹುಬ್ಬಳ್ಳಿ, ಸಂತೋಷ ನಗರ, ಸಿಬಿಟಿ, ಧಾರವಾಡ ನಗರದ ಹಲವೆಡೆ ಪ್ರತಿಷ್ಠಾಪಿಸಲಾಗಿದ್ದ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಯಿತು. ಧಾರವಾಡ ನಗರದಲ್ಲಿ 100, ಹುಬ್ಬಳ್ಳಿ ನಗರದಲ್ಲಿ 198 ಹಾಗೂ ಮನೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಕೆಲವು ಗಣೇಶ ಮೂರ್ತಿಗಳನ್ನು ಶುಕ್ರವಾರ ರಾತ್ರಿ ವಿಸರ್ಜಿಸಲಾಯಿತು.
ನಗರದ ಇಂದಿರಾ ಗಾಜಿನ ಮನೆ ಹತ್ತಿರದಲ್ಲಿ ಹು-ಧಾ ಮಹಾನಗರ ಪಾಲಿಕೆಯಿಂದ ನಿರ್ಮಿಸಲಾಗಿರುವ ಬಾವಿ, ಹೊಸೂರಿನ ಬಾವಿ, ಉಣಕಲ್ಲ ಕೆರೆ, ಸಂತೋಷ ನಗರ ಕೆರೆ ಸೇರಿದಂತೆ ಅನೇಕ ಕಡೆಗಳಲ್ಲಿ ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯ ನಡೆಯಿತು. ಸಾರ್ವಜನಿಕ ಮೂರ್ತಿಗಳ ವಿಸರ್ಜನಾ ಪೂರ್ವದಲ್ಲಿ ಮಂಡಳಿಗಳು ಅದ್ಧೂರಿಯಾಗಿ ಮೆರವಣಿಗೆ ನಡೆಸಿದರು. ಮೆರವಣಿಗೆಯುದ್ದಕ್ಕೂ ಡಿಜೆ ಹಚ್ಚಿ ಕುಣಿದು ಕುಪ್ಪಳಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ದಾರಿಯುದ್ದಕ್ಕೂ ಮಕ್ಕಳು, ಯುವಕರು, ವೃದ್ಧರಾದಿಯಾಗಿ ಬಗೆಬಗೆಯ ಪಟಾಕಿ ಸಿಡಿಸಿ ಸಂಭ್ರಮಿಸಿದರು.ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮೆರವಣಿಗೆ, ಮೂರ್ತಿ ವಿಸರ್ಜನಾ ಸ್ಥಳಗಳಾದ ಕೆರೆ, ಬಾವಿಗಳ ಹತ್ತಿರ ಆಯಾ ಠಾಣಾ ವ್ಯಾಪ್ತಿಯಿಂದ ಅಗತ್ಯ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಮಧ್ಯರಾತ್ರಿಯ ವರೆಗೂ ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯ ಅದ್ಧೂರಿಯಾಗಿ ನೆರವೇರಿತು.