ಯಲ್ಲಾಪುರ: ಇಂದಿನ ಆಹಾರ ಪದ್ಧತಿ ಮತ್ತು ವಾತಾವರಣದಲ್ಲಿ ಉಂಟಾಗಿರುವ ಬದಲಾವಣೆಗಳಿಂದಾಗಿ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಅದಕ್ಕೆ ಯೋಗವೊಂದೇ ಪರಿಹಾರ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಪಟ್ಟಣದ ಈಶ್ವರೀಯ ವಿಶ್ವವಿದ್ಯಾಲಯದ ತಪೋವನದಲ್ಲಿ ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಶನ್, ಉತ್ತರ ಕನ್ನಡ ಜಿಲ್ಲಾ ಯೋಗ ಫೆಡರೇಶನ್ ಹಾಗೂ ಯಲ್ಲಾಪುರ ತಾಲೂಕು ಯೋಗ ಸ್ಪೋರ್ಟ್ಸ್ ಅಸೋಸಿಯೇಶನ್‌ಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಡೆದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಎಲ್ಲ ಮಕ್ಕಳಿಗೂ ಕಡ್ಡಾಯವಾಗಿ ಯೋಗ ಶಿಕ್ಷಣ ಜಾರಿಗೆ ಬರುವಂತಾಗಬೇಕು. ಹಿಂದೆ ಬದುಕುವ ಜೀವನ ಶೈಲಿ, ಆಹಾರ ಪದ್ಧತಿ ಎಲ್ಲವೂ ಆರೋಗ್ಯಪೂರ್ಣವಾಗಿಯೇ ಇತ್ತು. ರಾಸಾಯನಿಕದ ಆಹಾರ ಬೆಳೆಗಳಿಂದ ಇಂದಿನ ಸ್ಥಿತಿಗೆ ಕಾರಣವಾಗಿದೆ ಎಂದು ಹೇಳಿದರು.ಹತ್ತು ಹಲವು ಕಾರಣಗಳಿಂದಾಗಿ ನಾವು ಆರೋಗ್ಯಕ್ಕೆ ಮಹತ್ವ ನೀಡುವ ಸ್ಥಿತಿಗೆ ಬಂದು ತಲುಪಿದ್ದೇವೆ. ಈ ಎಲ್ಲ ಸಮಸ್ಯೆಗಳಿಗೆ ಯೋಗವೊಂದೇ ಪರಿಹಾರ. ಯೋಗ ಜೀವನದ ಒಂದು ಭಾಗವಾಗಬೇಕು. ಶಾಲೆಗಳಲ್ಲಿಯೂ ಯೋಗ ಅಭ್ಯಾಸದ ಒಂದು ಭಾಗವಾಗಿಸಿದರೆ ಅದು ಅವರ ಭವಿಷ್ಯತ್ತಿಗೆ ಸಹಕಾರಿಯಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಡಾ. ಪಿ.ಎನ್. ಗಣೇಶಕುಮಾರ್ ಮಾತನಾಡಿ, ಯೋಗಾಸನಕ್ಕೆ ಇಂದು ಕ್ರೀಡೆಯ ಸ್ಥಾನ ದೊರೆತಿದೆ. ಅಷ್ಟಾಂಗ ಯೋಗವನ್ನು ಪತಂಜಲಿ ಮಹರ್ಷಿಗಳು ನೀಡಿದ್ದಾರೆ. ನಮ್ಮ ಮಕ್ಕಳು ಕ್ರೀಡೆಯ ಜತೆಗೆ ಯೋಗಕ್ಕೂ ಮಹತ್ವ ನೀಡಿ, ಉತ್ತಮ ಜೀವನ ರೂಪಿಸಿಕೊಳ್ಳಬೇಕು. ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾದ ಮಕ್ಕಳಿಗೆ ನಮ್ಮ ಸಂಸ್ಥೆಯಿಂದ ಶೇ. ೫೦ರಷ್ಟು ಸಹಾಯಧನ ನೀಡಲಾಗುತ್ತದೆ ಎಂದರು.ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಜಗತ್ತಿಗೇ ವಿಶ್ವಗುರು ಸ್ಥಾನ ಬರುವುದಕ್ಕೆ ಯೋಗವೂ ಒಂದು ಕಾರಣ. ನಮ್ಮ ಋಷಿಮುನಿಗಳು ನೀಡಿದ ನಾಲ್ಕು ವೇದಗಳ ನಂತರ ಯೋಗ ಮತ್ತು ಆಯುರ್ವೇದವನ್ನು ಪಂಚಮ ವೇದ ಎನ್ನಲಾಗುತ್ತಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಂದ ಸ್ಪರ್ಧಾಳುಗಳು ಆಗಮಿಸಿರುವುದು ಸಂತಸ ತಂದಿದೆ ಎಂದರು.
ಯಲ್ಲಾಪುರ ಈಶ್ವರೀಯ ವಿಶ್ವವಿದ್ಯಾಲಯದ ಉಸ್ತುವಾರಿಗಳಾದ ಬಿ.ಕೆ. ಲೀಲಕ್ಕ ಮಾತನಾಡಿ, ವಿಶ್ವದೆಲ್ಲೆಡೆ ೧೦ ಸಾವಿರ ಇಂತಹ ಆಧ್ಯಾತ್ಮ ಕೇಂದ್ರಗಳು ನಡೆಯುತ್ತಿದೆ. ನಮ್ಮ ರಾಮರಾಜ್ಯದ ಕನಸು ನನಸಾಗಬೇಕಾದರೆ ಪ್ರತಿಯೊಬ್ಬರೂ ಯೋಗ ಸಾಧಕರಾಗಿ, ಆರೋಗ್ಯವಂತರಾಗಬೇಕು. ಯೋಗ, ಧ್ಯಾನ ಇವು ಪರಮಾತ್ಮನೆಡೆಗೆ ಸಾಗುವ ಸನ್ಮಾರ್ಗದ ದಾರಿಯಾಗಿದೆ ಎಂದರು.
ರಾಜ್ಯ ಅಮೆಚೂರ್ ಯೋಗ ಅಸೋಸಿಯೇಶನ್ ಚೆರ್‌ಮನ್ ಜಿ.ಎನ್. ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಕೆ. ನಟರಾಜ, ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ, ಹಿರಿಯ ಸಹಕಾರಿ ಉಮೇಶ ಭಾಗ್ವತ ಕಳಚೆ, ಅಡಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ರವಿ ಹೆಗಡೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಆರ್. ಭಟ್ಟ, ಮಾತೃಮಂಡಳಿ ನಗರಭಾಗಿ ಅಧ್ಯಕ್ಷೆ ಆಶಾ ಬಗನಗದ್ದೆ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂಜೀವಕುಮಾರ ಹೊಸ್ಕೇರಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಯೋಗಗೀತೆ ಪ್ರಸ್ತುತಪಡಿಸಿದರು. ಶಿಕ್ಷಕಿ ರೇಖಾ ಭಟ್ಟ ಪ್ರಾರ್ಥಿಸಿದರು. ಯೋಗ ಫೆಡರೇಶನ್ ಜಿಲ್ಲಾಧ್ಯಕ್ಷ ಅನಿಲ ಕರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವಾಗತ ಸಮಿತಿಯ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ ಸ್ವಾಗತಿಸಿದರು. ಶಿಕ್ಷಕರಾದ ಸಣ್ಣಪ್ಪ ಭಾಗ್ವತ್, ಶ್ರೀಧರ ಭಟ್ಟ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಾಧ್ಯಕ್ಷ ಶಂಕರ ಭಟ್ಟ ತಾರಿಮಕ್ಕಿ ವಂದಿಸಿದರು.