ಯೋಗ ಔಷಧಿ ರಹಿತ ಚಿಕಿತ್ಸೆ: ಡಾ. ವೀರೇಂದ್ರ ಹೆಗ್ಗಡೆ

| Published : Jun 22 2024, 12:51 AM IST / Updated: Jun 22 2024, 12:52 AM IST

ಸಾರಾಂಶ

ಮೈಸೂರಿನ ಕುಮಾರಿ ಖುಷಿ ಯೋಗ ಪ್ರಚಾರದಲ್ಲಿ ಮಾಡಿದ ಸಾಧನೆಗೆ ಅಭಿನಂದಿಸಿದ ಹೆಗ್ಗಡೆ, ಯೋಗ ರತ್ನ ಪುರಸ್ಕಾರ ನೀಡಿ ಗೌರವಿಸಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ ಯೋಗ ನಮ್ಮ ಜೀವನದ ಒಂದು ಭಾಗವಾಗುವಂತೆ ನೋಡಿಕೊಳ್ಳಬೇಕು. ಯೋಗಾಸನಗಳನ್ನು ಮಾಡಲು ಯಾವುದೇ ವಯಸ್ಸಿನ ಮಿತಿಯಿಲ್ಲ ಎಂದು ಶ್ರಿ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಅವರು ಶುಕ್ರವಾರ ಧರ್ಮಸ್ಥಳದ ಅಮೃತ ಮಹೋತ್ಸವದಲ್ಲಿ ಎಸ್. ಡಿ.ಎಂ. ನ್ಯಾಚುರೋಪತಿ ಹಾಗೂ ಯೋಗ ವಿಜ್ಞಾನಗಳ ಮಹಾವಿದ್ಯಾಲಯದ ವತಿಯಿಂದ ನಡೆದ 10ನೇ ವರ್ಷದ ಯೋಗ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯೋಗವನ್ನು ನಾವೇ ನಮ್ಮಲ್ಲಿ ಅಳವಡಿಸಿಕೊಳ್ಳಬೇಕು. ಇದು ಔಷಧಿ ರಹಿತ ಚಿಕಿತ್ಸೆ. ವಿದೇಶಗಳಿಗೆ ಯೋಗವನ್ನು ಪಸರಿಸಿದ ಕೀರ್ತಿ ಭಾರತೀಯರಿಗಿದೆ. ವಿಶ್ವಮಟ್ಟದಲ್ಲಿ ಇನ್ನಷ್ಟು ಬೆಳಗಬೇಕು. ನಾವು ಬೇರೆ ದೇಶಗಳಿಂದ ಔಷಧಿಯನ್ನು ತರಿಸುತ್ತೇವೆ. ನಾವು ನಮ್ಮ ದೇಶದಿಂದ ರಪ್ತು ಮಾಡುವುದು ಔಷಧಿ ರಹಿತ ಚಿಕಿತ್ಸೆ ಎಂದರೆ ಅದು ಯೋಗ ಎಂದು ಹೆಗ್ಗಡೆ ಹೇಳಿದರು.

ಧರ್ಮಸ್ಥಳದ ಶಾಂತಿವನ ಟ್ರಸ್ಟ್ ನೇತೃತ್ವದಲ್ಲಿ ಧರ್ಮಸ್ಥಳ, ಮಣಿಪಾಲದ ಬಳಿ ಪರೀಕಾ ಮತ್ತು ಬೆಂಗಳೂರಿನ ನೆಲಮಂಗಲದಲ್ಲಿ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಪ್ರಾರಂಭಿಸಿ ಆರೋಗ್ಯಭಾಗ್ಯ ರಕ್ಷಣೆಗೆ ಪ್ರೋತ್ಸಾಹ, ಪ್ರೇರಣೆ ಮತ್ತು ಮಾರ್ಗದರ್ಶನ ನೀಡಲಾಗುತ್ತದೆ ಎಂದರು.

ಮೈಸೂರಿನ ಕುಮಾರಿ ಖುಷಿ ಯೋಗ ಪ್ರಚಾರದಲ್ಲಿ ಮಾಡಿದ ಸಾಧನೆಗೆ ಅಭಿನಂದಿಸಿದ ಹೆಗ್ಗಡೆ, ಯೋಗ ರತ್ನ ಪುರಸ್ಕಾರ ನೀಡಿ ಗೌರವಿಸಿದರು. ಬೆಂಗಳೂರಿನ ಪರಿಮಳ ಆರೋಗ್ಯ ಸೇವಾಕೇಂದ್ರದ ಡಾ. ಜೋಸ್ ಎಬ್‌ನಜೀರ್‌ ಮಾತನಾಡಿ, ಯೋಗ ಭಾರತೀಯ ಸಂಸ್ಕೃತಿ, ಪತಾಂಜಲಿ ಅವರು ಇದನ್ನು ಬೆಳೆಸಿದವರು, ಇಂದು ವಿಶ್ವದಲ್ಲಿ ಯೋಗ ದಿನಾಚರಣೆ ಆಚರಿಸಲು ಕಾರಣರಾದ ಪ್ರಧಾನಿ ಮೋದಿಯವರಿಗೆ ಧನ್ಯವಾದ ಸಲ್ಲಿಸಬೇಕು. ವಿದ್ಯಾರ್ಥಿಗಳು ಯೋಗ ಕಲಿತರೆ ಯೋಗ ಹೆಮ್ಮರವಾಗಿ ಬೆಳೆಯುತ್ತದೆ ಎಂದು ಅಭಿಪ್ರಾಯಪಟ್ಟರು.

ತುಮಕೂರಿನ ಸಿದ್ದಾರ್ಥ ಉನ್ನತ ಶಿಕ್ಷಣ ಅಕಾಡೆಮಿ ಉಪಕುಲಪತಿ ಡಾ. ಕೆ.ಬಿ. ಲಿಂಗೇಗೌಡ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮ೯ದ ಜೊತೆ ಯೋಗಕ್ಕೂ ಆದ್ಯತೆ ನೀಡಿರುವುದು ಪ್ರಶಂಸನೀಯ, ಧರ್ಮಸ್ಥಳದಿಂದ ಮಂಜುನಾಥ ದೇವಸ್ಥಾನ ಸೌದಿ ಅರೇಬಿಯಾದಲ್ಲಿ ಆಗಲಿ ಎಂದು ಆಶಿಸಿದರು.

ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಅವರು ಮನುಷ್ಯನ ಬದುಕಿಗೆ ಧೈರ್ಯ, ಶಕ್ತಿಯನ್ನು ನೀಡುವ ಸಾಮರ್ಥ ಭಾರತಕ್ಕಿದೆ. ನಮ್ಮತನವನ್ನು ನಾವು ನಮ್ಮೊಳಗೇ ಕಂಡುಕೊಳ್ಳಬೇಕಾಗಿದೆ. ಡಾ. ಹೆಗ್ಗಡೆಯವರು ಹಲವಾರು ವರ್ಷಗಳ ಹಿಂದೆಯೇ ಯೋಗ ಪ್ರಸಾರಕ್ಕಾಗಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗವಿಜ್ಞಾನದ ಕಾಲೇಜನ್ನು ತೆರೆದ ಪರಿಣಾಮ ಇಂದು ಇಲ್ಲಿನ ವಿದ್ಯಾರ್ಥೀಗಳು ಯೋಗವನ್ನು ದೇಶವಿದೇಶಗಳಲ್ಲಿ ಪಸರಿಸುತ್ತಿದ್ದಾರೆ ಎಂದರು.

ಮೈಸೂರಿನ ಕುಮಾರಿ ಖುಷಿ ಎಚ್. ಯೋಗ ಪ್ರಾತ್ಯಕ್ಷಿಕೆ ನೀಡಿದರು. ಯೋಗ ಸಾಧಕರಾದ ಅಶ್ವತ್ ಹೆಗಡೆ ಮತ್ತು ಡಾ. ಅಚ್ಯುತ ಈಶ್ವರನ್ ಅವರನ್ನು ಗೌರವಿಸಲಾಯಿತು.

ಕೆನರಾ ಬ್ಯಾಂಕ್‌ನ ಮಹಾಪ್ರಬಂಧಕ ಸುಧಾಕರ ಕೊಟ್ಟಾರಿ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ.ಎಸ್. ಸತೀಶ್ಚಂದ್ರ, ಡಾ. ಶಶಿಕಾಂತ್ ಜೈನ್ ಮತ್ತು ಡಾ. ಸುಜಾತ ಉಪಸ್ಥಿತರಿದ್ದರು.

ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು. ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶಿವಪ್ರಸಾದ್ ಶೆಟ್ಟಿ ವಂದಿಸಿದರು. ಅನನ್ಯಾ ಜೈನ್ ಮತ್ತು ಡಾ. ಕೃತಿಕಾ ರಾಮಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು.