ಯೋಗಿ ನಾರೇಯಣ ಯತೀಂದ್ರರ ತತ್ವಗಳು ದೇಶದ ಪ್ರಗತಿಗೆ ಪೂರಕ: ಕೆ.ಎಸ್‌. ಸಿದ್ದಲಿಂಗಪ್ಪ

| Published : Mar 26 2024, 01:08 AM IST

ಯೋಗಿ ನಾರೇಯಣ ಯತೀಂದ್ರರ ತತ್ವಗಳು ದೇಶದ ಪ್ರಗತಿಗೆ ಪೂರಕ: ಕೆ.ಎಸ್‌. ಸಿದ್ದಲಿಂಗಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಮುಂದೆ ಸಾಧಕರಾಗಿ ಕಂಡು ಬರುವ ಅನೇಕರು ಬಡತನದಲ್ಲಿಯೇ ಹುಟ್ಟಿ, ಅನೇಕ ನೋವು, ನಲಿವುಗಳನ್ನು ಉಂಡು ಬೆಳೆದು, ಅದರಿಂದ ಹೊರಬರಲು ಸಾಧನೆಯ ಹಾದಿ ಹಿಡಿದವರಾಗಿದ್ದು, ಅಂತಹವರಲ್ಲಿ ನಾರಾಯಣ ಯತೀಂದ್ರರು ಒಬ್ಬರು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ನಮ್ಮ ಮುಂದೆ ಸಾಧಕರಾಗಿ ಕಂಡು ಬರುವ ಅನೇಕರು ಬಡತನದಲ್ಲಿಯೇ ಹುಟ್ಟಿ, ಅನೇಕ ನೋವು, ನಲಿವುಗಳನ್ನು ಉಂಡು ಬೆಳೆದು, ಅದರಿಂದ ಹೊರಬರಲು ಸಾಧನೆಯ ಹಾದಿ ಹಿಡಿದವರಾಗಿದ್ದು, ಅಂತಹವರಲ್ಲಿ ನಾರಾಯಣ ಯತೀಂದ್ರರು ಒಬ್ಬರು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ತಿಳಿಸಿದ್ದಾರೆ.

ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತುಮಕೂರು ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕಸಾಪ ಜಿಲ್ಲಾ ಬಲಿಜ ಸಂಘ, ಅಮರನಾರಾಯಣ ಪತ್ತಿನ ಸಹಕಾರ ಸಂಘ, ಶ್ರೀಯೋಗಿ ನಾರಾಯಣ ಮಹಿಳಾ ಮತ್ತು ಯುವ ವಿಭಾಗದ ವತಿಯಿಂದ ಹಮ್ಮಿಕಂಡಿದ್ದ ಶ್ರೀಯೋಗಿ ನಾರೇಯಣ ಯತೀಂದ್ರರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಾವು ಅನುಭವಿಸಿದ ನೋವುಗಳಿಗೆ ಪರಿಹಾರ ಹುಡುಕುತ್ತಾ ದಾರ್ಶಾನಿಕರಾಗಿ, ಸಮಾಜ ಸುಧಾರಕರಾಗಿ ಬದಲಾಗಿ, ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.

ಶ್ರೀಯೋಗಿ ನಾರೇಯಣ ಯತೀಂದ್ರರು ಕೇವಲ ಬಲಿಜ ಸಮಾಜಕ್ಕಲ್ಲದೆ, ಇಡೀ ನಾಡಿಗೆ ಬೆಳಕು ನೀಡಿದವರು, ಅವರ ತತ್ವಗಳು, ಅವರ ಭವಿಷ್ಯವಾಣಿಗಳು ಇಡೀ ದೇಶದ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡಿವೆ. ಮುಂದೆ ನಡೆಯುವ ಘಟನೆಗಳನ್ನು ತಮ್ಮ ಅಪಾರ ಅನುಭವದ ಮೂಲಕ ಹೇಳುವ ಅತೀಂದ್ರೀಯ ಶಕ್ತಿಯನ್ನು ಶ್ರೀನಾರೇಯಣೆ ಯತೀಂದ್ರರು ಹೊಂದಿದ್ದರು. ಸಮಾಜದ ಅಂಕು ಡೊಂಕುಗಳಿಗೆ ಕೈಗನ್ನಡಿಯಾಗಿ ಅವರ ಬೋಧನೆಗಳಿವೆ ಎಂದು ಕೆ.ಎಸ್.ಸಿದ್ದಲಿಂಗಪ್ಪ ತಿಳಿಸಿದರು.

ಜಿಲ್ಲಾ ಬಲಿಜ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಮಾತನಾಡಿ, ನಾರೇಯಣ ಯತೀಂದ್ರರಂತಹ ವ್ಯಕ್ತಿಗಳು ಬಲಿಜ ಸಮಾಜದ ಕುಲಗುರುಗಳಾಗಿರುವುದು ನಮ್ಮೆಲ್ಲರ ಪುಣ್ಯ. ಕಳೆದ ವರ್ಷ ಶ್ರೀಯೋಗಿ ನಾರೇಯಣ ಯತೀಂದ್ರದ ಜನ್ಮ ಜಯಂತಿಯನ್ನು ಬಹಳ ಅದ್ಧೂರಿಯಾಗಿ ಆಚರಿಸಲಾಗಿತ್ತು. ಅದರೆ ಈ ಬಾರಿ ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ಜಿಲ್ಲಾಡಳಿತ ಸರಳವಾಗಿ ಆಚರಿಸುತ್ತಿದೆ. ಬಲಿಜ ಭವನದಲ್ಲಿ ಎಲ್ಲಾ ಧಾರ್ಮಿಕ ವಿಧಿ ವಿಧಾನದ ಮೂಲಕ ಯತೀಂದ್ರರ ಜಯಂತಿ ಆಚರಿಸಲಾಗಿದೆ. ಓಂ ನಮೋ ನಾರೇಯಣಾಯ ಎಂಬ ಬೀಜಾಕ್ಷರವನ್ನು ನಾಡಿಗೆ ನೀಡಿದ್ದು ಶ್ರೀನಾರೇಯಣ ಯತೀಂದ್ರರು. ನಮ್ಮ ಕುಲಗುರುಗಳ ಜನ್ಮ ದಿನವನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲು ಅನುಮೋದಿಸಿದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಬಲಿಜ ಸಂಘದ ಅಧ್ಯಕ್ಷ ಆರ್.ಸಿ.ಅಂಜನಪ್ಪ ಮಾತನಾಡಿ, ಶ್ರೀಯೋಗಿ ನಾರೇಯಣ ಯತೀಂದ್ರರು ಕಾಲಜ್ಞಾನಿಗಳು. ಅವರು ಕೊಟ್ಟ ಭವಿಷ್ಯ ಎಂದಿಗೂ ಸುಳ್ಳಾಗಿಲ್ಲ. ಇಂತಹ ಮಹಾನುಭಾವರ ಜಯಂತಿಯನ್ನು ಅದ್ಧೂರಿಗಿಂತ ಅರ್ಥಪೂರ್ಣವಾಗಿ ಆಚರಿಸುವುದು ಸೂಕ್ತ. ಈಗಾಗಲೇ ನಮ್ಮ ಅಮರ ನಾರಾಯಣ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಬಹಳ ಶಾಸ್ತ್ರೋಕ್ತವಾಗಿ ಶ್ರೀನಾರೇಯಣ ಯತೀಂದ್ರರ ಜಯಂತಿ ಆಚರಿಸಲಾಗಿದೆ. ಇದಕ್ಕೆ ಸಹಕರಿಸಿದ ಎಲ್ಲರಿ ಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ನಿವೃತ್ತ ಪ್ರಾಂಶುಪಾಲ ಎಚ್.ಬಿ.ಪ್ರಕಾಶ್ ಉಪನ್ಯಾಸ ನೀಡಿದರು. ಮುಖಂಡರಾದ ಜಯಣ್ಣ, ಎಚ್.ವಿ.ವಿವೇಕ್, ಗೀತಮ್ಮ, ಗಣೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸುರೇಶಕುಮಾರ್, ಬಿ.ಕೆ.ರಾಜೇಶ್, ಎಸ್.ಎನ್.ದರ್ಶನ್, ಬಿ.ಆರ್.ರಾಜೇಗೌಡ, ಎನ್.ರಮೇಶ್ ಮತ್ತಿತರರು ಉಪಸ್ಥಿತರಿದ್ದರು.