ಹೋಳಿ ಓಕುಳಿಗೆ ರಂಗೇರಿದ ಹುಬ್ಬಳ್ಳಿ

| Published : Mar 26 2024, 01:08 AM IST

ಸಾರಾಂಶ

ರಂಗುರಂಗಿನ ಹೋಳಿ ಹಬ್ಬಕ್ಕೆ ಹು-ಧಾ ಮಹಾನಗರದಲ್ಲಿ ಸಿದ್ಧರಾಗಿದ್ದು, ಸೋಮವಾರ ನೂರಾರು ಕಡೆಗಳಲ್ಲಿ ರತಿ-ಕಾಮಣ್ಣರ ಮೂರ್ತಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹೋಳಿಹಬ್ಬಕ್ಕೆ ಚಾಲನೆ ನೀಡಲಾಯಿತು.

ಹುಬ್ಬಳ್ಳಿ:

ರಂಗುರಂಗಿನ ಹೋಳಿ ಹಬ್ಬಕ್ಕೆ ಹು-ಧಾ ಮಹಾನಗರದಲ್ಲಿ ಸಿದ್ಧರಾಗಿದ್ದು, ಸೋಮವಾರ ನೂರಾರು ಕಡೆಗಳಲ್ಲಿ ರತಿ-ಕಾಮಣ್ಣರ ಮೂರ್ತಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹೋಳಿಹಬ್ಬಕ್ಕೆ ಚಾಲನೆ ನೀಡಲಾಯಿತು.ಒಟ್ಟು ಐದು ದಿನ ನಗರದ ವಿವಿಧೆಡೆ ಪ್ರತಿಷ್ಠಾಪಿಸುವ ರತಿ-ಮನ್ಮಥರ ಮೂರ್ತಿಗಳನ್ನು ಕೊನೆಯ ದಿನದಂದು ಅದ್ಧೂರಿ ಮೆರವಣಿಗೆ ನಡೆಸಿ ದಹನ ಮಾಡುವ ಮೂಲಕ ಎಲ್ಲರೂ ಸೇರಿ ಸಂಭ್ರಮದಿಂದ ಓಕುಳಿ ಆಟವಾಡಿ ಹಬ್ಬಕ್ಕೆ ವಿದಾಯ ಹೇಳುತ್ತಾರೆ. ನಗರದ ಮೇದಾರ ಓಣಿ, ಹೊಸ ಮೇದಾರ ಓಣಿ, ಕಮರಿಪೇಟೆ, ದಾಜಿಬಾನಪೇಟೆ, ಅಂಚಟಗೇರಿ ಓಣಿ, ಹಳೆ ಹುಬ್ಬಳ್ಳಿ, ದುರ್ಗದ ಬೈಲ್ ಸೇರಿದಂತೆ ವಿವಿಧ ಪ್ರಮುಖ ಸ್ಥಳಗಳಲ್ಲಿ ಸೋಮವಾರದಂದು ರತಿ-ಕಾಮಣ್ಣರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು. 75 ವರ್ಷಗಳಿಂದ ಆಚರಣೆ:ಇಲ್ಲಿನ ಹಳೇ ಮೇದಾರ ಓಣಿ ಹಾಗೂ ಹೊಸ ಮೇದಾರ ಓಣಿಯ ಕಾಮಣ್ಣಗಳು ಹೆಚ್ಚಿನ ಪ್ರಸಿದ್ಧಿ ಹೊಂದಿದೆ. ಕಳೆದ 75 ವರ್ಷಗಳಿಂದ ಇಲ್ಲಿನ ಹಳೇ ಮೇದಾರ ಓಣಿಯಲ್ಲಿ ಬಿದಿರಿನಿಂದ 22 ಅಡಿ ಎತ್ತರದ ಕಾಮಣ್ಣನನ್ನು ತಯಾರಿಸಿ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಹಾಗೆಯೇ ಹೊಸ ಮೇದಾರ ಓಣಿಯಲ್ಲಿಯೂ 18 ಅಡಿ ಎತ್ತರದ ಬೃಹತ್ ಕಾಮಣ್ಣ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ. ಈ ಎರಡೂ ಓಣಿಯ ಮೂರ್ತಿಗಳನ್ನು 5ನೇ ದಿನದಂದು ಅದ್ಧೂರಿ ಮೆರವಣಿಗೆ ನಡೆಸಿ ಇಲ್ಲಿನ ದುರ್ಗದ ಬೈಲ್‌ನಲ್ಲಿ ಸಮ್ಮಿಲನಗೊಳಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿತ್ತು. ಆದರೆ, ಕಳೆದ 35 ವರ್ಷಗಳಿಂದ ಈ ಪದ್ಧತಿ ನಿಲ್ಲಿಸಲಾಗಿದೆ. ಈಗ ಈ ವರ್ಷದಿಂದ ಮತ್ತೆ ಚಾಲನೆ ನೀಡಲಾಗುತ್ತಿದ್ದು, 5ನೇ ದಿನದಂದು ಅದ್ಧೂರಿ ಮೆರವಣಿಗೆ ನಡೆಸಿ ದುರ್ಗದಬೈಲಿನಲ್ಲಿ ಎರಡೂ ಮೂರ್ತಿಗಳನ್ನು ಸಮ್ಮಿಲನಗೊಳಿಸಿ ಪೂಜೆ ಸಲ್ಲಿಸುವುದಾಗಿ ಮುಖಂಡ ಸುಭಾಷ ಹುಬ್ಬಳ್ಳಿ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಕುಟುಂಬ ಸಮೇತನಾಗಿ ಕೂಡುವ ರತಿ-ಕಾಮ:ಇಲ್ಲಿನ ಅಂಚಟಗೇರಿ ಓಣಿಯಲ್ಲಿ ರತಿ-ಕಾಮಣ್ಣನ ಮೂರ್ತಿ ಅಷ್ಟೇ ಪ್ರತಿಷ್ಠಾಪಿಸದೇ ಶಿವ-ಪಾರ್ವತಿ, ಕಾಮಣ್ಣನ ಪುತ್ರರು, ಪುತ್ರಿಯರ ಮೂರ್ತಿಯನ್ನಿರಿಸಿ ಪೂಜೆ ಸಲ್ಲಿಸಲಾಗುತ್ತದೆ. ಈ ಪದ್ಧತಿ 135 ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಹು-ಧಾ ಮಹಾನಗರದಲ್ಲಿ ಎಲ್ಲಿಯೂ ಈ ರೀತಿ ವಿಶೇಷವಾಗಿ ಕುಟುಂಬ ಸಮೇತರಾಗಿ ರತಿ-ಕಾಮಣ್ಣರ ಮೂರ್ತಿ ಪ್ರತಿಷ್ಠಾಪಿಸುವುದಿಲ್ಲ. ಇಲ್ಲಿನ ವಿಶೇಷತೆಯೇ ಇದಾಗಿದೆ ಎಂದು ಶ್ರೀನಿವಾಸ ರತನ್‌ ತಿಳಿಸುತ್ತಾರೆ.ತಾಡಪತ್ರಿ ಓಣಿಯಲ್ಲಿ ಪ್ರತಿಷ್ಠಾಪಿಸಲಾಗುವ ಮೂರ್ತಿಗಳು 100 ವರ್ಷಕ್ಕೂ ಹಳೆಯದಾಗಿವೆ. ಅದೇ ರೀತಿ ಹಳೆ ಚನ್ನಪೇಟ, ಹಳೆ ದುರ್ಗದಬೈಲ್, ತಿಮ್ಮಸಾಗರ ಓಣಿ, ಅಂಗಡಿ ಗಲ್ಲಿಯಲ್ಲಿ ಹೋಳಿ ಹಬ್ಬದ ಅಂಗವಾಗಿ ವಿಶೇಷ ಜಗ್ಗಲಗಿ ಬಾರಿಸುವ ಸ್ಪರ್ಧೆ ನಡೆಯಲಿದೆ. ಹೆಗ್ಗೇರಿ, ಉಣಕಲ್, ವಿದ್ಯಾನಗರ, ಆಸಾರ ಓಣಿ, ಆನಂದನಗರ, ನವನಗರ ಸೇರಿದಂತೆ ನಗರಾದ್ಯಂತ ಸೋಮವಾರ ರತಿ-ಮನ್ಮಥರ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.

ಬಣ್ಣದ ಖರೀದಿ ಜೋರು:

ಹೋಳಿ ಹುಣ್ಣಿಮೆಯ ಅಂಗವಾಗಿ ನಗರದಾದ್ಯಂತ ಬಗೆಬಗೆಯ ಬಣ್ಣದ ಖರೀದಿ ಜೋರಾಗಿತ್ತು. ನಗರದ ದುರ್ಗದಬೈಲ್‌, ರಾಣಿ ಚೆನ್ನಮ್ಮ ವೃತ್ತದ ಬಳಿ, ಕೇಶ್ವಾಪುರ, ಗೋಕುಲ ರಸ್ತೆ, ಹಳೇ ಹುಬ್ಬಳ್ಳಿ, ಸಿಬಿಟಿ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಬಗೆಬಗೆಯ ಬಣ್ಣದ ಮಾರಾಟಕ್ಕೆ ವ್ಯವಸ್ಥೆ ಮಾಡಿದ್ದು, ಗ್ರಾಮೀಣ ಪ್ರದೇಶದ ಜನತೆ ಹಾಗೂ ನಗರದ ಜನತೆ ಸೋಮವಾರ ಬಣ್ಣ ಖರೀದಿಸಿದರು. ₹10 ರಿಂದ ಹಿಡಿದು ₹400-₹ 500ರ ವರೆಗೂ ಬಣ್ಣದ ಪ್ಯಾಕೆಟ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ತಮ್ಮ ಶಕ್ತಿಗೆ ಅನುಸಾರವಾಗಿ ಜನತೆ ಬಣ್ಣ ಖರೀದಿಸಿದರು.

ಹರಕೆಯ ಕಾಮಣ್ಣನ ವೈಶಿಷ್ಟ್ಯತೆ:ಹುಬ್ಬಳ್ಳಿಯ ಕಮರಿಪೇಟೆಯಲ್ಲಿ ಸೋಮವಾರ ಸಂಜೆ ಪ್ರತಿಷ್ಠಾಪಿಸಿರುವ ರತಿ-ಕಾಮಣ್ಣನಿಗೆ 145 ವರ್ಷಗಳ ಇತಿಹಾಸವಿದೆ. ಇವು ಹರಕೆಯ ಕಾಮಣ್ಣ ಎಂದೇ ಹೆಸರು ಪಡೆದಿವೆ. ಸೋಮವಾರ ಸಂಜೆ ಮೂರ್ತಿ ಪ್ರತಿಷ್ಠಾಪಿಸುತ್ತಿದಂತೆ ಸಾವಿರಾರು ಸಂಖ್ಯೆ ಸಾರ್ವಜನಿಕರು ತಾವು ಹೊತ್ತಿದ್ದ ಹರಕೆ ಈಡೇರಿಸಿದರು.