ಸಾರಾಂಶ
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಸೋಮವಾರ ಭೇಟಿ ನೀಡಿ ದೇವರ ದರ್ಶನ ಪಡೆದ ದಕ್ಷಿಣ ಕನ್ನಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಸುದ್ದಿಗಾರರ ಜೊತೆ ಮಾತನಾಡಿ, ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ಯಾವುದೇ ಅನುದಾನ, ಕಾರ್ಯಕ್ರಮಗಳ ಶಿಲಾನ್ಯಾಸ ನಡೆದಿಲ್ಲಎಂದು ಆರೋಪಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ಯಾವುದೇ ಅನುದಾನ, ಕಾರ್ಯಕ್ರಮಗಳ ಶಿಲಾನ್ಯಾಸ ನಡೆದಿಲ್ಲ. ಸರ್ಕಾರ ರಚನೆಯಾದ ಬಳಿಕ ಕರ್ನಾಟಕದ ಇತಿಹಾಸದಲ್ಲಿ ಯಾವುದೇ ಯೋಜನೆಗಳಿಗೆ ಶಿಲಾನ್ಯಾಸ ಮಾಡದೆ ಇರುವ ಸಿಎಂ ಇದ್ದರೆ ಸಿದ್ದರಾಮಯ್ಯ. ಜಿಲ್ಲೆಯಲ್ಲಿ ಯಾವುದೇ ಯೋಜನೆಗಳಿಗೆ ಶಿಲಾನ್ಯಾಸ ಮಾಡದ ಉಸ್ತುವಾರಿ ಸಚಿವರಿದ್ದರೆ ಅದು ದಿನೇಶ್ ಗುಂಡೂರಾವ್ ಅವರು. ಹಾಗಾಗಿ ಕಾಂಗ್ರೆಸ್ ಬಗ್ಗೆ ಮಾತನಾಡುವ ಅವಶ್ಯಕತೆ ನಮಗಿಲ್ಲ ಎಂದು ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ಕ್ಯಾ ಚೌಟ ಹೇಳಿದರು.ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಸೋಮವಾರ ಭೇಟಿ ನೀಡಿ ದೇವರ ದರ್ಶನ ಪಡೆದು ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ದಕ್ಷಿಣ ಕನ್ನಡದಂಥ ಪ್ರಗತಿಶೀಲ ಜಿಲ್ಲೆಯನ್ನು ಪ್ರತಿನಿಧಿಸುವ ಅವಕಾಶ ದೊರೆತದ್ದು ನನ್ನ ಸೌಭಾಗ್ಯ. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ ಸಹಕಾರದಿಂದ, ವಿಷಯ ತಜ್ಞರು- ಜನರ ಅಭಿಪ್ರಾಯ ಪಡೆದು ಜಿಲ್ಲೆಯನ್ನು ಸಮಗ್ರವಾಗಿ, ಪ್ರಧಾನಿಯ ವಿಕಸಿತ ಭಾರತದ ಕಲ್ಪನೆಗೆ ಪೂರಕವಾಗಿ ನಿರ್ಮಾಣ ಮಾಡುವ ಪ್ರಯತ್ನ ಮಾಡುವುದಾಗಿ ಕ್ಯಾ.ಬ್ರಿಜೇಶ್ ಚೌಟ ಹೇಳಿದ್ದಾರೆ.ದ.ಕ. ಪ್ರಗತಿಶೀಲ ಮಾತ್ರವಲ್ಲದೆ, ಶೈಕ್ಷಣಿಕ, ಸಾಮಾಜಿಕವಾಗಿ ಮುಂದುವರಿದ ಜಿಲ್ಲೆ. ಇಲ್ಲಿನ ಜನರು ಧಾರ್ಮಿಕವಾಗಿ ಶ್ರದ್ಧೆ, ಭಕ್ತಿ, ನಿಷ್ಠೆ ಇಟ್ಟುಕೊಂಡವರು. ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತಕೆಯನ್ನು ಜಿಲ್ಲೆ ಹೊಂದಿದೆ. ಕಳೆದ 15 ವರ್ಷಗಳಲ್ಲಿ ಸಂಸದರಾಗಿದ್ದ ನಳಿನ್ ಕುಮಾರ್ ಅವರು ತಂದಿರುವ ಯೋಜನೆಗಳು, ವಿಶೇಷವಾಗಿ ನರೇಂದ್ರ ಮೋದಿ ನೀಡಿದ ಯೋಜನೆಗಳನ್ನು ಪ್ರಾಮಾಣಿಕವಾಗಿ ಸಮಯಬದ್ಧವಾಗಿ ಪೂರ್ತಿಗೊಳಿಸುವ ಪ್ರಯತ್ನ ಮಾಡುತ್ತೇನೆ. ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡುತ್ತೇನೆ ಎಂದು ಕ್ಯಾ.ಚೌಟ ಹೇಳಿದರು.ಶಾಸಕ ವೇದವ್ಯಾಸ ಕಾಮತ್, ಪಕ್ಷದ ಮುಖಂಡರು ಇದ್ದರು.