ಸರಳ ಸಾಮೂಹಿಕ ವಿವಾಹ: ದಾಂಪತ್ಯ ಜೀವನಕ್ಕೆ ಕಾಲಿಟ್ಟ 7 ಜೋಡಿ ವಧು-ವರರು

| Published : Mar 26 2024, 01:07 AM IST / Updated: Mar 26 2024, 01:08 AM IST

ಸಾರಾಂಶ

ನಾಡದೇವತೆ ದೇವೀರಮ್ಮನವರ ಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಪಂಗುನಿ ಉತ್ತಿರ ಜಾತ್ರೆಯ ಕಾವಡಿ ಸಮರ್ಪಣೆ ಹಾಗೂ ಸರಳ ಸಾಮೂಹಿಕ ವಿವಾಹ ಸೋಮವಾರ ವಿಜೃಂಭಣೆಯಿಂದ ನೆರವೇರಿತು.

ಪಂಗುನಿ ಉತ್ತಿರ ಜಾತ್ರೆ ಅಂಗವಾಗಿ ಪ್ರತಿ ವರ್ಷದಂತೆ ಸರಳ ಸಾಮೂಹಿಕ ವಿವಾಹ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುನಾಡದೇವತೆ ದೇವೀರಮ್ಮನವರ ಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಪಂಗುನಿ ಉತ್ತಿರ ಜಾತ್ರೆಯ ಕಾವಡಿ ಸಮರ್ಪಣೆ ಹಾಗೂ ಸರಳ ಸಾಮೂಹಿಕ ವಿವಾಹ ಸೋಮವಾರ ವಿಜೃಂಭಣೆಯಿಂದ ನೆರವೇರಿತು. ಪಂಗುನಿ ಉತ್ತಿರ ಜಾತ್ರೆಯ ಅಂಗವಾಗಿ ದೇವಾಲಯದ ಆಡಳಿತ ಮಂಡಳಿ ಪ್ರತಿ ವರ್ಷದಂತೆ ಸೋಮವಾರ ಏರ್ಪಡಿಸಿದ್ದ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 7 ಜೋಡಿ ವಧು-ವರರು ತಮ್ಮ ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಉತ್ತಿರ ನಕ್ಷತ್ರ ಶುಭ ಯೋಗದಿಂದ ಕೂಡಿದ ಈ ಶುಭ ದಿನದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಶ್ರೀ ಸುಬ್ರಹ್ಮಣ್ಯ ಸ್ವಾಮಿಯವರಿಗೆ ವಿಶೇಷ ಅಭಿಷೇಕ, ಅಲಂಕಾರದೊಂದಿಗೆ ಮಹಾ ಮಂಗಳಾರತಿ ನಂತರ ಪಂಗುನಿ ಉತ್ತಿರ ಜಾತ್ರೆಯಲ್ಲಿ ಹರಕೆ ಹೊತ್ತ ಭಕ್ತರಿಂದ ಕಾವಡಿ ಸಮರ್ಪಣೆ ನಡೆಯಿತು.

ಸರಳ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡಿದ್ದ ನೂತನ ವಧು-ವರರಿಗೆ ದೇವಸ್ಥಾನದ ಆಡಳಿತ ಮಂಡಳಿಯಿಂದ ಹೊಸ ವಸ್ತ್ರಗಳನ್ನು ವಿತರಿಸಲಾಯಿತು. ನಾಡದೇವತೆ ದೇವೀರಮ್ಮ ದೇವಾಲಯದ ಆಡಳಿತ ಮಂಡಳಿಯಿಂದ ಸಾಮೂಹಿಕ ವಿವಾಹವಾದ 7 ವಧುಗಳಿಗೆ ಸೀರೆಗಳನ್ನು ವಿತರಿಸಲಾಯಿತು. ಬೆಳಿಗ್ಗೆ 9 ಗಂಟೆಯಿಂದ ಶ್ರೀ ಸುಬ್ರಹ್ಮಣ್ಯಸ್ವಾಮಿ ಹಾಗೂ ವಳ್ಳಿ, ದೇವಾನೆಯವರ ಕಲ್ಯಾಣೋತ್ಸವ, 12 ಗಂಟೆಗೆ ಸರಳ ಸಾಮೂಹಿಕ ವಿವಾಹ ನಡೆಯಿತು.

ಈ ಸರಳ ಸಾಮೂಹಿಕ ವಿವಾಹಕ್ಕೆ 13 ವಧು ವರರು ನೋಂದಾಯಿಸಿದ್ದು, 6 ಅರ್ಜಿಗಳನ್ನು ವಯಸ್ಸಿನ ಅಂತರದ ಕಾರಣ ದಿಂದಾಗಿ ತಿರಸ್ಕರಿಸಿ 7 ಜನ ವಧು-ವರರಿಗೆ ಸರಳ ಸಾಮೂಹಿಕ ವಿವಾಹದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ಉಪಾಧ್ಯಕ್ಷ ಜಿ. ರಮೇಶ್ ತಿಳಿಸಿದ್ದಾರೆ. ಕಳೆದ 25 ವರ್ಷಗಳಿಂದ ಸರಳ ಸಾಮೂಹಿಕ ಕಾರ್ಯಕ್ರಮ ನಡೆಸುತ್ತಾ ಬಂದಿದ್ದು, ಈವರೆಗೆ ಸುಮಾರು 250 ರಿಂದ 300 ಜನ ವಧು-ವರರು ಇಲ್ಲಿ ಸಾಮೂಹಿಕ ವಿವಾಹವಾಗುವ ಮೂಲಕ ಹೊಸ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆಂದು ತಿಳಿಸಿದರು.

ದೇವಾಲಯದ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಎಸ್. ವಿಜಯಕುಮಾರ್ ಮಾತನಾಡಿ, ಕಳೆದ 25 ವರ್ಷಗಳಿಂದ ಪಂಗುನಿ ಉತ್ತಿರ ಜಾತ್ರೆ ಅಂಗವಾಗಿ ದೇವಾಲಯದಲ್ಲಿ ಪ್ರತಿವರ್ಷ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳುತ್ತಾ ಬಂದಿದ್ದು, ಈ ಕಾರ್ಯಕ್ರಮಕ್ಕೆ ಎಲ್ಲಾ ರೀತಿ ಸಹಕಾರ ನೀಡಿದ ದಾನಿಗಳು ಹಾಗೂ ಸಾರ್ವಜನಿಕರಿಗೆ ಕೃತಜ್ಞತೆ ತಿಳಿಸಿದರು.

ಸರಳ ಸಾಮೂಹಿಕ ಕಾರ್ಯಕ್ರಮವನ್ನು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಅವರ ಶಿಷ್ಯರಾದ ಅನಂತ್ ಮತ್ತು ಸಾಯಿ ನಂದನ್ ಮತ್ತು ಸಂಗಡಿಗರು ಹಾಗೂ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಹಾಗೂ ವಳ್ಳಿ, ದೇವಾನೆಯವರ ಕಲ್ಯಾಣೋತ್ಸವದ ಧಾರ್ಮಿಕ ವಿಧಿ-ವಿಧಾನಗಳನ್ನು ಅತ್ಯಂತ ನಡೆಸಿಕೊಟ್ಟರು. ಈ ಸರಳ ಸಾಮೂಹಿಕ ಕಾರ್ಯಕ್ರಮಕ್ಕೆ ಶಾಸಕ ಎಚ್.ಡಿ. ತಮ್ಮಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯಿತ್ರಿ ಶಾಂತೇಗೌಡ ಹಾಗೂ ಪಲ್ಲವಿ ಸಿ.ಟಿ. ರವಿ ಅವರು ನೂತನ ವಧುವರರಿಗೆ ಶುಭ ಹಾರೈಸಿದರು. ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಧರ್ಮದರ್ಶಿ ಮಂಡಳಿ ಅಧ್ಯಕ್ಷ ವಿ. ಗುಣಶೇಖರ್, ಉಪಾಧ್ಯಕ್ಷ ಎ.ಮಹಾಲಿಂಗಂ, ಸಹಕಾರ್ಯದರ್ಶಿ ಅರಿವಳಗನ್, ಖಜಾಂಚಿ ಕೃಷ್ಣರಾಜ್, ನಿರ್ದೇಶಕ ಎನ್. ಶಕ್ತಿವೇಲ್, ಜಿ. ರಘು, ಗೋಪಾಲ್, ಜಿ.ಶಂಕರ್, ಸಿ. ವೆಂಕಟೇಶ್, ಮುರುಗನ್, ಪುದುವೆಂದಿರನ್, ಎ.ಸಿ. ಶಶಿಧರ್, ಎಸ್.ಅಣ್ಣವೇಲು, ಮಣಿವೇಲು, ಚನ್ನಪ್ಪ ಬುಕ್ಕಸಾಗರ ಹಾಗೂ ಅರ್ಚಕರಾದ ಎಸ್. ಕಂದಸ್ವಾಮಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. 25 ಕೆಸಿಕೆಎಂ 9ದೇವೀರಮ್ಮನವರ ಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಪಂಗುನಿ ಉತ್ತಿರ ಜಾತ್ರೆಯ ಕಾವಡಿ ಸಮರ್ಪಣೆ ಹಾಗೂ ಸರಳ ಸಾಮೂಹಿಕ ವಿವಾಹ ಸೋಮವಾರ ವಿಜೃಂಭಣೆಯಿಂದ ನೆರವೇರಿತು.