ಕಳೆದ ಎರಡೂವರೆ ವರ್ಷದಲ್ಲಿ ಜೋಡಿಚಿಕ್ಕನಹಳ್ಳಿ, ನಲ್ಕುಂದಿ, ತೊರೆಮಲ್ಲನಾಯ್ಕನಹಳ್ಳಿ ಸೇರಿ ಹರದನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಿವಿಧ ಗ್ರಾಮಗಳ ರಸ್ತೆಗಳ ಅಭಿವೃದ್ಧಿಗೆ ₹20 ಕೋಟಿಗೂ ಹೆಚ್ಚು ಅನುದಾನ ಬಿಡುಗಡೆ ಮಾಡಿಸಲಾಗಿದೆ .

ಕನ್ನಡಪ್ರಭ ವಾರ್ತೆ ನಾಗಮಂಗಲ

ನಾನು ಶಾಸಕನಾದ ಒಂದೇ ಅವಧಿಯಲ್ಲಿ ತಾಲೂಕಿನಲ್ಲಿ ಯಾರು ಕೇಳದಿದ್ದರೂ ಕೂಡ ನಾಲ್ಕು ಬಾರಿ ಶಾಸಕರಾದವರು ಮಾಡಲಾಗದಂತಹ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ. ಆದರೂ ಕೂಡ ಚುನಾವಣೆಯಲ್ಲಿ ನನ್ನ ವಿರುದ್ಧ ಮತ ಹಾಕುತ್ತೀರಿ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಬೇಸರ ಹೊರಹಾಕಿದರು.

ತಾಲೂಕಿನ ಜೋಡಿಚಿಕ್ಕನಹಳ್ಳಿ ಮತ್ತು ನಲ್ಕುಂದಿ ಗ್ರಾಮಗಳಲ್ಲಿ ₹5 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ನಾನು ಶಾಸಕನಾಗಿದ್ದ ಕಳೆದ 2013ರಿಂದ 2018ರ ಅವಧಿಯಲ್ಲಿ ನಾಗಮಂಗಲದಿಂದ ಕೋಟೆ ಬೆಟ್ಟದವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. 3.5ಮೀ. ಅಗಲದ ರಸ್ತೆಯನ್ನು 5 ಮೀಟರ್‌ಗೆ ವಿಸ್ತರಿಸಿದ್ದರಿಂದ ಪಾಲಗ್ರಹಾರದ ವರೆಗೆ ನಿಂತು ಹೋಗಿತ್ತು. ನಂತರ ಶಾಸಕರಾದವರು 5 ವರ್ಷ ಕಾಲ ಈ ರಸ್ತೆಯನ್ನು ಮುಂದುವರಿಸಲಿಲ್ಲ. ಕೆಂಚೇಗೌಡಕೊಪ್ಪಲಿನಿಂದ ನಲ್ಕುಂದಿವರೆಗೆ ಕಿತ್ತು ಗುಂಡಿಬಿದ್ದಿದ್ದ ರಸ್ತೆಯಲ್ಲಿಯೇ ಜನರು ಅದ್ಯಾವ ರೀತಿ ಓಡಾಡಿದರೆಂದು ಗೊತ್ತಿಲ್ಲ ಎಂದರು.

ಕಳೆದ ಎರಡೂವರೆ ವರ್ಷದಲ್ಲಿ ಜೋಡಿಚಿಕ್ಕನಹಳ್ಳಿ, ನಲ್ಕುಂದಿ, ತೊರೆಮಲ್ಲನಾಯ್ಕನಹಳ್ಳಿ ಸೇರಿ ಹರದನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಿವಿಧ ಗ್ರಾಮಗಳ ರಸ್ತೆಗಳ ಅಭಿವೃದ್ಧಿಗೆ ₹20 ಕೋಟಿಗೂ ಹೆಚ್ಚು ಅನುದಾನ ಬಿಡುಗಡೆ ಮಾಡಿಸಲಾಗಿದೆ ಎಂದು ತಿಳಿಸಿದರು.

ಇದನ್ನು ಅರಿಯದೆ ನಾನು ಮಂಜೂರು ಮಾಡಿಸಿದ ಕೆಲಸಕ್ಕೆ ಪೂಜೆ ಮಾಡಲಾಗುತ್ತಿದೆ ಎಂದು ಬಾಯಿಗೆ ಬಂದಂತೆ ಮಾತಾಡುವವರಿಗೆ ನಾಚಿಕೆಯಾಗಬೇಕು. ನಾನು ಬದುಕಿರುವ ತನಕ ಇನ್ನೊಬ್ಬರು ಮಂಜೂರು ಮಾಡಿಸಿದ ಕೆಲಸಕ್ಕೆ ಪೂಜೆ ಮಾಡುವುದಿಲ್ಲ ಎಂದು ಪರೋಕ್ಷವಾಗಿ ಮಾಜಿ ಶಾಸಕ ಸುರೇಶ್‌ಗೌಡರನ್ನು ಜರಿದರು.

ಈ ವೇಳೆ ಕೆಎಂಎಫ್ ನಿರ್ದೇಶಕ ಎನ್.ಅಪ್ಪಾಜಿಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಎಂಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಹರದನಹಳ್ಳಿ ನರಸಿಂಹಯ್ಯ, ಮನ್‌ಮುಲ್ ಮಾಜಿ ನಿರ್ದೇಶಕ ಡಿ.ಟಿ.ಕೃಷ್ಣೇಗೌಡ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ತಮ್ಮಣ್ಣಗೌಡ, ಟಿಎಪಿಸಿಎಂಎಸ್ ನಿರ್ದೇಶಕಿ ಎನ್.ಕೆ.ವಸಂತಮಣಿ, ಲೋಕೋಪಯೋಗಿ ಇಲಾಖೆಯ ಎಇಇ ಲಿಂಗರಾಜು, ಮುಖಂಡರಾದ ಪುಟ್ಟಸ್ವಾಮಿಗೌಡ, ಡಿ.ಕೆ.ರಾಜೇಗೌಡ, ಮರಿಸ್ವಾಮಿ, ಆನಂದ, ನಾಗರಾಜು ಸೇರಿದಂತೆ ಹಲವರು ಇದ್ದರು.