ದೊಡ್ಡ ಮೇಟಿಕುರ್ಕೆ ಗ್ರಾಮದ ಎಸ್‌ಎನ್‌ಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ 2025–26ನೇ ಸಾಲಿನ ವಾರ್ಷಿಕೋತ್ಸವ ಚಿಣ್ಣರ ಲೋಕ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ನೈತಿಕತೆ ಮತ್ತು ಸಾಮಾಜಿಕ ಹೊಣೆಗಾರಿಕೆಯ ಕೊರತೆಯಿಂದ ಸಮಾಜಘಾತುಕ ಘಟನೆಗಳು ನಿರಂತರವಾಗಿ ನಡೆಯುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಮಕ್ಕಳಿಗೆ ಅಂಕಗಳ ಗಳಿಕೆಯಷ್ಟೇ ಶಿಕ್ಷಣದ ಸೀಮಿತವಾಗದೇ, ನೈತಿಕ ನೆಲೆಗಟ್ಟು ಹಾಗೂ ಸಾಮಾಜಿಕ ಪ್ರಜ್ಞೆ ಬೆಳೆಸುವ ಶಿಕ್ಷಣ ನೀಡುವುದು ಅತ್ಯವಶ್ಯಕವಾಗಿದೆ ಎಂದು ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಸಲಹೆ ನೀಡಿದರು.ತಾಲೂಕಿನ ದೊಡ್ಡ ಮೇಟಿಕುರ್ಕೆ ಗ್ರಾಮದ ಎಸ್‌ಎನ್‌ಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ 2025–26ನೇ ಸಾಲಿನ ವಾರ್ಷಿಕೋತ್ಸವ ಚಿಣ್ಣರ ಲೋಕ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ನೈತಿಕತೆ ಮತ್ತು ಸಾಮಾಜಿಕ ಹೊಣೆಗಾರಿಕೆಯ ಕೊರತೆಯಿಂದ ಸಮಾಜಘಾತುಕ ಘಟನೆಗಳು ನಿರಂತರವಾಗಿ ನಡೆಯುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದರು.ವಿದ್ಯಾರ್ಥಿಗಳಲ್ಲಿ ಕಲಿಯುವ ಹಸಿವು ಇರಬೇಕು. ಸೋಲನ್ನೇ ಗೆಲುವಿನ ಮೆಟ್ಟಿಲಾಗಿಸಿಕೊಂಡು ಮುಂದೆ ಸಾಗುವ ಛಲ ಹಾಗೂ ಮನೋಬಲ ಬೆಳೆಸಿಕೊಳ್ಳಬೇಕು. ಕ್ರಮಬದ್ಧ ಅಧ್ಯಯನ, ಶಿಸ್ತು, ಪರಿಶ್ರಮ ಮತ್ತು ವಿನಯವನ್ನು ಜೀವನದ ಆಭರಣಗಳಾಗಿ ಅಳವಡಿಸಿಕೊಂಡರೆ ಜ್ಞಾನಕ್ಕಿಂತ ದೊಡ್ಡ ಸಂಪತ್ತು ಮತ್ತೊಂದಿಲ್ಲ ಎಂದು ಅವರು ಹೇಳಿದರು. ಮಕ್ಕಳಲ್ಲಿ ಅಪಾರ ಪ್ರತಿಭೆ ಅಡಗಿದ್ದು, ಅದನ್ನು ಹೊರತರುವ ಅರಿವು ಶಿಕ್ಷಕರು ಹಾಗೂ ಪೋಷಕರಲ್ಲಿ ಇರಬೇಕು. ಮಕ್ಕಳು ಸುಂದರ ಶಿಲ್ಪಿಗಳಂತೆ ರೂಪುಗೊಳ್ಳಲು ದುರಭ್ಯಾಸಗಳನ್ನು ತ್ಯಜಿಸಿ ಸದ್ಭಾವನೆಗಳನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಉನ್ನತ ಗುರಿ ಸಾಧನೆ ಸಾಧ್ಯ ಎಂದು ಕಿವಿಮಾತು ಹೇಳಿದರು.ಕಣಕಟ್ಟೆ ಹೋಬಳಿ ಶಿಕ್ಷಣ ಸಂಯೋಜಕ ಬಿ.ಬಿ. ಸತೀಶ್ ಮಾತನಾಡಿ, ಮಕ್ಕಳಿಗೆ ಶಿಸ್ತನ್ನು ಬಲವಂತವಾಗಿ ಹೇರಬಾರದು. ಪ್ರೀತಿ ಹಾಗೂ ವಿಶ್ವಾಸದ ಮೂಲಕ ಅವರನ್ನು ಶಿಸ್ತಿಗೆ ಒಳಪಡಿಸಬೇಕು. ಜೀವನದ ಕನಸುಗಳನ್ನು ಈಡೇರಿಸಿಕೊಳ್ಳಲು ಪುಸ್ತಕ ಪ್ರೇಮ ಅತ್ಯಂತ ಅಗತ್ಯವಾಗಿದ್ದು, ಪೋಷಕರು ಮಕ್ಕಳಿಗೆ ನಿರಂತರ ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು. ಎಸ್ಎಂಎಸ್ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶ್ರೀ ಅಭಿನವ ಶಿವಲಿಂಗ ಸ್ವಾಮಿಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಇದೇ ಸಂದರ್ಭದಲ್ಲಿ ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 622 ಅಂಕಗಳನ್ನು ಗಳಿಸಿದ ವಿದ್ಯಾರ್ಥಿ ಸಹನ ಅವರಿಗೆ ಶಾಲಾ ಅಭಿವೃದ್ಧಿ ಸಮಿತಿ ನಿರ್ದೇಶಕ ಎಂ. ಎಸ್. ನಟರಾಜ್ ಲ್ಯಾಪ್‌ಟಾಪ್ ಅನ್ನು ಬಹುಮಾನವಾಗಿ ನೀಡಿದ್ದು, ಅದನ್ನು ಜೆ.ಸಿ. ಮಾಧುಸ್ವಾಮಿ ವಿತರಿಸಿದರು.ಡಿ.ಎಂ. ಕುರ್ಕೆ ಕ್ಲಸ್ಟರ್‌ನ ಧನಂಜಯ ಮಾತನಾಡಿದರು. ಕಾರ್ಯಕ್ರಮದ ಆರಂಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಎಸ್.ಎಂ. ನಂದೀಶ್ ವರದಿ ವಾಚಿಸಿದರು. ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿ ನಿರ್ದೇಶಕರಾದ ಡಿ.ಎಸ್. ಸಿದ್ದಪ್ಪ, ಎಸ್. ಮಲ್ಲಿಕಾರ್ಜುನಪ್ಪ, ಎಂ.ಸಿ. ನಟರಾಜ್, ಎಂ.ಎನ್. ಓಂಕಾರಪ್ಪ, ಶಂಕರನಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಣ್ಣಸ್ವಾಮಿ, ಮಾಡಾಳು ಶಿವಲಿಂಗಪ್ಪ, ಎಂಡಿ ಸೋಮಶೇಖರ್, ಮುಖ್ಯ ಶಿಕ್ಷಕ ಸತೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.