ಕೊಟ್ಟಿಗೆಹಾರಯುವಕರು ದೇಶ ಸೇವೆ ಮಾಡಲು ಮುಂದೆ ಬರಬೇಕು ಎಂದು ಶಾಲೆಯ ಹಳೆ ವಿದ್ಯಾರ್ಥಿ, ಮಾಜಿ ಯೋಧ ಕೆ.ಎಲ್.ವಸಂತ್ ಹೇಳಿದರು.

- ಅತ್ತಿಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಮೃತ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕೊಟ್ಟಿಗೆಹಾರಯುವಕರು ದೇಶ ಸೇವೆ ಮಾಡಲು ಮುಂದೆ ಬರಬೇಕು ಎಂದು ಶಾಲೆಯ ಹಳೆ ವಿದ್ಯಾರ್ಥಿ, ಮಾಜಿ ಯೋಧ ಕೆ.ಎಲ್.ವಸಂತ್ ಹೇಳಿದರು.ಭಾನುವಾರ ನಡೆದ ಅತ್ತಿಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶ ಪ್ರೇಮ ಉಳಿಸಿಕೊಳ್ಳಲು ದೇಶ ಸೇವೆಯಿಂದ ಸಾಧ್ಯವಾಗುತ್ತದೆ. ನಾವೆಲ್ಲರೂ ಒಂದೇ ಭಾರತೀಯರು ಎಂಬಂತೆ ಸೇವೆ ಮಾಡಬೇಕು ಎಂದು ಕರೆ ನೀಡಿದರು.

ದೇಶ ಸೇವೆಗೆ ಜಾತಿ ತಾರತಮ್ಯ ಇಲ್ಲ. ಈ ಶಾಲೆ ನಾವು ಅಂದು ವಿದ್ಯೆ ಕಲಿಯುವಾಗ ಸೌಲಭ್ಯಗಳೇ ಕೊರತೆಯಾಗಿದ್ದವು. ಆದರೂ ಶಿಕ್ಷಕರು ಉತ್ತಮ ವಿದ್ಯೆ ನೀಡಿದ್ದರಿಂದ ನಾವು ಸಮಾಜದಲ್ಲಿ ಉತ್ತಮ ಹುದ್ದೆ ಏರಲು ಸಾಧ್ಯವಾಯಿತು. ಕಲಿತ ಶಾಲೆ, ಶಿಕ್ಷಕರನ್ನು ಎಂದಿಗೂ ಮರೆಯಬಾರದು ಎಂದರು.

ಮಾಜಿ ಯೋಧ ಟಿ.ಎಸ್.ಪ್ರಸನ್ನ ಮಾತನಾಡಿ, ಚಿಕ್ಕಮ್ಮ ಟೀಚರ್, ಬಲರಾಮಯ್ಯ ಮಾಸ್ಟರ್ ಕೊಟ್ಟ ಏಟುಗಳು ಇಂದು ಶಿಲೆಯಾಗಿ ದೇಶ ಕಾಯುವ ಯೋಧನಾಗಿ ನನ್ನನ್ನು ರೂಪಿಸಿದೆ. ಯೋಧನಾಗಿ ಅನೇಕ ಏಳುಬೀಳುಗಳನ್ನು ಕಂಡಿದ್ದೇನೆ. ನಿವೃತ್ತಿ ನಂತರ 2018ರಲ್ಲಿ ಬೆಂಗಳೂರಿನಲ್ಲಿ ನಾನಿದ್ದ ಮನೆ ಮೇಲೆ ಟೆರರಿಸ್ಟ್ ದಾಳಿಯಾಗಿತ್ತು. ನನ್ನ ಪತ್ನಿ, ಮಕ್ಕಳು ಯಾವುದೇ ತೊಂದರೆಯಾಗದೇ ಪಾರಾದರು. ಮಕ್ಕಳು ಪೋಷಕರಿಗೆ ಹಿರಿಯರಿಗೆ ಗೌರವ ಕೊಡಬೇಕು. ನಮಗೆ ದೇಶ ಏನು ಕೊಟ್ಟಿದೆ ಎನ್ನುವುದಕ್ಕಿಂತ ನಾವು ದೇಶಕ್ಕೆ ಏನು ಕೊಟ್ಟಿದ್ದೇವೆ ಅನ್ನುವುದೇ ಮುಖ್ಯವಾಗಬೇಕು ಎಂದು ಹೇಳಿದರು.

ನಿವೃತ್ತ ಶಿಕ್ಷಕ ಬಲರಾಮಯ್ಯ ಮಾತನಾಡಿ, ಕಟ್ಟಡ ಹಳೆಯದಾಗಿದ್ದು ಇದರ ಅಭಿವೃದ್ಧಿಗೆ ನಾನು ನೆರವು ನೀಡಲು ಸಿದ್ದನಿದ್ದೇನೆ. 5 ದಶಕದ ಈ ಶಾಲೆ ವಿದ್ಯಾರ್ಥಿಗಳು ನನ್ನನ್ನು ಮರೆಯದೇ ಗೌರವಿಸಿರುವುದು ನನಗೆ ಅತೀವ ಸಂತಸ ತಂದಿದೆ ಎಂದರು.

ನಿವೃತ್ತ ಯೋಧರಾದ ವಲೇರಿಯನ್ ಡಿಸೋಜಾ, ಕೆ.ಎಲ್.ವಸಂತ್, ಎ.ಜಯರಾಮಗೌಡ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಟಿ.ಸಿ.ರಮೇಶ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನವೀನ್ ಕುಮಾರ್, ಅಮೃತ ಮಹೋತ್ಸವದ ಕಾರ್ಯದರ್ಶಿ ಟಿ.ಎಂ.ನರೇಂದ್ರ, ಟಿ.ಎ.ಖಾದರ್, ಸುಬ್ಬಯ್ಯ ಮಾತನಾಡಿದರು. ಟಿ.ಸಿ ರಮೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಬಗ್ಗೆ ಮುಖ್ಯ ಶಿಕ್ಷಕರಾದ ಕೆ.ಕವಿತಾ, ಹಂಸಲೇಖ ವರದಿ ಮಂಡಿಸಿದರು. ಕಾರ್ಯಕ್ರಮದಲ್ಲಿ ಹಳೇ ಶಿಕ್ಷಕರಾದ ಲಿಲ್ಲಿ ವಿ.ಡಿ, ಚಿಕ್ಕಮ್ಮ, ಸುಲೋಚನಾ, ಸರೋಜ, ಬಲರಾಮಯ್ಯ, ನರಸಿಂಹ ಮೂರ್ತಿ, ಭರತ್ ರೆಡ್ಡಿ ಹಾಗೂ ಈ ಶಾಲೆಯಲ್ಲಿ ಕಲಿತು 75 ವರ್ಷ ಮುಗಿಸಿದ್ದ ಹಳೇ ವಿದ್ಯಾರ್ಥಿಗಳಾದ ಟಿ.ಎಂ.ಗೋಪಾಲಗೌಡ, ರವಿಕಲಾ ಪೈ, ಲಕ್ಷ್ಮಣಾ ಚಾರ್, ಟಿ.ಎ.ಖಾದರ್, ಕೃಷ್ಣಾಚಾರ್, ಎ.ಬಿ.ಕೃಷ್ಣೇಗೌಡ ಅವರನ್ನು ಶಾಲಾ ಅಮೃತ ಮಹೋತ್ಸವ ಸಮಿತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

28 ಕೆಸಿಕೆಎಂ 2ಮೂಡಿಗೆರೆ ತಾಲೂಕಿನ ಅತ್ತಿಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಹಳೇ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.