ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಆಧುನಿಕತೆಯ ಸೋಗಿನಲ್ಲಿ ಇಂದಿನ ಯುವ ಪೀಳಿಗೆ ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳನ್ನು ಮರೆಯುತ್ತಿದೆ ಎಂದು ಕಾವೇರಿ ತಾಂತ್ರಿಕ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಪ್ರೊ.ನಾಗೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.ತಾಲೂಕಿನ ಸಿದ್ದಯ್ಯನಕೊಪ್ಪಲು ಗೇಟ್ ಬಳಿ ಇರುವ ಕಾವೇರಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ನಡೆದ ಸಂಕ್ರಾಂತಿ ಸುಗ್ಗಿ ಸಂಭ್ರಮ ಕಾರ್ಯಕ್ರಮದಲ್ಲಿ ರಾಶಿ ಪೂಜೆ ನಡೆಸಿ ಮಾತನಾಡಿ, ಗ್ರಾಮೀಣ ಸೊಗಡಿನ ಆಚರಣೆಗಳು ಇಂದಿಗೂ ಪ್ರಸ್ತುತವಾಗಿವೆ. ಇವುಗಳನ್ನು ನಾವು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.
ಇಂದಿನ ಯುವಜನಾಂಗ ಇಂತಹ ಸಂಸ್ಕೃತಿಗಳನ್ನು ಬಿಟ್ಟು ಬೇರೆಯದ್ದೇ ಲೋಕದಲ್ಲಿ ವಿಹರಿಸುವಂತಹ ವಾತಾವರಣ ಇದೆ. ನಾವು ತಿನ್ನುವ ಆಹಾರಕ್ಕೆ ಹೆಚ್ಚಿನ ಮಾನ್ಯತೆ ನೀಡಬೇಕಿದೆ. ರೈತನ ಬದುಕು, ಬೆಳೆ, ರಾಸುಗಳು ಎಲ್ಲವನ್ನೂ ಇಂದಿನ ಯುವ ಪೀಳಿಗೆಗೆ ತಿಳಿಸುವ ಅಗತ್ಯತೆ ಇದೆ. ಈ ಹಿನ್ನೆಲೆಯಲ್ಲಿ ನಾವು ಸಂಕ್ರಾಂತಿ ಸುಗ್ಗಿ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.ಸಂಕ್ರಾಂತಿ ಸುಗ್ಗಿ ಸಂಭ್ರಮವನ್ನು ಒಂದೊಂದು ಕಡೆಯಲ್ಲಿ ಒಂದೊಂದು ರೀತಿ ಆಚರಣೆ ಮಾಡಲಾಗುತ್ತದೆ. ಮುಖ್ಯವಾಗಿ ರೈತ, ಕೂಲಿ ಕಾರ್ಮಿಕರು ಹಾಗೂ ರೈತನ ಒಡನಾಡಿಯಾಗಿರುವ ಜಾನುವಾರುಗಳನ್ನು ಪೂಜಿಸುವುದರ ಜೊತೆಗೆ ಭೂಮಿ ತಾಯಿ, ಧವಸ- ಧಾನ್ಯಗಳನ್ನು ಪೂಜಿಸುವಂತಹ ಸಂಸ್ಕೃತಿ ನಮ್ಮದಾಗಿದೆ. ಇಂತಹ ಪರಂಪರೆಯನ್ನು ಮುಂದಿನ ಪೀಳಿಗೆಯೂ ಬೆಳೆಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.
ಕಾವೇರಿ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಡಾ. ಎಚ್.ಎ. ರಾಜು ಮಾತನಾಡಿ, ಸೂರ್ಯ ತನ್ನ ಪಥವನ್ನು ಬದಲಿಸುವಂತಹ ದಿನ ಮಕರ ಸಂಕ್ರಮಣ ಕಾಲ. ಇಂತಹ ಕಾಲದಲ್ಲಿ ರೈತರು ತಾವು ಬೆಳೆದ ಬೆಳೆಯನ್ನು ರಾಶಿ ಮಾಡಿ ಅದಕ್ಕೆ ಪೂಜೆ ಮಾಡುವುದು ಸಂಪ್ರದಾಯ. ಇಂತಹ ಸಂಭ್ರಮದಲ್ಲಿ ಮನೆ ಮಂದಿ ಎಲ್ಲರೂ ಭಾಗವಹಿಸುತ್ತಾರೆ. ಇದನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಸಲುವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ಇದು ಕೇವಲ ರೈತರಿಗೆ ಮಾತ್ರ ಸಂಬಂಧಿಸಿದ್ದಲ್ಲ, ಸಾಕು ಪ್ರಾಣಿಗಳನ್ನೂ ಸೇರಿಸಿ ಹಳ್ಳಿಯ ವಾತಾವರಣ ಸೃಷ್ಟಿ ಮಾಡಿ ವಿದ್ಯಾರ್ಥಿಗಳಿಗೆ ಎಳ್ಳು ಬೆಲ್ಲ ವಿತರಿಸಿದ್ದೇವೆ. ಇದರೊಂದಿಗೆ ಎಲ್ಲರ ಬಾಳಲ್ಲಿ ಸುಗ್ಗಿಯ ಸಂಭ್ರಮ, ಸಿಹಿ ಎಲ್ಲವೂ ಇರಲಿ ಎಂದು ಆಶಿಸಿದರು.
ಕಾವೇರಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎ.ಎಸ್. ಶ್ರೀಕಂಠಪ್ಪ, ಉಪ ಪ್ರಾಂಶುಪಾಲ ಪ್ರೊ.ಆರ್.ಮಂಜುನಾಥ್, ಕಾಲೇಜಿನ ಸಿಬ್ಬಂದಿ ಸಂಕ್ರಾಂತಿ ಸುಗ್ಗಿ ಸಂಭ್ರಮದಲ್ಲಿ ಭಾಗವಹಿಸಿದ್ದರು.;Resize=(128,128))
;Resize=(128,128))
;Resize=(128,128))