ಸಾರಾಂಶ
ಹುಬ್ಬಳ್ಳಿ:
ಇಲ್ಲಿನ ವರೂರಿನಲ್ಲಿರುವ ನವಗ್ರಹ ತೀರ್ಥ ಕ್ಷೇತ್ರದಲ್ಲಿ ನಡೆಯುತ್ತಿರುವ ಭಗವಾನ್ ತೀರ್ಥಂಕರರ ಪಂಚಕಲ್ಯಾಣ ಮಹೋತ್ಸವದ ಅಂಗವಾಗಿ ಶನಿವಾರ ಭಗವಾನ್ ಪಾರ್ಶ್ವನಾಥ ಸ್ವಾಮಿಯ ರಾಜ್ಯಾಭಿಷೇಕ ಕಾರ್ಯಕ್ರಮವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.ಮುಖ್ಯ ವೇದಿಕೆಯ ಮೇಲೆ ಸಂಪೂರ್ಣ ಹೂವಿನಿಂದ ನಿರ್ಮಿಸಿದ್ದ ಆಕರ್ಷಕ ರಾಜಮಹಲ್ನಲ್ಲಿ ನಡೆದ ಸಮಾರಂಭ ಕಣ್ಮನ ಸೆಳೆಯಿತು. ಗುರುದೇವ ಆಚಾರ್ಯ ಕುಂತುಸಾಗರ ಮಹಾರಾಜ ಹಾಗೂ ರಾಷ್ಟ್ರ ಸಂತ ಗುಣಧರ ನಂದಿ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಶ್ರೀಮಂತ ಪಂಡಿತರು ರಾಜ್ಯಾಭಿಷೇಕ ವಿಧಿ-ವಿಧಾನ ನಡೆಸಿಕೊಟ್ಟರು.
ಸಾಮ್ರಾಜ್ಯ ವೈಭವ ಎಂದು ಕರೆಯಲಾಗುವ ಈ ಕಾರ್ಯಕ್ರಮದಲ್ಲಿ ಚಕ್ರವರ್ತಿಗೆ ವೈರಾಗ್ಯ ಪ್ರಾಪ್ತಿಯಾಗಿ ಪುತ್ರ ಪಾರ್ಶ್ವನಾಥರಿಗೆ ಪಟ್ಟಕಟ್ಟುತ್ತಾರೆ. ಪಾರ್ಶ್ವನಾಥರ ಪಂಚಲೋಹದ ಪ್ರತಿಮೆ ಮತ್ತು ಶಿಲಾ ಮೂರ್ತಿಗೆ ಸುಮಂಗಲಿಯರಿಂದ ಮಂಗಲ ಸ್ನಾನ ಮತ್ತು ಅಭಿಷೇಕದ ನಂತರ ಅಲಂಕಾರ ಮಾಡಿ ವಸ್ತ್ರ ಧಾರಣೆ ಮಾಡಲಾಯಿತು.ಚಕ್ರವರ್ತಿ ವೇಷಭೂಷಣ ತೊಟ್ಟಿದ್ದ ಮುಂಬೈನ ರಾಜೇಶ ಕೊಟಾಡಿ, ಇಂದ್ರ-ಇಂದ್ರಾಣಿಯರಾಗಿದ್ದ ನವಲಗುಂದದ ವಿದ್ಯಾಧರ ಪಾಟೀಲ ದಂಪತಿ ಯುವರಾಜನನ್ನು ಸಿಂಹಾಸನದ ಮೇಲೆ ಕೂರಿಸಿ ಬಂಗಾರದ ಹಾರ ಹಾಕಿ, ಮುಕುಟ ತೊಡಿಸಿ ರಾಜ್ಯಾಭಿಷೇಕ ನೆರವೇರಿಸಿದರು. ಇಂದ್ರಾಣಿ ಮತ್ತು ಮಾತೆ ನೂತನ ರಾಜನಿಗೆ ತಿಲಕವಿಟ್ಟು ಆಶೀರ್ವದಿಸಿದರು. ರಾಜನಿಗೆ ವಿಶೇಷವಾಗಿ ಸಿದ್ಧಪಡಿಸಲಾದ 1008 ಖಾದ್ಯಗಳ ನೈವೇದ್ಯ ಅರ್ಪಿಸಲಾಯಿತು.
ನಂತರ ಆಡಳಿತ, ರಾಜ್ಯಭಾರ ನಡೆಸಿ ಲೋಕಾಂತಿಕ ದೇವರ ಆಗಮನ, ಪಾರ್ಶ್ವನಾಥರು ಸನ್ಯಾಸ ದೀಕ್ಷೆ ಸ್ವೀಕರಿಸಲು, ರಾಜ್ಯ ತ್ಯಾಗ ಮಾಡಿ ವಾರಾಣಸಿಗೆ ತೆರಳುವ ದೃಶ್ಯಾವಳಿಗಳನ್ನು ಅಭಿನಯ ಮೂಲಕ ಪ್ರಸ್ತುತಪಡಿಸಲಾಯಿತು. ಹೊಸ ರಾಜನ ರಾಜ್ಯಾಭಿಷೇಕ ಸಂದರ್ಭದಲ್ಲಿ ಕಪ್ಪ-ಕಾಣಿಕೆ ಕೊಡಲು ಆಗಮಿಸಿದ 56 ಜನಪದಗಳ ರಾಜ-ರಾಣಿಯರು ಆಯಾ ಪ್ರದೇಶದ ವೇಷಭೂಷಣ ಧರಿಸಿ, ಅಲ್ಲಿಯ ಪ್ರಾಂತೀಯ ನೃತ್ಯ ಪ್ರದರ್ಶಿಸಿದರು. ನಂತರ ಮಣಿಪುರ, ಕಾಶ್ಮೀರ, ರಾಜಸ್ಥಾನ, ಆಸ್ಸಾಂ ಸೇರಿದಂತೆ ವಿವಿಧ ರಾಜ್ಯದ ಕಲಾವಿದರು ಸಾಂಪ್ರದಾಯಿಕ ನೃತ್ಯ ಪ್ರಸ್ತುತಪಡಿಸಿದರು.ನಂತರ ಪಾರ್ಶ್ವನಾಥರು ವೈರಾಗ್ಯ ಗೀತೆ ಹಿನ್ನೆಲೆಯಲ್ಲಿ ಸನ್ಯಾಸ ಸ್ವೀಕರಿಸಲು ತೆರಳುವ ದುಃಖಭರಿತ ದೃಶ್ಯವು ಎಲ್ಲರ ಮನ ಕರಗಿಸುವಂತೆ ಇತ್ತು. ತಾಯಿ ದೀಕ್ಷೆಗೆ ಅನುಮತಿ ನೀಡಿದ ನಂತರ ಭಗವಾನರು ಕುಳಿತಿದ್ದ ಪಲ್ಲಕ್ಕಿಯ ಯಾತ್ರೆ ನಡೆಯಿತು. ಸೌಧರ್ಮ ಇಂದ್ರ ನಿರ್ಮಿಸಿದ ಚಂದ್ರಕಾಂತ ಶಿಲೆಯ ಮೇಲೆ ಸನ್ಯಾಸ ಸ್ವೀಕರಿಸಿದ ಪಾರ್ಶ್ವನಾಥರಿಗೆ ಇಡೀ ಸಭಾಂಗಣ ಪ್ರಣಾಮ ಸಲ್ಲಿಸಿತು. ಇದೇ ವೇಳೆ ಗುರುದೇವ ಕುಂತುಸಾಗರ ಮಹಾರಾಜರು ತಮ್ಮ ಶಿಷ್ಯ, ವರೂರು ನವಗ್ರಹತೀರ್ಥ ಕ್ಷೇತ್ರದ ರೂವಾರಿ ಆಚಾರ್ಯ ಗುಣಧರ ನಂದಿ ಮಹಾರಾಜರಿಗೆ ಸನ್ಮಾನಿಸಿದರು. ಗುರು ಕುಂತುಸಾಗರ ಮಹಾರಾಜರ ಪಾದಪೂಜೆಯನ್ನು ಶಿಷ್ಯಗಣವು ನೆರವೇರಿಸಿತು. ಆಚಾರ್ಯ ದೇವನಂದಿ ಮಹಾರಾಜರು ಇದ್ದರು.
ಸಮಾರಂಭದಲ್ಲಿ ಪಂ. ಪ್ರತಿಷ್ಠಾಚಾರ್ಯ, ಮೈಸೂರು ಕನಕಗಿರಿಯ ಭುವನಕೀರ್ತಿ ಭಟ್ಟಾರಕರು, ನರಸಿಂಹರಾಜಪುರದ ಲಕ್ಷ್ಮೇಸೇನ ಭಟ್ಟಾರಕರು, ಭಾರತೀಪುರದ ಸಿದ್ಧಾಂತಕೀರ್ತಿ ಮಹಾರಾಜ, ಸೋಂದೆಯ ಭಟ್ಟಾಕಳಂಕ ಮಹಾರಾಜ, ಶಾಂತಿ ಸಾಗರ ಮಹಾರಾಜರು ಹಾಗೂ ಶ್ರಮಣರು, ಶ್ರಾವಕ, ಶ್ರಾವಕಿಯರು, ಜೈನ ಸನ್ಯಾಸಿನಿಯರು ಉಪಸ್ಥಿತರಿದ್ದರು.ಹರಿದು ಬರುತ್ತಿದೆ ಭಕ್ತ ಸಾಗರ:
ವರೂರು ನವಗ್ರಹ ಜೈನ ತೀರ್ಥಕ್ಷೇತ್ರದಲ್ಲಿ ನಡೆಯುತ್ತಿರುವ ಪಂಚಕಲ್ಯಾಣಕ ಮಹೋತ್ಸವ ವೀಕ್ಷಿಸಲು ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಶನಿವಾರ ವಿವಿಧ ರಾಜ್ಯಗಳಿಂದ ಸಾವಿರಾರು ಜನರು ಆಗಮಿಸಿದ್ದರು. ಎಲ್ಲರಿಗೂ ಅಚ್ಚುಕಟ್ಟಾಗಿ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಬೆಳಗ್ಗೆಯಿಂದ ಸಂಜೆ ವರೆಗೆ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.