ಸಾರಾಂಶ
ಚಿಕ್ಕಮಗಳೂರು, ರಾಜ್ಯ ಸರ್ಕಾರ ಅನುಷ್ಟಾನಗೊಳಿಸಿರುವ ಯುವ ನಿಧಿ ಸೌಲಭ್ಯವನ್ನು ಅರ್ಹ ಫಲಾನುಭವಿಗಳು ಕೌಶಲ್ಯಾಭಿವೃದ್ಧಿ ಕಾರ್ಯಗಳಲ್ಲಿ ಹಾಗೂ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಳಸಿಕೊಂಡು ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ ಹೇಳಿದರು.
- ಐಡಿಎಸ್‌ಜಿ ಕಾಲೇಜಿನಲ್ಲಿ ಯುವ ನಿಧಿ ಯೋಜನೆ ನೋಂದಣಿ ಸಪ್ತಾಹ, ಕೌಶಾಲಾಭಿವೃದ್ಧಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುರಾಜ್ಯ ಸರ್ಕಾರ ಅನುಷ್ಟಾನಗೊಳಿಸಿರುವ ಯುವ ನಿಧಿ ಸೌಲಭ್ಯವನ್ನು ಅರ್ಹ ಫಲಾನುಭವಿಗಳು ಕೌಶಲ್ಯಾಭಿವೃದ್ಧಿ ಕಾರ್ಯಗಳಲ್ಲಿ ಹಾಗೂ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಳಸಿಕೊಂಡು ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ ಹೇಳಿದರು.ನಗರದ ಐಡಿಎಸ್‌ಜಿ ಕಾಲೇಜಿನಲ್ಲಿ ಯುವನಿಧಿ ಯೋಜನೆ ನೋಂದಣಿ ಸಪ್ತಾಹ ಹಾಗೂ ಕೌಶಾಲಾಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪದವಿ ನಂತರ ಯುವ ಜನರು ಆರ್ಥಿಕ ತೊಂದರೆ ಎದುರಿಸಬಾರದು ಎಂಬ ಕಾರಣಕ್ಕೆ ಪದವೀಧರರಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಅನೇಕರಿಗೆ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು, ಪುಸ್ತಕ ಖರೀದಿಸಲು ಹಾಗೂ ಇನ್ನಿತರ ಅನುಕೂಲಕ್ಕೆ ಸಹಾಯವಾಗುತ್ತಿದೆ. ನೋಂದಣಿ ಮಾಡಿಕೊಳ್ಳದೇ ಇರುವವರು ತ್ವರಿತವಾಗಿ ನೋಂದಾಯಿಸಿ ಲಾಭ ಪಡೆದುಕೊಳ್ಳಬೇಕು ಎಂದರು.
2023-24 ರಲ್ಲಿ ಪದವಿ, ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೋಮಾ ಉತ್ತೀರ್ಣರಾಗಿ ಕನಿಷ್ಠ 6 ತಿಂಗಳವರೆಗೆ ಸರ್ಕಾರಿ , ಖಾಸಗಿ ಉದ್ಯೋಗ ಆಥವಾ ಸ್ವಯಂ ಉದ್ಯೋಗ ಹೊಂದಿಲ್ಲದವರು, ಉನ್ನತ ವಿದ್ಯಾಭ್ಯಾಸ ಮುಂದುವರಿಸದಿರುವ ಅಭ್ಯರ್ಥಿಗಳು ಸೇವಾಸಿಂಧು ಪೋರ್ಟಲ್ ಮೂಲಕ ನೋಂದಾಯಿಸಬಹುದು ಎಂದು ತಿಳಿಸಿದರು.ಯುವನಿಧಿ ಯೋಜನೆ ಸದ್ಭಳಕೆ ಹಾಗೂ ಯಶಸ್ವಿಗೆ ನೋಂದಣಿ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಜಿಲ್ಲೆಯ ಎಲ್ಲಾ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ ಕಾಲೇಜಿನ ಪ್ರಾಂಶುಪಾಲರು, ಮುಖ್ಯಸ್ಥರು ಸಹಕರಿಸಿ ನಿರುದ್ಯೋಗಿ ಅಭ್ಯರ್ಥಿಗಳನ್ನು ಪ್ರೇರೇಪಿಸಬೇಕು ಎಂದರು.ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ, ಪದವಿ ಹಾಗೂ ಸ್ನಾತಕೋತ್ತರ ಪದವೀಧರರಿಗೆ ಪ್ರತಿ ಮಾಹೆ ₹3 ಸಾವಿರ ಹಾಗೂ ಡಿಪ್ಲೋಮಾ ತೇರ್ಗಡೆಯಾದವರಿಗೆ ₹1,500 ಗಳನ್ನು ನಿರುದ್ಯೋಗ ಭತ್ಯೆಯಾಗಿ ನೋಂದಣಿಯಾದ ಮುಂದಿನ 2 ವರ್ಷಗಳವರೆಗೆ ನೀಡಲಾಗುವುದು ಎಂದು ತಿಳಿಸಿದರು.ವಿದ್ಯಾರ್ಥಿಗಳು ತಮ್ಮ ಕುಟುಂಬದಲ್ಲಿ ಪದವಿ ಪೂರೈಸಿದ ಅಣ್ಣ ತಮ್ಮಂದಿರು, ಅಕ್ಕಪಕ್ಕದ ನಿವಾಸಿಗಳ ಬಳಿ ಯುವನಿಧಿ ಸೌಲಭ್ಯದ ಮಾಹಿತಿ ನೀಡಬೇಕು. ಅರ್ಜಿ ಸಲ್ಲಿಸಲು ಜಿಲ್ಲೆಯ ಪ್ರತಿ ಪದವಿ ಕಾಲೇಜುಗಳಲ್ಲಿ ಉದ್ಯೋಗ ವಿನಿಮಯ ಕೇಂದ್ರ ತೆರೆಯಲಾಗಿದ್ದು, ಅರ್ಜಿ ಸಲ್ಲಿಸಲು ಪ್ರೇರೇಪಿಸಿದರೆ ಆರ್ಥಿಕ ತೊಂದರೆಯಿಂದ ಬಳಲುತ್ತಿರುವ ಯುವ ಸಮೂಹಕ್ಕೆ ಸಹಾಯವಾಗಲಿದೆ ಎಂದು ಹೇಳಿದರು.ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟಾರೆ 8 ಸಾವಿರಕ್ಕೂ ಹೆಚ್ಚು ಯುವನಿಧಿ ಸೌಲಭ್ಯ ಪಡೆದುಕೊಳ್ಳುತ್ತಿದ್ದು ಇನ್ನಷ್ಟು ಯುವಕರಿಗೆ ಪ್ರೇರೇಪಿ ಸುವ ನಿಟ್ಟಿನಲ್ಲಿ ಯುವನಿಧಿ ನೋಂದಣಿ ಸಪ್ತಾಹ ಇಂದಿನಿಂದ ಜ.20 ರವರೆಗೆ ಹಮ್ಮಿಕೊಂಡಿದ್ದು ಪದವಿ ಪೂರೈಸಿದ ಯುವಕರು ಅರ್ಜಿ ಸಲ್ಲಿಸುವ ಮುಖಾಂತರ ಯೋಜನೆ ಸದುಪಯೋಗಪಡೆಯಬೇಕು ಎಂದು ಸಲಹೆ ಮಾಡಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಐಡಿಎಸ್‌ಜಿ ಕಾಲೇಜಿನ ಪ್ರಾಂಶುಪಾಲರಾದ ಪುಷ್ಪಭಾರತಿ ಅವರು, ವಿದ್ಯಾರ್ಥಿಗಳು ಯುವನಿಧಿ ಸೌಲಭ್ಯದ ಸಮಗ್ರ ಮಾಹಿತಿಯನ್ನು ಎಲ್ಲೆಡೆ ಹರಡಿ, ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿರುವ ಯುವಕರಿಗೆ ತಿಳಿಸಿದರೆ ಮಾತ್ರ ಸರ್ಕಾರ ಜಾರಿಗೊಳಿಸಿರುವ ಯೋಜನೆ ಸದ್ಬಳಕೆಯಾದಂತೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ತಾಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಮಲ್ಲೇಶಸ್ವಾಮಿ, ಜಿಲ್ಲಾ ಸದಸ್ಯರಾದ ಆರ್.ಎಂ. ಬಸವರಾಜ್, ಜೇಮ್ಸ್ ಡಿಸೋಜಾ, ಕೌಶಲಾಭಿವೃದ್ಧಿ ಅಧಿಕಾರಿ ಪ್ರಶಾಂತ್, ಉದ್ಯೋಗ ವಿನಿಯಾಧಿಕಾರಿ ಮಂಜುನಾಥ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. 7 ಕೆಸಿಕೆಎಂ 2ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜಿನಲ್ಲಿ ನಡೆದ ಯುವ ನಿಧಿ ಯೋಜನೆ ನೋಂದಣಿ ಸಪ್ತಾಹ ಹಾಗೂ ಕೌಶಾಲಾಭಿವೃದ್ಧಿ ಕಾರ್ಯಕ್ರಮವನ್ನು ಜಿಪಂ ಸಿಇಒ ಕೀರ್ತನಾ ಉದ್ಘಾಟಿಸಿದರು. ಎಂ.ಸಿ. ಶಿವಾನಂದಸ್ವಾಮಿ, ಪುಷ್ಪಾಭಾರತಿ, ಆರ್.ಎಂ. ಬಸವರಾಜ್, ಜೇಮ್ಸ್ ಡಿಸೋಜಾ ಇದ್ದರು.