ಸಾರಾಂಶ
ಗ್ರಾಮೀಣ ಭಾಗಗಳಿಗೆ ಸಂಪರ್ಕ ಕಲ್ಪಿಸಿ ಸಂಚಾರ ಸುಗಮವಾಗಿಸಲು ಈ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಹಾಗೂ ಕರ್ನಾಟಕ ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ತಿಳಿಸಿದರು. ಕೇವಲ ನಗರ, ಪಟ್ಟಣ ಪ್ರದೇಶಗಳ ಜನರಿಗೆ ಮಾತ್ರವಲ್ಲದೆ ಹಳ್ಳಿಗಾಡಿನ ಜನರಿಗೂ ಗುಣಮಟ್ಟದ ರಸ್ತೆ ಬಳಕೆಗೆ ಸಿಗಬೇಕು ಹಾಗೂ ಇದರಿಂದ ಅಪಾರ ಮಂದಿಗೆ ಅನುಕೂಲ ಆಗಬೇಕು ಎಂಬ ಹಿತದೃಷ್ಟಿಯಿಂದ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಗ್ರಾಮೀಣ ಭಾಗಗಳಿಗೆ ಸಂಪರ್ಕ ಕಲ್ಪಿಸಿ ಸಂಚಾರ ಸುಗಮವಾಗಿಸಲು ಈ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಹಾಗೂ ಕರ್ನಾಟಕ ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ತಿಳಿಸಿದರು.ಲೋಕೋಪಯೋಗಿ ಇಲಾಖೆಯ ವತಿಯಿಂದ ರು. 5 ಕೋಟಿ ವೆಚ್ಚದಲ್ಲಿ ಅರಸೀಕೆರೆ- ತಿಪಟೂರು ರಸ್ತೆಯಿಂದ ತಾಲೂಕಿನ ಯಡುವನಹಳ್ಳಿ ಮಾರ್ಗ ಚಿಂದನೇಹಳ್ಳಿ ಗಡಿವರಗೆ ರಸ್ತೆ ಡಾಂಬರೀಕರಣ ಕಾಮಗಾರಿಗೆ ಗಂಡಸಿ ಗೋಬಳಿ ಯಡುನಹಳ್ಳಿ ಗ್ರಾಮದಲ್ಲಿ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಕೇವಲ ನಗರ, ಪಟ್ಟಣ ಪ್ರದೇಶಗಳ ಜನರಿಗೆ ಮಾತ್ರವಲ್ಲದೆ ಹಳ್ಳಿಗಾಡಿನ ಜನರಿಗೂ ಗುಣಮಟ್ಟದ ರಸ್ತೆ ಬಳಕೆಗೆ ಸಿಗಬೇಕು ಹಾಗೂ ಇದರಿಂದ ಅಪಾರ ಮಂದಿಗೆ ಅನುಕೂಲ ಆಗಬೇಕು ಎಂಬ ಹಿತದೃಷ್ಟಿಯಿಂದ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ತಮ್ಮ ಅವಧಿಯಲ್ಲಿ ಇಡೀ ತಾಲೂಕು, ಕ್ಷೇತ್ರದಾದ್ಯಂತ ಗುಣಮಟ್ಟದ ರಸ್ತೆ, ಕುಡಿಯುವ ನೀರು, ಸಮುದಾಯ ಭವನ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ.ಕ್ಷೇತ್ರದ ಜನರಿಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಸಿಗಬೇಕು ಎಂಬುದು ನನ್ನ ಆಶಯ ಎಂದು ಹೇಳಿದರು.ಮುಖಂಡರಾದ ಮಲ್ಲೇನಹಳ್ಳಿ ಶಿವಶಂಕರಸ್ವಾಮಿ ಮಾತನಾಡಿ ಪ್ರತಿಯೊಂದು ಸಣ್ಣ ಪುಟ್ಟ ಸಮಾಜಗಳನ್ನ ಗುರುತಿಸಿ ಆ ಸಮಾಜಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶಾಸಕ ಶಿವಲಿಂಗೇಗೌಡರ ಕಾರ್ಯವೈಖರಿ ಸಹಜವಾಗಿಯೇ ಎಲ್ಲರ ಮೆಚ್ಚುಗೆಗೆ ಕಾರಣವಾಗಿರುವುದಲ್ಲದೆ ಯುವ ರಾಜಕಾರಣಿಗಳಿಗೆ ಆದರ್ಶವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಲ್ಲಾಪುರ ಮಂಜುರಾಜು, ಹುಲ್ಲೆಕೆರೆ ರೂಪೇಶ್, ಯಡುವನಹಳ್ಳಿ ಯತೀಶ ಎ.ಇ.ಇ ಮುನಿರಾಜು, ಗುತ್ತಿಗೆದಾರ ಜ್ಞಾನೇಶ್ ಹಾಗೂ ಗ್ರಾಮಸ್ಥರು ಹಾಜರಿದ್ದರು.