ಜನಜಾಗೃತಿಗಾಗಿ ಚೆಸ್ ಸ್ಪರ್ಧೆ

ಕನ್ನಡಪ್ರಭ ವಾರ್ತೆ ಕಾರವಾರ

ಅರ್ಹರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ದೋಷರಹಿತ ಮತದಾರರ ಪಟ್ಟಿ ತಯಾರಿಸುವ ನಿಟ್ಟಿನಲ್ಲಿ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ-2026 ಆರಂಭಿಸಲಾಗಿದೆ. ಎಸ್ಐಆರ್ ಎಂದರೇನು, ಯಾಕೆ ಕೈಗೊಳ್ಳಲಾಗುತ್ತಿದೆ, ನಾಗರಿಕರಿಗೆ ಅದರಿಂದ ಆಗುವ ಪ್ರಯೋಜನವೇನು, ಈ ಪ್ರಕ್ರಿಯೆ ಹೇಗೆ ನಡೆಸಲಾಗುತ್ತಿದೆ ಎಂಬುದರ ಬಗ್ಗೆ ಅತ್ಯಂತ ಸರಳವಾಗಿ ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷ ಡಾ. ದಿಲೀಷ್ ಶಶಿ ಪಾಠ ಮಾಡಿದರು.

ಜಿಲ್ಲಾ ಆಡಳಿತ, ಜಿಪಂ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ 2026ರ ಅಂಗವಾಗಿ ಆಯೋಜಿಸಲಾಗಿದ್ದ ಚದುರಂಗ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಭವಿಷ್ಯದ ಪ್ರಜೆಗಳಾದ ಮಕ್ಕಳು ಎಸ್ಐಆರ್ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡಿರಬೇಕು. ನಿಮ್ಮ ಪಾಲಕರಿಗೆ ಅಥವಾ ನೆರೆಹೊರೆಯವರಿಗೆ ಎಸ್ಐಆರ್ ಬಗ್ಗೆ ಏನಾದರೂ ಗೊಂದಲವಿದ್ದರೆ ನೀವು ಸಹಾಯ ಮಾಡಬೇಕು. ಅಗತ್ಯ ಮಾಹಿತಿಯನ್ನು ತಿಳಿಸಿ ಹೇಳಬೇಕು ಎಂದರು.


ಎಸ್ಐಆರ್ ಕುರಿತು ವ್ಯಾಪಕ ಜನಜಾಗೃತಿ ಮೂಡಿಸಲು ಸ್ವೀಪ್ ಸಮಿತಿಯಿಂದ ಇನ್ನೂ ಹೆಚ್ಚಿನ ಚಟುವಟಿಕೆ ಕೈಗೊಳ್ಳಲಾಗುತ್ತಿದ್ದು, ತಾವೆಲ್ಲರೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಗಳು ಮಾತ್ರವಲ್ಲದೆ ಎಸ್ಐಆರ್ ಪ್ರಕ್ರಿಯೆಯನ್ನು ಯಶಸ್ವಿಗೊಳಿಸುವಲ್ಲಿ ಸಹಕರಿಸಬೇಕು ಎಂದರು.

ಸ್ಪರ್ಧೆಯಲ್ಲಿ 33 ಜನ ವಿದ್ಯಾರ್ಥಿಗಳು ಭಾಗವಹಿಸಿದ್ದು, ವಿಜೇತರಿಗೆ 28ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡುವುದಾಗಿ ಆಯೋಜಕರು ತಿಳಿಸಿದರು.

ಜಿಪಂ ಯೋಜನಾ ನಿರ್ದೇಶಕ ಕರೀಂ ಅಸದಿ, ಮುಖ್ಯ ಯೋಜನಾಧಿಕಾರಿ ಸೋಮಶೇಖರ್ ಮೆಸ್ತಾ, ಮುಖ್ಯ ಲೆಕ್ಕಾಧಿಕಾರಿ ಆನಂದಸಾ ಹಬೀಬ್, ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸತೀಶ್ ನಾಯ್ಕ, ಯುವ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರವಿ‌ ನಾಯಕ, ಚೆಸ್ ನಿರ್ಣಾಯಕ ಚೆಸ್ ಫಿಡೆ ಆರ್ಬಿಟರ್ ಆನಂದ ಸ್ವಾಮಿ ಇದ್ದರು.