‘ಮಂಡ್ಯ ಲೋಕಸಭಾ ಕ್ಷೇತ್ರದಿಂದ ಎಚ್‌ಡಿಕೆ ಅಥವಾ ನಿಖಿಲ್ ಅಭ್ಯರ್ಥಿಯಾಗಲಿ’

| Published : Mar 16 2024, 01:45 AM IST

ಸಾರಾಂಶ

ಜೆಡಿಎಸ್ ಕಾರ್ಯಕರ್ತರ ಸಭೆ ಆರಂಭವಾದ ಸಮಯದಲ್ಲೇ ಅಭ್ಯರ್ಥಿ ವಿಷಯವಾಗಿ ಕಾರ್ಯಕರ್ತರು ಕೂಗೆತ್ತಿದರು. ಸ್ವಾಗತ ಭಾಷಣಕ್ಕೂ ಅವಕಾಶ ನೀಡದೆ ನಿಮ್ಮ ನಿರ್ಧಾರವನ್ನು ಇಲ್ಲೇ, ಈಗಲೇ ಪ್ರಕಟಿಸಬೇಕೆಂದು ಒತ್ತಾಯಿಸಿದರು. ಇದರಿಂದ ಸಭೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ನಾಯಕರು ಎಷ್ಟೇ ಸಮಾಧಾನ ಮಾಡಿದರೂ ಕಾರ್ಯಕರ್ತರ ಘೋಷಣೆ ಕೂಗುತ್ತಲೇ ಇದ್ದರು. ನಿಮ್ಮಿಬ್ಬರಲ್ಲಿ ಒಬ್ಬರು ಅಭ್ಯರ್ಥಿಯಾಗಲೇಬೇಕೆಂದು ಪಟ್ಟು ಹಿಡಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಥವಾ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿಯಾಗಬೇಕು ಎಂಬ ಕೂಗು ನೆರೆದಿದ್ದ ನೂರಾರು ಕಾರ್ಯಕರ್ತರಿಂದ ಒಕ್ಕೊರಲಿನಿಂದ ಕೇಳಿಬಂದಿತು.

ನಗರದ ಅಂಬೇಡ್ಕರ್ ಭವನದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ಆರಂಭವಾದ ಸಮಯದಲ್ಲೇ ಅಭ್ಯರ್ಥಿ ವಿಷಯವಾಗಿ ಕಾರ್ಯಕರ್ತರು ಕೂಗೆತ್ತಿದರು. ಕುಮಾರಸ್ವಾಮಿ ಅಥವಾ ನಿಖಿಲ್ ಇಬ್ಬರಲ್ಲಿ ಒಬ್ಬರು ಅಭ್ಯರ್ಥಿಯಾಗಬೇಕು. ನಾವೆಲ್ಲರೂ ನೀವು ಕೇವಲ ಅರ್ಜಿ ಹಾಕಿ ಹೋಗಿ. ನಾವು ಪ್ರಚಾರ ಮಾಡಿ ನಿಮ್ಮನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಕೂಗಿ ಹೇಳಿದರು.

ಸ್ವಾಗತ ಭಾಷಣಕ್ಕೂ ಅವಕಾಶ ನೀಡದೆ ನಿಮ್ಮ ನಿರ್ಧಾರವನ್ನು ಇಲ್ಲೇ, ಈಗಲೇ ಪ್ರಕಟಿಸಬೇಕೆಂದು ಒತ್ತಾಯಿಸಿದರು. ಇದರಿಂದ ಸಭೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ನಾಯಕರು ಎಷ್ಟೇ ಸಮಾಧಾನ ಮಾಡಿದರೂ ಕಾರ್ಯಕರ್ತರ ಘೋಷಣೆ ಕೂಗುತ್ತಲೇ ಇದ್ದರು. ನಿಮ್ಮಿಬ್ಬರಲ್ಲಿ ಒಬ್ಬರು ಅಭ್ಯರ್ಥಿಯಾಗಲೇಬೇಕೆಂದು ಪಟ್ಟು ಹಿಡಿದರು.

ಕಾರ್ಯಕರ್ತರನ್ನು ಸಮಾಧಾನ ಮಾಡಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಉಳಿದಿದೆ ಎಂದರೆ ಅದು ನಿಮ್ಮ ಶ್ರಮದಿಂದ. ಯಾವುದೇ ಕಾರಣಕ್ಕೂ ನಿಮ್ಮ ಶ್ರಮ ವ್ಯರ್ಥವಾಗಲು ಬಿಡುವುದಿಲ್ಲ. ನಿಮ್ಮ ಶ್ರಮಕ್ಕೆ ತಕ್ಕ ಫಲವನ್ನು ನಾವು ನೀಡುತ್ತೇವೆ ಎಂದರು.

ನಾವು ಚುನಾವಣೆ ವೇಳೆ ಮಾತ್ರ ಜನರನ್ನೂ ನೆನಪು ಮಾಡಿಕೊಳ್ಳಲ್ಲ. ದೇವೇಗೌಡರು ೯೧ನೇ ವಯಸ್ಸಿನಲ್ಲಿ ರಾಜ್ಯ ಸಭೆಯಲ್ಲಿ ಮಾತನಾಡುತ್ತಿದ್ದಾರೆ. ಅವರ ೬೧ ವರ್ಷದ ರಾಜಕೀಯ ಜೀವನದಲ್ಲಿ ಶಕ್ತಿ ನೀಡಿರೋದು ಮಂಡ್ಯ ಜಿಲ್ಲೆ. ಇಂದಿನ ಸಭೆಯಲ್ಲಿ ನಿಮ್ಮ ಅಭಿಪ್ರಾಯವನ್ನು ಕೇಳುತ್ತೇವೆ. ಈ ಚುನಾವಣೆಯ ಬಗ್ಗೆ ನಿಮ್ಮ ಭಾವನೆಗಳು ನನಗೆ ಗೊತ್ತಿದೆ. ಅದನ್ನು ಅರ್ಥ ಮಾಡಿಕೊಂಡೇ ಅನಾರೋಗ್ಯದ ನಡುವೆಯೂ ನಾನು ಇಂದು ಸಭೆಗೆ ಬಂದಿದ್ದೇನೆ ಎಂದರು.

ಹಾಸನದಲ್ಲೂ ಏನು ವ್ಯತ್ಯಾಸ ಆಗಬಾರದು ಎಂದು ಅಲ್ಲಿಗೂ ಹೋಗಿದ್ದೆ. ಅಲ್ಲಿ ಸರಿಪಡಿಸುವ ಕೆಲಸ ಮಾಡಿದ್ದೇನೆ. ಮಂಡ್ಯ ಜನರು ಜೆಡಿಎಸ್ ಪಕ್ಷನ್ನು ಉಳಿಸಿದ್ದಾರೆ. ಮಂಡ್ಯ ಜಿಲ್ಲೆಯನ್ನು ಎಂಪಿ ಚುನಾವಣೆಯಲ್ಲಿ ಸೋತರೆ ನಾವು ಇದ್ದು ಸತ್ತ ಹಾಗೆ.

ನಿಮ್ಮ ಎಲ್ಲ ವಿಷಯಗಳನ್ನು ನಾನು ಪ್ರಸ್ತಾಪ ಮಾಡುತ್ತೇನೆ. ನಿಮಗೆ ನಾನು ನಿರಾಸೆ ಮಾಡುವುದಿಲ್ಲ. ಕೊನೆಯಲ್ಲಿ ಎಲ್ಲವನ್ನೂ ಹೇಳುತ್ತೇನೆ. ಜೆಡಿಎಸ್ ಮುಗಿಸಿದೋ ಎನ್ನುವವರಿಗೆ ನೀವೇ ಉತ್ತರ ನೀಡಬೇಕು ಎಂದು ಕರೆ ಕೊಟ್ಟರು.

ಅಭ್ಯರ್ಥಿ ಘೋಷಣೆ ಮಾಡದ ಬಗ್ಗೆ ಕಾರ್ಯಕರ್ತರಲ್ಲಿ ಗೊಂದಲ ಇದೆ. ಮಂಡ್ಯ ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಹಲವರಲ್ಲಿದೆ. ಇಂದಿನ ನಿಮ್ಮ ಉತ್ಸಾಹ, ಪ್ರೀತಿ, ವಿಶ್ವಾಸ ಕಾಳಜಿಯಿಂದ ಸಭೆ ತುಂಬಿದೆ. ಇಂದಿನ ಸಭೆಯಲ್ಲಿ ನಾವು ಸಂದೇಶ ಕೊಡೋದಕ್ಕಿಂತ, ನೀವು ಸಂದೇಶ ಕೊಟ್ಟಿದ್ದೀರಿ. ಈ ಸಭೆಗೆ ಬಂದಾಗ ನಿಮ್ಮ ಕೂಗು ಕೇಳಿದ್ದೇವೆ. ನಾನು ಅಥವಾ ನಿಖಿಲ್ ಸ್ಪರ್ಧಿಸುವ ನಿಮ್ಮ ಮಾತಿಗೆ ಶಿರಸಭಾಗಿ ನಮಸ್ಕಾರ ಮಾಡುತ್ತೇನೆ. ನಿಮ್ಮ ಮಾತಿಗೆ ಅಪಚಾರ ಮಾಡಲು ಹೋಗುವುದಿಲ್ಲ . ನಿಮ್ಮ ಆಸೆಗೆ ನಾವು ಭಂಗ ತರಲ್ಲ. ನಿಖಿಲ್ ಕುಮಾರಸ್ವಾಮಿ ಅವರಿಗೂ ಒಂದು ಮಾತು ಹೇಳುತ್ತೇನೆ. ನಿಮ್ಮ ಭಾವನೆಗಳಿಗೆ ಯಾವುದೇ ಕಾರಣಕ್ಕೂ ನಿರಾಸೆಯಾಗುವುದಿಲ್ಲ. ನಿಮ್ಮ ಆಸೆ ಏನಿದೆಯೋ ಅದನ್ನು ನೇರವೇರಿಸಿಕೊಳ್ಳುತ್ತೇನೆ ಎಂದು ಅಭ್ಯರ್ಥಿ ಆಯ್ಕೆ ಬಗೆಗಿನ ಕುತೂಹಲವನ್ನು ಕಾಯ್ದಿರಿಸಿದರು.