ಸಾರಾಂಶ
ರಾಜ್ಯದ 20 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದ ಬೆನ್ನ ಹಿಂದೆಯೇ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಿದೆ.
ಕನ್ನಡಪ್ರಭ ವಾರ್ತೆ ಕೊಪ್ಪಳ/ದಾವಣಗೆರೆ/ಶಿವಮೊಗ್ಗ
ರಾಜ್ಯದ 20 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದ ಬೆನ್ನ ಹಿಂದೆಯೇ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಿದೆ.
ಕೊಪ್ಪಳದಲ್ಲಿ ಸಂಸದ ಕರಡಿ ಸಂಗಣ್ಣ ಅವರಿಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಅವರ ಬೆಂಬಲಿಗರು ಅಭ್ಯರ್ಥಿ ಡಾ.ಕೆ.ಬಸವರಾಜ ಅವರ ಸುದ್ದಿಗೋಷ್ಠಿಗೆ ಅಡ್ಡಿಪಡಿಸಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಕ್ಷದ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿ, ಕಚೇರಿಯಲ್ಲಿನ ಕಿಟಕಿ ಗ್ಲಾಸ್‌ಗಳನ್ನು ಪುಡಿಪುಡಿ ಮಾಡಿದ್ದಾರೆ.
ಇದೇ ವೇಳೆ, ದಾವಣಗೆರೆಯಲ್ಲಿ ಸಿದ್ದೇಶ್ವರ ಪತ್ನಿಗೆ ಟಿಕೆಟ್ ಸಿಕ್ಕಿದ್ದಕ್ಕೆ ಅಸಮಾಧಾನಗೊಂಡಿರುವ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ಮಾಜಿ ಸಚಿವ ಎಸ್.ಎ.ರವೀಂದ್ರನಾಥ ನಿವಾಸದಲ್ಲಿ ಬೆಂಬಲಿಗರ ಸಭೆ ನಡೆಸಿದ್ದಾರೆ.
ಈ ವೇಳೆ, ಅವರ ಬೆಂಬಲಿಗನೊಬ್ಬ ಮೈಮೇಲೆ ಪೆಟ್ರೋಲ್ ಸುರಿದುಕೊಂಡು, ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆದಿದೆ. ಈ ಮಧ್ಯೆ, ಪುತ್ರ ಕಾಂತೇಶ್‌ಗೆ ಹಾವೇರಿಯಿಂದ ಟಿಕೆಟ್ ತಪ್ಪಿದ್ದಕ್ಕೆ ಅಸಮಾಧಾನಗೊಂಡಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಶಿವಮೊಗ್ಗದಲ್ಲಿ ಶುಕ್ರವಾರ ಬೆಂಬಲಿಗರ ಸಭೆ ಕರೆದಿದ್ದಾರೆ.
ಕೊಪ್ಪಳದಲ್ಲಿ ಕರಡಿ ಬೆಂಬಲಿಗರ ದಾಂಧಲೆ: ಟಿಕೆಟ್ ಘೋಷಣೆ ಬೆನ್ನಲ್ಲೇ ಕೊಪ್ಪಳ ಅಭ್ಯರ್ಥಿ ಡಾ.ಕೆ.ಬಸವರಾಜ ಅವರು ಶಾಸಕ ದೊಡ್ಡನಗೌಡ ಪಾಟೀಲ ಜತೆಗೆ ಗುರುವಾರ ಬೆಳಗ್ಗೆ ಕರಡಿ ಸಂಗಣ್ಣ ಮನೆಗೆ ಆಗಮಿಸಿದ್ದರು.
ಆಗ ಅವರ ಭೇಟಿಗೆ ಅಡ್ಡಿಪಡಿಸಿದ ಬೆಂಬಲಿಗರು, ಗೋ ಬ್ಯಾಕ್ ಡಾ.ಬಸವರಾಜ ಎಂದು ಕಿಡಿಕಾರಿದರು. ಇದರಿಂದಾಗಿ ಅವರು ಸಂಗಣ್ಣ ಅವರನ್ನು ಭೇಟಿ ಮಾಡದೆ ವಾಪಸ್ ತೆರಳಿದರು.
ಬಳಿಕ, ಪಕ್ಷದ ಕಚೇರಿಯಲ್ಲಿ ಬಸವರಾಜ ಅವರು ನಡೆಸುತ್ತಿದ್ದ ಸುದ್ದಿಗೋಷ್ಠಿಗೆ ಅಡ್ಡಿಪಡಿಸಿದ ಸಂಗಣ್ಣ ಬೆಂಬಲಿಗರು, ಕಚೇರಿಗೆ ನುಗ್ಗಿ ಕಲ್ಲು ತೂರಾಟ ನಡೆಸಿದರು. ಈ ವೇಳೆ, ಕಿಟಕಿಯ ಗಾಜುಗಳು ಪುಡಿಪುಡಿಯಾಗಿದ್ದು, ಭಾರತ ಮಾತೆಯ ಫೋಟೋ ಕೂಡ ಒಡೆದು ಹೋಗಿದೆ.
ಈ ಮಧ್ಯೆ, ಸಂಸದ ಸಂಗಣ್ಣ ಕರಡಿಯವರು ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದಾಗ, ಅವರ ಪಕ್ಕದಲ್ಲೇ ಇದ್ದ ಎಂಎಲ್ಸಿ ಹೇಮಲತಾ ನಾಯಕಗೆ, ಟಿಕೆಟ್ ಘೋಷಣೆಯಾಗಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸ್ವಾಗತ ಕೋರಿದ್ದೀರಿ.
ಇಲ್ಲಿಂದ ಎದ್ದು ಹೋಗಿ ಎಂದು ಸಂಗಣ್ಣ ಬೆಂಬಲಿಗನೊಬ್ಬ ಆವಾಜ್ ಹಾಕಿದ. ಈ ವೇಳೆ, ಜಾಸ್ತಿ ಮಾತನಾಡಿದರೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂದು ಹೇಮಲತಾ ಹೇಳಿದಾಗ ಮಾತಿನ ಚಕಮಕಿ ಕೂಡ ನಡೆಯಿತು.
ಇದೇ ವೇಳೆ, ದಾವಣಗೆರೆಯಿಂದ ಸಿದ್ದೇಶ್ವರ ಪತ್ನಿಗೆ ಟಿಕೆಟ್ ನೀಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ದಾವಣಗೆರೆ ತಾಲೂಕಿನ ಶಿರಮಗೊಂಡನಹಳ್ಳಿ ಗ್ರಾಮದಲ್ಲಿ ಮಾಜಿ ಸಚಿವ ಎಸ್.ಎ.ರವೀಂದ್ರನಾಥ ನಿವಾಸದಲ್ಲಿ ಬೆಂಬಲಿಗರ ಸಭೆ ನಡೆಸಿದರು.
ಸಭೆಯಲ್ಲಿ ಮತ್ತೊಮ್ಮೆ ಕಾರ್ಯಕರ್ತರ ಸಭೆ ಮಾಡಿ, ಮುಂದಿನ ತೀರ್ಮಾನ ಕೈಗೊಳ್ಳುವ ನಿರ್ಧಾರಕ್ಕೆ ಬರಲಾಯಿತು. ಈ ವೇಳೆ, ರೇಣುಕಾಚಾರ್ಯ ಅವರ ಬೆಂಬಲಿಗನೊಬ್ಬ ಮೈಮೇಲೆ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಮುಂದಾಗಿದ್ದು, ತಕ್ಷಣ ಸುತ್ತಮುತ್ತಲಿನವರು ನೀರು ಸುರಿದು, ಹೆಚ್ಚಿನ ಅನಾಹುತ ತಪ್ಪಿಸಿದರು.
ಈ ಮಧ್ಯೆ, ತಮ್ಮ ಪುತ್ರನಿಗೆ ಹಾವೇರಿಯಿಂದ ಟಿಕೆಟ್ ತಪ್ಪಿದ ಬೆನ್ನಲ್ಲೆ ಬಿಜೆಪಿ ಪಕ್ಷದ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಶುಕ್ರವಾರ ಸಂಜೆ ಶಿವಮೊಗ್ಗದಲ್ಲಿ ತಮ್ಮ ಬೆಂಬಲಿಗರ ಸಭೆ ಕರೆದಿದ್ದಾರೆ. ಪಕ್ಷೇತರರಾಗಿ ಕಣಕ್ಕಿಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ.