ರಾಜ್ಯಪಾಲರಿಂದ ಪ್ರಜಾಪ್ರಭುತ್ವದ ಕಗ್ಗೊಲೆ-ಕೇಂದ್ರ ಸರ್ಕಾರದ ಕೈಗೊಂಬೆ : ಕಾಂಗ್ರೆಸ್‌ ಆರೋಪ

| Published : Aug 20 2024, 12:52 AM IST / Updated: Aug 20 2024, 04:21 AM IST

ರಾಜ್ಯಪಾಲರಿಂದ ಪ್ರಜಾಪ್ರಭುತ್ವದ ಕಗ್ಗೊಲೆ-ಕೇಂದ್ರ ಸರ್ಕಾರದ ಕೈಗೊಂಬೆ : ಕಾಂಗ್ರೆಸ್‌ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಮತ್ತು ಬಿಜೆಪಿ ಹಾಗೂ ಜೆಡಿಎಸ್ ಅಣತಿಯಂತೆಲಸ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಬಹುಮತ ಪಡೆದ ಕಾಂಗ್ರೆಸ್ ಸರ್ಕಾರವನ್ನು ಕಾನೂನು ಬಾಹಿರವಾಗಿ ಅಭದ್ರಗೊಳಿಸುವ ಹುನ್ನಾರ ನಡೆದಿದೆ ಎಂಬುದು ಕಾಂಗ್ರೆಸ್‌ ಆರೋಪ

 ಚಿಕ್ಕಬಳ್ಳಾಪುರ : ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್‌ ಅವರ ನಡೆ ಸಂವಿಧಾನ ವಿರೋಧಿಯಾಗಿದ್ದು, ಇದು ಪ್ರಜಾಪ್ರಭುತ್ವದ ಕಗ್ಗೊಲೆ. ತಕ್ಷಣವೇ ಪ್ರಾಸಿಕ್ಯೂಶನ್ ಅನುಮತಿಯನ್ನು ವಾಪಸ್ ಪಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್‌ ಆಗ್ರಹಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ನಗರದಲ್ಲಿ ಸೋಮವಾರ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಬೃಹತ್ ಪ್ರತಿಭಟನೆಯಲ್ಲಿ ಸಚಿವರು ಮಾತನಾಡಿದರು.

ಕೇಂದ್ರ ಸರ್ಕಾರದ ಕೈಗೊಂಬೆ

ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಮತ್ತು ಬಿಜೆಪಿ ಹಾಗೂ ಜೆಡಿಎಸ್ ಅಣತಿಯಂತೆಲಸ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಬಹುಮತ ಪಡೆದ ಕಾಂಗ್ರೆಸ್ ಸರ್ಕಾರವನ್ನು ಕಾನೂನು ಬಾಹಿರವಾಗಿ ಅಭದ್ರಗೊಳಿಸುವ ಹುನ್ನಾರ ನಡೆದಿದೆ. ಯಾವುದೇ ಕಪ್ಪು ಚುಕ್ಕೆ ಇಲ್ಲದ ಸಿದ್ದರಾಮಯ್ಯ ವಿರುದ್ಧ ವಿನಾಕಾರಣ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾಗಿರುವ ಮೂಡಾ ನಿವೇಶನದ ಆರೋಪವನ್ನು ಮಾಡುತ್ತಿದ್ದಾರೆ. ಬಡವರ ಬಗ್ಗೆ ಅಪಾರ ಕಾಳಜಿ ಇರುವ ಜನಪರ ಮುಖ್ಯಮಂತ್ರಿ ಸಿದ್ದರಾಮಯ್ಯರ 45 ವರ್ಷಗಳ ಕಳಂಕ ರಹಿತ ರಾಜಕೀಯ ಜೀವನಕ್ಕೆ ಮಸಿ ಬಳಿಯಳೆತ್ನಿಸುತ್ತಿದ್ದಾರೆ. ಅವರ ಪರವಾಗಿ ಹೈಕಮಾಂಡ್ ಮತ್ತು ಕರ್ನಾಟಕದ ಜನತೆ ಇದೆ ಎಂದು ಅಭಯ ನೀಡಿದರು.ಕಾನೂನು ಹೋರಾಟ:

ಈ ಗಾಗಲೇ ನಾಲ್ಕು ಪ್ರಕರಣಗಳು ರಾಜ್ಯಪಾಲರ ಅಂಗಳದಲ್ಲಿ ಇವೆ. ಕೇಂದ್ರ ಮಂತ್ರಿ ಎಚ್‌ಡಿ.ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾನಿ, ಜನಾರ್ದನ ರೆಡ್ಡಿ ರವರ ಬಗ್ಗೆ ಲೋಕಾಯುಕ್ತ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿದ್ದರೂ ಗಾಡನಿದ್ರೆಯಲ್ಲಿದ್ದಂತಹ ರಾಜ್ಯಪಾಲರು, ಈಗ ದಿಢೀರನೇ ಮುಖ್ಯಮಂತ್ರಿ ವಿರುದ್ಧ ಒಬ್ಬ ಖಾಸಗಿ ವ್ಯಕ್ತಿ ನೀಡಿದ ದೂರು ಆಧರಿಸಿ ನಿಯಮಾವಳಿಗಳಿಗೆ ವಿರುದ್ಧವಾಗಿ ಪ್ರಾಸಿಕ್ಯೂಷನ್ ಗೆ ಆದೇಶಿರುವುದು ಸರಿಯಲ್ಲ. ಇದರ ಬಗ್ಗೆ ಕಾನೂನಿನ ಹೋರಾಟ ಮಾಡುತ್ತೇವೆ ಎಂದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನ ನೀಡುವ ಮೂಲಕ ರಾಜ್ಯದ ಜನತೆ ಸ್ಪಷ್ಟ ಬಹುಮತ ನೀಡಿದ್ದಾರೆ. ಐದು ಗ್ಯಾರಂಟಿ ಯೋಜನೆಗಳನ್ನು ಸಿದ್ದರಾಮಯ್ಯ ಅವರು ಯಶಸ್ವಿಯಾಗಿ ಜಾರಿಗೊಳಿಸಿರುವುದನ್ನು ಸಹಿಸಿಕೊಳ್ಳಲು ಬಿಜೆಪಿಯವರಿಗೆ ಸಾಧ್ಯವಾಗುತ್ತಿಲ್ಲ. ಅವರ ಜನಪ್ರಿಯತೆಗೆ ಕುಂದು ತರುವ ದುರುದ್ದೇಶದಿಂದಲೆ ಬಿಜೆಪಿಯವರು ರಾಜಭವನದ ಮೂಲಕ ಷಡ್ಯಂತ್ರ ನಡೆಸಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್‌ ಬೃಹತ್‌ ಮೆರವಣಿಗೆ ನಗರದವಕ್ಕಲಿಗರ ಕಲ್ಯಾಣ ಮಂಟಪದಿಂದ ಮೆರವಣಿಗೆ ಹೊರಟ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌ ಹಾಗೂ ಬಿಜೆಪಿ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು. ನಗರದ ಬಿ.ಬಿ.ರಸ್ತೆಯಲ್ಲಿ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಡಾ.ಬಿ.ಆರ್.ಅಂಭೇಡ್ಕರ್ ವೃತ್ತಕ್ಕೆ ಬಂದು ಗೋ ಬ್ಯಾಕ್ ರಾಜ್ಯಪಾಲ ಎಂದು ಧಿಕ್ಕಾರಗಳನ್ನು ಕೂಗಿದರು. ಕೆಲ ಯುವ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಅರೆ ಬೆತ್ತಲೆ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಶಾಸಕ ಕೆ.ಹೆಚ್.ಪುಟ್ಟಸ್ವಾಮಿ ಗೌಡ, ವಿಧಾನ ಪರಿಷತ್ ಸದಸ್ಯರಾದ ಎಂ.ಆರ್.ಸೀತಾರಾಮ್, ಶ್ರೀನಿವಾಸ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಎಐವೈಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್.ರಕ್ಷಾರಾಮಯ್ಯ, ಕೆಪಿಸಿಸಿ ಕಾರ್ಯದರ್ಶಿ ಉದಯ್ ಕುಮಾರ್, ಮಾಜಿ ಶಾಸಕರಾದ ವಿ.ಮುನಿಯಪ್ಪ,ಕೆ.ಪಿ. ಬಚ್ಚೇಗೌಡ, ಎಸ್.ಎಂ.ಮುನಿಯಪ್ಪ, ಅನಸೂಯಮ್ಮ, ಮುಖಂಡರಾದ ಪಿ.ರಾಜೀವ್ ಗೌಡ, ಪುಟ್ಟು ಆಂಜಿನಪ್ಪ,ಎಸ್.ಎಂ.ರಫೀಕ್, ಗಂಗರೇಕಾಲುವೆ ನಾರಾಯಣಸ್ವಾಮಿ, ಎಂ.ಆಂಜಿನಪ್ಪ, ಅಡ್ಡಗಲ್ ಶ್ರೀಧರ್,ಆವುಲಪ್ಪ, ಮತ್ತಿತರರು ಇದ್ದರು.