ಸಾರಾಂಶ
ಮುಡಾ ಪ್ರಕರಣದಲ್ಲಿ ಸಿಎಂ ರಾಜೀನಾಮೆ ನೀಡುವ ಪ್ರಶ್ನೆಯೇ ಹುಟ್ಟುವುದಿಲ್ಲ. ಇದು ಸಿದ್ದರಾಮಯ್ಯ ವಿರೋಧಿಗಳ ಷಡ್ಯಂತ್ರ ಅಷ್ಟೇ ಎಂದು ಸಚಿವ ಎಚ್.ಕೆ. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.
ಹುಬ್ಬಳ್ಳಿ: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈವಾಡವಿದೆ ಎಂಬ ಆರೋಪ ಬಿಜೆಪಿ ನಾಯಕರ, ಸಿದ್ದರಾಮಯ್ಯ ವಿರೋಧಿಗಳ ಷಡ್ಯಂತ್ರ ಅಷ್ಟೇ. ಈ ಪ್ರಕರಣದಲ್ಲಿ ಸಿಎಂ ರಾಜೀನಾಮೆ ನೀಡುವ ಪ್ರಶ್ನೆಯೇ ಹುಟ್ಟುವುದಿಲ್ಲ ಎಂದು ಸಚಿವ ಎಚ್.ಕೆ. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯಪಾಲರು ಅಸಂವಿಧಾನಿಕವಾಗಿ ಪ್ರಾಸಿಕ್ಯೂಷನ್‌ಗೆ ಪರವಾನಗಿ ನೀಡಿದ್ದಾರೆ. ಇದು ರಾಜಕೀಯ ಪ್ರೇರಿತ. ರಾಜ್ಯಪಾಲರದ್ದು ಅನ್ಯಾಯದ ಕ್ರಮ. ಇದನ್ನು ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು. 10 ದಿನ ತಡೆಯಿರಿ ಸರ್ಕಾರ ಉಳಿಯುವುದಿಲ್ಲ ಎಂಬ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಪ್ರಹ್ಲಾದ ಜೋಶಿ, ಶೋಭಾ ಕರಂದ್ಲಾಜೆ ಹೇಳಿಕೆ ವಿರುದ್ಧ ಕಿಡಿ ಕಾರಿದ ಸಚಿವರು, ಭವಿಷ್ಯ ನುಡಿಯಲು ಇವರೇನು ಜ್ಯೋತಿಷಿಗಳಾ?. ಕೇಂದ್ರದ ಸಚಿವರು ರಾಜ್ಯಪಾಲರ ಮೇಲೆ ಒತ್ತಡ ತರುವುದು ಜನರಿಗೆ ಗೊತ್ತಾಗುವುದಿಲ್ಲವೇ? ಎಂದರು.ಕಾಂಗ್ರೆಸ್ ಪ್ರತಿಭಟನೆ ವೇಳೆ ಮೈಸೂರಿನಲ್ಲಿ ಸೇರಿದ ಜನ ನೋಡಿಯಾದರೂ ರಾಜ್ಯಪಾಲರು ತಮ್ಮ ನಿಲುವು ಬದಲಾಯಿಸಿಕೊಳ್ಳಬೇಕಿತ್ತು ಎಂದರು.
ಜು.26ರಂದು ರಾಜ್ಯಪಾಲರಿಗೆ ದೂರು ನೀಡಲಾಗುತ್ತದೆ. ಆವಾಗಲೇ ನಮ್ಮಿಂದ ಉತ್ತರ ಹೋಗಿದೆ. ಅದೇ ರಾತ್ರಿ ತರಾತುರಿಯಲ್ಲಿ ಸಿದ್ದರಾಮಯ್ಯಗೆ ರಾಜ್ಯಪಾಲರು ಶೋಕಾಸ್ ನೋಟಿಸ್ ಕೊಡುತ್ತಾರೆ. ರಾಜ್ಯಪಾಲರಿಗೆ ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಮುರುಗೇಶ ನಿರಾಣಿ ಅವರ ವಿರುದ್ಧದ ಪ್ರಕರಣಗಳು ಗಮನಕ್ಕೆ ಬರಲಿಲ್ಲವೇ ಎಂದು ಅವರು ಪ್ರಶ್ನಿಸಿದರು.ಸಿದ್ದರಾಮಯ್ಯ ಅವರನ್ನು ಗುರಿ ಮಾಡಲಾಗುತ್ತಿದೆ. ನಾವು ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ. ಎಲ್ಲ ಸಚಿವರು ಹಾಗೂ ಶಾಸಕರು ಸಿದ್ದರಾಮಯ್ಯ ಅವರಿಗೆ ಬೆಂಬಲವಾಗಿ ನಿಂತಿದ್ದೇವೆ ಎಂದರು.